ಅಲೆಮಾರಿಗಳ ಶೇ.1 ಮೀಸಲಾತಿಗಾಗಿ ರಾಹುಲ್ ಭೇಟಿಗೆ ನಿರ್ಧಾರ

Date:

Advertisements
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ 49 ಸಮುದಾಯಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಲಾಗಿದೆ.

ಅಸ್ಪೃಶ್ಯ ಅಲೆಮಾರಿಗಳಿಗೆ ನ್ಯಾಯಯುತವಾಗಿ ಸಿಗಬೇಕಿರುವ ಶೇ.1ರಷ್ಟು ಮೀಸಲಾತಿಗಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಮಂಗಳವಾರ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ’ ಆಯೋಜಿಸಿದ್ದ ‘ಸಮಾನ ಮನಸ್ಕರ ಸಭೆ’ಯಲ್ಲಿ ವಿವಿಧ ಸಮುದಾಯಗಳ ಪ್ರಮುಖರು, ಸಾಹಿತಿಗಳು, ಹೋರಾಟಗಾರರು ಭಾಗವಹಿಸಿದ್ದರು.

ಅಲೆಮಾರಿಗಳಿಗೆ ಜಸ್ಟಿಸ್ ಎಚ್.ಎನ್.ನಾಗಮೋಹನ್‌ದಾಸ್‌ ವರದಿಯಲ್ಲಿ ನಿಗದಿಪಡಿಸಿದ್ದ ಶೇ. 1%ರಷ್ಟು ಪ್ರತ್ಯೇಕ ಮೀಸಲಾತಿಯನ್ನು A ಗುಂಪಿನಲ್ಲಿ ಯಥಾವತ್ತು ಜಾರಿಗೊಳಿಸಬೇಕು ಎಂದು ಸಭೆಯು ಸರ್ವಾನುಮತದಿಂದ ಒತ್ತಾಯಿಸಿದೆ. ತೆಲಂಗಾಣದ ಮಾದರಿಯಲ್ಲಿ ಮೀಸಲಾತಿ ಬಿಂದುವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.

“ಶೇ.‌1%ರಷ್ಟು ಮೀಸಲಾತಿ ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳು ಸಹ ನಮ್ಮ ಹಕ್ಕು. ಹಾಗಾಗಿ ಅದನ್ನೂ ಅಸ್ಪೃಶ್ಯ ಅಲೆಮಾರಿ ಸಮುದಾಯ ಗಟ್ಟಿಯಾಗಿ ಒತ್ತಾಯಿಸುತ್ತದೆ” ಎಂದು ಸಭೆ ನಿರ್ಣಯಿಸಿದೆ.

ಇದನ್ನೂ ಓದಿರಿ: ಒಳಮೀಸಲಾತಿ : ‘ಎಕೆ, ಎಡಿ, ಎಎ’ ಸಮಸ್ಯೆ ಜೀವಂತ ಉಳಿಸಿದ ರಾಜ್ಯ ಸರ್ಕಾರ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮವನ್ನು ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ 49 ಸಮುದಾಯಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಬೇಕು. ಇತರೆ ಸಮುದಾಯಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.

ಮೀಸಲು ಪ್ರಮಾಣವನ್ನು ಶೇ 5.5ರಂತೆ ಎರಡೂ ಕಡೆಯವರಿಗೆ ನೀಡಿ, ಉಳಿಕೆ ಶೇ 1ರಷ್ಟನ್ನು ಅಲೆಮಾರಿಗಳಿಗೆ, ಇನ್ನೂ ಶೇ. 1ರಷ್ಟನ್ನು ಉಳಿದ 29 ಜಾತಿಗಳಿಗೆ ಹಂಚುವ ಸೂತ್ರವನ್ನು ರೂಪಿಸುವುದು ಒಳ್ಳೆಯದು ಎನ್ನುವ ಸಲಹೆಗೂ ಸಹಮತ ವ್ಯಕ್ತವಾಯಿತು.

‘ಮೂರು ದಶಕದ ನಿರಂತರ ಹೋರಾಟದ ನಂತರ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿ ಮಾಡಿದ್ದು ಸ್ವಾಗತಾರ್ಹ. ಆದರೆ, ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲು ಕೊಟ್ಟಿದ್ದರೆ ಎಲ್ಲರಿಗೂ ಸಮಾಧಾನವಾಗುತ್ತಿತ್ತು. ಸರ್ಕಾರದ ಸೌಲಭ್ಯದಿಂದ ವಂಚಿತ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲು ಸಿಗದೇ ಇದ್ದರೆ ಈಗಿನ ಪ್ರಯತ್ನಕ್ಕೆ ಗೌರವ ಬರುವುದಿಲ್ಲ. ಪಕ್ಷಾತೀತವಾಗಿ ಹೋರಾಟ ರೂಪಿಸಿ ಅವರಿಗೂ ನ್ಯಾಯ ಕಲ್ಪಿಸೋಣ’ ಎಂದು ಹಲವರು ಸಲಹೆ ನೀಡಿದರು.

