ಪರಿಶಿಷ್ಟ ಜಾತಿಯೊಳಗೆ (ಎಸ್‌ಸಿ) ಒಳಮೀಸಲಾತಿ ಜಾರಿ ಮಾಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನಗೊಂಡಿರುವ ಹೋರಾಟಗಾರರು, ಇದೇ ತಿಂಗಳ 10ರಂದು ಸಚಿವ ಎಚ್ ಸಿ ಮಹದೇವಪ್ಪ ಅವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಒಳಮೀಸಲಾತಿ ಹೋರಾಟಗಾರರು, “ಕರ್ನಾಟಕ ರಾಜ್ಯದ ಹಿಂದುಳಿದವರ ನಾಯಕ, ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ವಾರಸುದಾರರೆಂದು ಬಿಂಬಿಸಿಕೊಳ್ಳುತ್ತಿರುವ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಮಾನ್ಯ ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಲು ಒಲ್ಲದ ಮನಸ್ಸಿನಿಂದ ಮೂರು ತಿಂಗಳು ತಡವಾಗಿ 13 ನವೆಂಬರ್ 2024ರಂದು ಸಚಿವ ಸಂಪುಟದಲ್ಲಿ ಒಪ್ಪಿಕೊಂಡಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ಹೆಚ್ ಎನ್ ನಾಗಮೋಹನ್ ದಾಸ್ ಏಕಸದಸ್ಯ ಆಯೋಗ ರಚನೆಗೊಂಡು ಅತ್ಯಂತ ಪಾರದರ್ಶಕತೆಯಿಂದ ಕೂಡಿದ, ಯಾವ ಸಮುದಾಯಗಳಿಗೂ ಅನ್ಯಾಯವಾಗದಂತೆ, ಪರಿಶಿಷ್ಠ ಜಾತಿಗಳನ್ನು 5 ಪ್ರವರ್ಗಗಳನ್ನಾಗಿ ಮಾಡಿ 04 ಜುಲೈ 2025ರಂದು ತನ್ನ ಏಳು ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿತು. ಪರಿಶಿಷ್ಟ ಜಾತಿಗಳ ಮೀಸಲಾತಿಯ ಸಿಂಹಪಾಲನ್ನು ಪಡೆದಿರುವ ರಾಜಕೀಯವಾಗಿ, ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಬಲಾಢ್ಯ ಸಮುದಾಯಗಳ ವಿರೋಧಕ್ಕೆ ಹೆದರಿ, ಸರ್ಕಾರ ಮತ್ತೆ ಮೌನವಹಿಸಿತು” ಎಂದು ಬೇಸರ ಹೊರಹಾಕಿದ್ದಾರೆ.
“ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರದ ವಿಳಂಬ ದೋರಣೆಯನ್ನು ಖಂಡಿಸಿ, ಹೆಚ್.ಎನ್.ನಾಗಮೋಹನ್ ದಾಸ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಲು 11 ಆಗಸ್ಟ್ 2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಳಮೀಸಲಾತಿ ಹೋರಾಟ ಆರಂಭಿಸಲಾಗಿತ್ತು. ಅದರ ಪರಿಣಾಮ, 19 ಆಗಸ್ಟ್ 2025 ರಂದು ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸುಗಳ 6 ಪ್ರವರ್ಗಗಳ ಬದಲಾಗಿ 3 ಪ್ರವರ್ಗಗಳನ್ನಾಗಿ ಮಾರ್ಪಡಿಸಿ, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. 20 ಆಗಸ್ಟ್ 2025ರಂದು ಮಳೆಗಾಲದ ಅಧಿವೇಶನದಲ್ಲಿ ಆದೇಶವನ್ನು ಪ್ರಕಟಿಸಿತು” ಎಂದು ಮಾಹಿತಿ ನೀಡಿದರು.
