ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣಪತ್ರ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಿಸುವ ವಿಶೇಷ ಸೇವೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದರು. ಇದೇ ವೇಳೆ ಶಾಶ್ವತ ನಿವಾಸ ಪ್ರಮಾಣಪತ್ರ ಸೇವೆಯ ವೆಬ್‌ಸೈಟ್ ಹಾಗೂ ವಾಟ್ಸ್‌ಆ್ಯಪ್ ಸೇವೆಯನ್ನೂ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಿಮ್ಮ ಮತ ನಿಮ್ಮ ಹಕ್ಕು, ನಿಮ್ಮ ಮತ ನಿಮ್ಮ ಬದುಕು; ಇದಕ್ಕೆ ನಮ್ಮ ಸರ್ಕಾರ ಗ್ಯಾರಂಟಿ” ಎಂದು ಹೇಳಿ, ರಾಜ್ಯದ ಪ್ರತಿಯೊಬ್ಬರಿಗೂ ಅಗತ್ಯ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸಿ ಅವರ ಹಕ್ಕುಗಳನ್ನು ಸಂರಕ್ಷಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಭಾರತದಲ್ಲೇ ಮೊದಲ ಬಾರಿಗೆ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ಉಚಿತವಾಗಿ ಮನೆ ಮನೆಗೆ ತೆರಳಿ ವಿತರಿಸುವ ಐತಿಹಾಸಿಕ ಅಭಿಯಾನವನ್ನು ಕರ್ನಾಟಕ ಸರ್ಕಾರ ಆರಂಭಿಸಿದೆ. ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಮಾನ್ಯಗೊಳಿಸಿರುವ 11 ದಾಖಲೆಗಳಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರವೂ ಒಂದಾಗಿದ್ದು, ಈ ಸೇವೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ರಾಜ್ಯದ 4.85 ಕೋಟಿ ಕುಟುಂಬಗಳಿಗೆ ಅಗತ್ಯ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯ ಕೈಗೊಂಡಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಈ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಅಗತ್ಯ ಪ್ರಮಾಣಪತ್ರಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ. ಈ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಪಕ್ಷಾತೀತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಶಾಶ್ವತ ನಿವಾಸ ಪ್ರಮಾಣಪತ್ರಕ್ಕಾಗಿ ಆನ್‌ಲೈನ್, ಸೇವಾ ಕೇಂದ್ರಗಳು ಹಾಗೂ ಹೋಬಳಿ ಮಟ್ಟದಲ್ಲಿ ತೆರೆಯಲಾಗಿರುವ ಫೆಸಿಲಿಟೇಶನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ನೀಡುವ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಐದು ಗ್ಯಾರಂಟಿ ಯೋಜನೆಗಳ ಜತೆಗೆ ಜನರ ಮತದಾನದ ಹಕ್ಕು ಬಲಪಡಿಸುವ ಉದ್ದೇಶದಿಂದಲೂ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜನರ ಗುರುತು ಮತ್ತು ಹಕ್ಕು ಅತ್ಯಂತ ಮಹತ್ವದ್ದಾಗಿದ್ದು, ಗುರುತಿನ ದಾಖಲೆಗಳಿದ್ದಾಗ ಮಾತ್ರ ಜನರು ತಮ್ಮ ಹಕ್ಕುಗಳನ್ನು ಸಮರ್ಪಕವಾಗಿ ಚಲಾಯಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲೂ ಇಂತಹ ದಾಖಲೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: ಬಾಕಿ ಭರವಸೆಗಳ ಈಡೇರಿಕೆಗೆ ಆಗ್ರಹ: ಆ.5ರವರೆಗೆ ರಾಜ್ಯಾದ್ಯಂತ KRMO ಅಭಿಯಾನ
ಜನರು ಸರ್ಕಾರಿ ಕಚೇರಿಗಳಿಗೆ ಅಲೆಯದಂತೆ ಸರ್ಕಾರವೇ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಮೂಲಕ ಆಡಳಿತವನ್ನು ಜನಸ್ನೇಹಿಯಾಗಿಸುವ ಪ್ರಯತ್ನ ನಡೆಸಲಾಗಿದೆ. ಇದು ಆಡಳಿತ ವ್ಯವಸ್ಥೆಯಲ್ಲೇ ಐತಿಹಾಸಿಕ ಹೆಜ್ಜೆಯಾಗಿದೆ ಎಂದರು.
ಈ ಯೋಜನೆ ಯಶಸ್ವಿಯಾಗಲು ಶ್ರಮಿಸುತ್ತಿರುವ ಗ್ರಾಮ ಲೆಕ್ಕಿಗರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ ಅವರು, ಜನರು ನೀಡಲಾಗುವ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ಸುರಕ್ಷಿತವಾಗಿ ಸಂರಕ್ಷಿಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮನೀಶ್ ಮೌದ್ಗಿಲ್, ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





