ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂಗಳು) ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತಾಂತ್ರಿಕ ಆಡಿಟ್ ಜೊತೆಗೆ ನ್ಯಾಯಾಂಗ, ಶೈಕ್ಷಣಿಕ ಮತ್ತು ಕೈಗಾರಿಕಾ ಮೇಲ್ವಿಚಾರಣೆಯಲ್ಲಿ ನೈತಿಕ ಹ್ಯಾಕಥಾನ್ ನಡೆಸಲು ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ.
ಹಾರ್ಡ್ವೇರ್ ಮತ್ತು ಫರ್ಮ್ವೇರ್ನಿಂದ ಚಿಹ್ನೆ-ಲೋಡಿಂಗ್, ಸಂಗ್ರಹಣೆ, ಚಲನೆ ಮತ್ತು ಎಣಿಕೆ ಪ್ರಕ್ರಿಯೆಗಳವರೆಗೆ ಸಂಪೂರ್ಣ ಇವಿಎಂ-ವಿವಿಪ್ಯಾಟ್ ಪ್ರಕ್ರಿಯೆಗಳನ್ನು ಸಂಸ್ಥೆಯ ನೇತೃತ್ವದಲ್ಲಿ ಪಾರದರ್ಶಕ ಮೌಲ್ಯಮಾಪನ ಮಾಡುವಂತೆ ಕೋರಿ ಅವರು 2024ರ ಡಿ.3ರಂದು ಭಾರತೀಯ ಚುನಾವಣಾ ಆಯೋಗದ ಮುಂದೆ ಅಧಿಕೃತ ಪ್ರಸ್ತಾವನೆಯನ್ನು ಪ್ರಿಯಾಂಕ್ ಖರ್ಗೆ ಮಂಡಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಿಜೆ ಬ್ಯಾನ್ನಿಂದ ಕಲೆಗೆ ಪ್ರೋತ್ಸಾಹ, ಕೋಮು ಉದ್ವಿಗ್ನತೆಗೆ ಕಡಿವಾಣ
ಆ ಪ್ರಸ್ತಾವನೆಯ ಆಧಾರದ ಮೇಲೆ, ಪ್ರಿಯಾಂಕ್ ಖರ್ಗೆ ಸೆ.6ರಂದು ಪತ್ರವೊಂದನ್ನು ಹೊರಡಿಸಿ, ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತು ರಾಜ್ಯ ಸರಕಾರವು ಪ್ರಮುಖ ಸಂಸ್ಥೆಗಳು (ಐಐಎಸ್ಸಿ, ಐಐಟಿಗಳು, ಐಐಐಟಿಗಳು) ಮತ್ತು ಹೆಸರಾಂತ ಆರ್ ಅಂಡ್ ಡಿ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಸಮಯಕ್ಕೆ ಸೀಮಿತವಾದ, ಸ್ವತಂತ್ರವಾಗಿ ಮೇಲ್ವಿಚಾರಣೆ ಮಾಡಲಾದ ತಾಂತ್ರಿಕ ಪರಿಶೋಧನೆಯನ್ನು ನಡೆಸಲು ಅನುಮತಿಸುವಂತೆ ಒತ್ತಾಯಿಸಿದ್ದಾರೆ.
‘ವೋಟ್ ಚೋರಿ’ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಬೆಂಗಳೂರಿನ ಮಹದೇವಪುರದಲ್ಲಿ ನಡೆದ ಅಕ್ರಮಗಳು, ಹರಿಯಾಣದ ಪಾಣಿಪತ್ ನಲ್ಲಿ ಇವಿಎಂಗಳ ಮರು ಎಣಿಕೆ ಮತ್ತು ಕಲಬುರಗಿಯ ಆಳಂದದಲ್ಲಿ ನಡೆದ ಮತದಾರರ ಹೆಸರನ್ನು ಕೈಬಿಟ್ಟಿರುವ ವಂಚನೆಯ ಹಿನ್ನೆಲೆಯಲ್ಲಿ ಸಚಿವರು ಈ ಒತ್ತಾಯವನ್ನು ಮಾಡಿದ್ದಾರೆ.
ಈ ಉದ್ದೇಶವು ಪಕ್ಷಪಾತವಲ್ಲ, ಪ್ರಜಾಪ್ರಭುತ್ವದ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸುವುದು ಎಂದು ಪ್ರಿಯಾಂಕ್ ಖರ್ಗೆ ಒತ್ತಿ ಹೇಳಿದ್ದಾರೆ.