"ಸೌಜನ್ಯ ಕೊಲೆಗಾರರ ಪತ್ತೆಗೆ ನಡೆಸುತ್ತಿರುವ ಹೋರಾಟದ ದಾರಿ ತಪ್ಪಿಸುವ ದುರುದ್ದೇಶದಿಂದ ಸೌಜನ್ಯ ಕೊಲೆಗಾರರು ಸ್ನೇಹಮಯಿಯನ್ನು ಮೈಸೂರಿನಿಂದ ಕರೆತಂದಿರುವ ಸಂಶಯವಿರುತ್ತದೆ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಪ್ರಚಾರ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ದೂರು ನೀಡಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ನಿವಾಸಿ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ವೆಂಕಪ್ಪ ಕೋಟ್ಯಾನ್ ದೂರು ದಾಖಲಿಸಿದ್ದಾರೆ.
ಮೈಸೂರಿನ ನಿವಾಸಿಯಾಗಿರುವ ಸ್ನೇಹಮಯಿಯನ್ನು ‘ಸೌಜನ್ಯ ಕೊಲೆಗಾರರೇ ಧರ್ಮಸ್ಥಳಕ್ಕೆ ಕರೆಸಿ’ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
“ಉಜಿರೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸೌಜನ್ಯ, ಧರ್ಮಸ್ಥಳದ ಸ್ನಾನಘಟ್ಟದ ಬಳಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಅಪಹರಣಕ್ಕೆ ಒಳಗಾಗಿದ್ದರು. ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ 13 ವರ್ಷಗಳಾಯಿತು. ನೈಜ ಆರೋಪಿಗಳ ಪತ್ತೆಗಾಗಿ ಸೌಜನ್ಯ ಕುಟುಂಬದವರೊಂದಿಗೆ ಹೋರಾಟ ಮಾಡುತ್ತಿದ್ದೇವೆ. ತನಿಖಾ ಸಂಸ್ಥೆಗಳಿಂದ ಬಂಧನಕ್ಕೆ ಒಳಪಟ್ಟು, ಆರೋಪ ಪಟ್ಟಿ ಎದುರಿಸಿದ ಸಂತೋಷ್ ರಾವ್ ನಿರಪರಾಧಿ ಎಂದು ಗೊತ್ತಾಗಿದೆ. ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಪಾತ್ರವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ನೈಜ ಆರೋಪಿಗಳ ಪತ್ತೆ ಮಾಡುವಂತೆ ಸೌಜನ್ಯರ ತಾಯಿ ಕುಸುಮಾವತಿ ಅವರೊಂದಿಗೆ ನಾವು ಸಾಕಷ್ಟು ಹೋರಾಟ ನಡೆಸುತ್ತಿದ್ದೇವೆ. ಇದರ ನಡುವೆ ಮೈಸೂರಿನಿಂದ ಬಂದ ಸ್ನೇಹಮಯಿ ಕೃಷ್ಣ, ಯಾರದೋ ಚಿತಾವಣೆಯ ಮೇರೆಗೆ ವರ್ತಿಸುತ್ತಿದ್ದಾರೆ” ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ: ಸಾಕ್ಷಿದಾರ ಪ್ರದೀಪ್ ಹೇಳಿಕೆ ಕೋರ್ಟ್‌ನಲ್ಲಿ ದಾಖಲು
“ಸೌಜನ್ಯಳನ್ನು ಆಕೆಯ ಮಾವ ವಿಠ್ಠಲ ಗೌಡ ಅವರೇ ಕೊಲೆ ಮಾಡಿರುವುದಾಗಿ ಸ್ನೇಹಮಯಿ ಕೃಷ್ಣ ಸುಳ್ಳು ಆರೋಪ ಮಾಡಿ, ದಿನಾಂಕ 08-09-2025 ರಂದು ದೂರನ್ನೂ ನೀಡಿ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಆ ಮೂಲಕ ನಮ್ಮ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಸೌಜನ್ಯ ಕೊಲೆಗಾರರ ಪತ್ತೆಗೆ ನಡೆಸುತ್ತಿರುವ ಹೋರಾಟದ ದಾರಿ ತಪ್ಪಿಸುವ ದುರುದ್ದೇಶದಿಂದ ಸೌಜನ್ಯ ಕೊಲೆಗಾರರು ಸ್ನೇಹಮಯಿಯನ್ನು ಮೈಸೂರಿನಿಂದ ಕರೆತಂದಿರುವ ಸಂಶಯವಿರುತ್ತದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
“ಸ್ನೇಹಮಯಿ ಸುಳ್ಳು ಆರೋಪ ಮಾಡಿರುವುದರ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಸುಳ್ಳು ದೂರು ನೀಡಲು ಸ್ನೇಹಮಯಿಯನ್ನು ಪ್ರೇರೇಪಿಸಿದವರ ಪತ್ತೆ ಮಾಡಬೇಕು. ವಿಠ್ಠಲ ಗೌಡರಿಗೆ ಹಾಗೂ ಹೋರಾಟಗಾರರಿಗೆ ಅವಮಾನ ಮಾಡಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಲಾಗಿದೆ.