“ಅಲೆಮಾರಿ ಸಮುದಾಯಗಳನ್ನು ರಾಜಕೀಯವಾಗಿ ಬಲಾಢ್ಯರಾದ ಪ್ರವರ್ಗ-ಸಿಗೆ ಸೇರಿಸಿ ಕಳೆದ 79 ವರ್ಷಗಳಿಂದ ಅವರಿಗಾದ ಅನ್ಯಾಯವನ್ನು ಮತ್ತೆ ಮುಂದುವರೆಯಲು ಬೀದಿಪಾಲು ಮಾಡಲಾಯಿತು. ಕೊನೆಗೆ ಪರಿಶಿಷ್ಠ ಜಾತಿಗಳನ್ನು 3 ಪ್ರವರ್ಗಗಳನ್ನಾಗಿ ಮಾಡಿ ಪ್ರವರ್ಗ-ಎ ಗೆ ಶೇ.6, ಪ್ರವರ್ಗ- ಬಿಗೆ ಶೇ6, ಪ್ರವರ್ಗ-ಸಿಗೆ 5 ಎಂದು ಶೇ. 17 ಮೀಸಲಾತಿಯನ್ನು ಹಂಚಿಕೆ ಮಾಡಲಾಯಿತು. ದುಡಿದವನು ಕಳಕೊಂಡ, ದುಡಿಯಲಾರದವ ಎಲ್ಲ ಪಡಕೊಂಡ ಎನ್ನುವಂತೆ ಪ್ರವರ್ಗ-ಬಿ ಶೇ. 5 ಬದಲಾಗಿ ಶೇ. 6, ಪ್ರವರ್ಗ-ಸಿ ಶೇ. 4ರ ಬದಲಾಗಿ ಶೇ.5 ಹೆಚ್ಚಿನ ಒಳಮೀಸಲಾತಿ ಪಡೆದವು. ಅತ್ಯಂತ ಹಿಂದುಳಿದ ಸಮುದಾಯವೆಂದು ಪ್ರವರ್ಗ-ಎ ಸಮುದಾಯಗಳನ್ನು ಸರ್ಕಾರವೇ ಗುರುತಿಸಿದ್ದರೂ, ಸಾಮಾಜಿಕ ನ್ಯಾಯದ ತತ್ವದಂತೆ ಶೇ.7 ಮೀಸಲಾತಿಯಿಂದ ವಂಚಿತಗೊಂಡಿತು. ಒಳಮೀಸಲಾತಿ ಎಂದರೆ ಕೇವಲ ತಲೆ ಎಣಿಕೆಯಲ್ಲ. ಚಾರಿತ್ರಿಕವಾಗಿ ಅಸಮಾನತೆಗೆ ಗುರಿಯಾದ ಸೌಲಭ್ಯ ವಂಚಿತರಿಗೆ ಅಲ್ಪಪ್ರಮಾಣದ ಹೆಚ್ಚುವರಿ ಪರಿಹಾರವನ್ನು ಹರಿಯಾಣ ರಾಜ್ಯದ ಮಾದರಿಯಲ್ಲಿ ಹಂಚಿಕೆ ಮಾಡಲು ಸರ್ಕಾರ ವಿಫಲವಾಯಿತು” ಎಂದು ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ಯಾರಾ-2 ಕ್ಕೆ ತಿದ್ದುಪಡಿ ಮಾಡಬೇಕು
“ಒಳಮೀಸಲಾತಿ ಸಂಬಂಧ ದಿನಾಂಕ: 25 ಆಗಸ್ಟ್ 2025 ರ ಸರ್ಕಾರದ ಆದೇಶ ಹೆಬ್ಬಂಡೆಯಂತೆ ಪ್ರವರ್ಗ-ಎ ಸಮುದಾಯಗಳ ಮೇಲೆ ಬಿದ್ದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಾರದಂತೆ ಕುಯುಕ್ತಿ, ಸಂಚಿನಿಂದ ಕೂಡಿದ ಪ್ಯಾರಾ-2 ತೆಗೆಯಬೇಕು” ಎಂದು ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಮುಖಂಡರು ಆಗ್ರಹಿಸಿದರು.