ಇದನ್ನೂ ಓದಿರಿ: ತಮ್ಮ ಯೋಗ್ಯತೆಗೆ ತಕ್ಕಂತೆ ಕೆಲವರು ಟೀಕೆ ಮಾಡುತ್ತಾರೆ: ಬಾನು ಮುಷ್ತಾಕ್

‘ಸದ್ಯವೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡೋಣ. ರಾಹುಲ್ ಗಾಂಧಿ ಅವರಿಗೂ ಪರಿಸ್ಥಿತಿ ಮನವರಿಕೆ ಮಾಡಿಕೊಡೋಣ. ಕಾನೂನು ಹೋರಾಟವನ್ನೂ ಮಾಡೋಣ. ಜನಾಭಿಪ್ರಾಯ ರೂಪಿಸುತ್ತಲೇ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಿಲ್ಲಿಸದಿರೋಣ’ ಎಂದು ಕೆಲವರು ಅಭಿಪ್ರಾಯ ಸೂಚಿಸಿದರು.

ಈ ಸಭೆಯ ಅಧ್ಯಕ್ಷತೆಯನ್ನು ಒಳಮೀಸಲಾತಿ ಹೋರಾಟಗಾರ ಎಸ್‌.ಮಾರೆಪ್ಪ ವಹಿಸಿದ್ದರು. ಸಭೆಯಲ್ಲಿ ಪ್ರೊ. ರಹಮತ್‌ ತರೀಕೆರೆ, ರಾಜಪ್ಪ ದಳವಾಯಿ, ಪ್ರೊ. ನಿರಂಜನರಾಧ್ಯ, ಶಿವಸುಂದರ್‌, ಡಾ. ವಾಸು ಹೆಚ್.‌ ವಿ, ಬಸವರಾಜ್‌ ಕೌತಾಳ್‌, ಅಂಬಣ್ಣ ಅರೋಲಿಕರ್‌, ಪ್ರೊ. ಎ. ಎಸ್‌. ಪ್ರಭಾಕರ್‌, ಡಾ. ಕೆ. ಷರೀಫಾ, ಬಹುಜನ ವೆಂಕಟೇಶ್‌, ದಾಸನೂರು ಕೂಸಣ್ಣ, ವಿನಯ್‌ ಶ್ರೀನಿವಾಸ್‌, ಮೈತ್ರೇಯಿ, ಡಾ. ಹುಲಿಕುಂಟೆ ಮೂರ್ತಿ, ಜಿ.ಬಿ ಪಾಟೀಲ್‌, ಪ್ರೊ. ಬಿ.ಸಿ. ಬಸವರಾಜ್‌, ಡಾ. ಟಿ. ಗೋವಿಂದರಾಜ್‌, ಪ್ರೊ. ಟಿ. ಯಲ್ಲಪ್ಪ, ದಯಾನಂದ, ಕೆಸ್ತಾರ ವಿ.ಮೌರ್ಯ, ಡಿ. ಟಿ ವೆಂಕಟೇಶ್‌, ಬಿ.ಶ್ರೀಪಾದ್‌ ಭಟ್‌, ಲೇಖಾ ಅಡವಿ, ನಾರಾಯಣ್ ಕ್ಯಾಸಂಬಳ್ಳಿ, ಪ್ರೊ. ನಾರಾಯಣಸ್ವಾಮಿ, ಕೆ.ವಿ ಭಟ್‌, ಕೆ. ಪಿ. ಲಕ್ಷ್ಮಣ್‌, ವಿ.ಎಲ್‌. ನರಸಿಂಹಮೂರ್ತಿ, ಹೆಚ್.ಕೆ. ಶ್ವೇತಾರಾಣಿ, ಮುತ್ತುರಾಜು, ವಿಕಾಸ್‌ ಆರ್‌. ಮೌರ್ಯ, ಚಂದ್ರು ತರಹುಣಿಸೆ, ಅಶ್ವಿನಿ ಬೋದ್‌, ಭರತ್‌ ಡಿಂಗ್ರಿ, ಕೋಡಿಹಳ್ಳಿ ಚಂದ್ರು, ವೇಣುಗೋಪಾಲ್‌ ಮೌರ್ಯ, ಮಹೇಶ್‌, ಸರೋವರ್‌ ಬೆಂಕಿಕೆರೆ ಮತ್ತಿತರರು ಭಾಗವಹಿಸಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆಗುಂಡಿ ಬಗ್ಗೆ ಸಾರ್ವಜನಿಕರು ಮಾಹಿತಿ‌ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಮಾತ್ರ: ಡಿಸಿಎಂ ಡಿ ಕೆ ಶಿವಕುಮಾರ್

ರಸ್ತೆಗುಂಡಿಗಳನ್ನು ಸಾರ್ವಜನಿಕಕರು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

Download Eedina App Android / iOS

X