“ಏಕೆಂದರೆ, ಆಯೋಗದ ವರದಿಯಲ್ಲಿನ ಪ್ರವರ್ಗ-ಇ ರಲ್ಲಿನ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಈ ಮೂರು ಸಮುದಾಯಗಳು ತಮ್ಮ ಮೂಲ ಜಾತಿಯನ್ನು ತಿಳಿಸದೇ ಇರುವುದರಿಂದ ಸದರಿ ಮೂರು ಜಾತಿಗಳು ಅನುಬಂಧಗಳಲ್ಲಿರುವ ಪ್ರವರ್ಗ-ಎ ಅಥವಾ ಬಿ ಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದು ಎದು ಹೇಳಲಾಗಿದೆ. ಪ್ಯಾರಾ-2ನೇ ಶಿಫಾರಸ್ಸಿನಂತೆ ಒಳಮೀಸಲಾತಿ ಜಾರಿಯಾದರೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ನೆಪದಲ್ಲಿ ಪ್ರವರ್ಗ-ಬಿ ಮೆರಿಟ್ ಅಭ್ಯರ್ಥಿಗಳು ಪ್ರವರ್ಗ-ಎ ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಕಡಿಮೆ ಮೆರಿಟ್ ಇರುವ ಮಾದಿಗ ಸಮುದಾಯಗಳೊಂದಿಗೆ ಸ್ಪರ್ಧಿಸಿ ಮೇಲುಗೈ ಪಡೆಯುವುದರಿಂದ ನಿಜವಾದ ಮಾದಿಗ ಸಮುದಾಯಗಳ ಅಭ್ಯರ್ಥಿಗಳಿಗೆ ಮತ್ತೊಮ್ಮೆ ನೇಮಕಾತಿಗಳಲ್ಲಿ ಹಿನ್ನಡೆಯಾಗುವ ಸಂಭವ ಹೆಚ್ಚಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಪ್ರವರ್ಗ-ಎ ಅಭ್ಯರ್ಥಿಗಳಾದ ಮಾದಿಗ ಸಮುದಾಯದ ಅಭ್ಯರ್ಥಿಗಳು, ಸಹಜವಾಗಿ ಕಡಿಮೆ ಮೆರಿಟ್‌ನವರಾಗಿದ್ದು, ಪ್ರವರ್ಗ-ಬಿ ಸಮುದಾಯಗಳು ಅಧಿಕ ಮೆರಿಟ್ ಹೊಂದಿರುವುದರಿಂದ ಪ್ರತ್ಯೇಕವಾಗಿ ಐತಿಹಾಸಿಕವಾಗಿ ಒಳಮೀಸಲಾತಿ ಹೋರಾಟ ನಡೆಯುತ್ತಿದೆ ಎನ್ನುವುದನ್ನು ಮರೆಯದಿರೋಣ. ಆದ್ದರಿಂದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಪ್ರಮಾಣ ಪತ್ರಗಳಿರುವ ಹೊಲೆಯರು, ಮಾದಿಗರು, ಇನ್ನಿತರರು ತಮ್ಮ ಮೂಲ ಜಾತಿ ಪ್ರಮಾಣ ಪತ್ರ ಅಧಾರದಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಯಲ್ಲಿ ಒಳಮೀಸಲಾತಿ ಪಡೆಯಲು ಸರ್ಕಾರ ಆದೇಶಿಸಬೇಕು” ಎಂದು ಒತ್ತಾಯಿಸಿದರು.
ಸಚಿವರು ಮತ್ತು ಅಧಿಕಾರಿಗಳಿಂದ ಒಳಮೀಸಲಾತಿ ಜಾರಿಗೆ ಅಡ್ಡಿ
“25-08-2025 ರಂದು ಸರ್ಕಾರ ಹೊರಡಿಸಿದ ಆದೇಶದ ಒಳಸಂಚನ್ನು ವಿಫಲಗೊಳಿಸಲು ಒಳಮೀಸಲಾತಿ ಹೋರಾಟಗಾರರು ಪ್ರಯತ್ನಗಳು ನಡೆಸುತ್ತಿರುವಾಗಲೇ, ಸಮಾಜ ಕಲ್ಯಾಣ ಇಲಾಖೆ ಸಚಿವರು, ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಮಣಿವಣ್ಣನ್, ಆಯುಕ್ತರಾದ ರಾಕೇಶ್ ಕುಮಾರ್, ಸಲಹೆಗಾರರಾದ ವೆಂಕಟಯ್ಯ ಅವರು ಸರ್ಕಾರದಿಂದ ಬಂದ ಕಡತಕ್ಕೆ ಒಪ್ಪಿಗೆ ಸೂಚಿಸಲು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಒಳಮೀಸಲಾತಿ ಆದೇಶವು ಕೇವಲ ನೇರ ನೇಮಕಾತಿಗೆ ಮಾತ್ರ ಅನ್ವಯಿಸುತ್ತದೆ, ಬಡ್ತಿ ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಅನ್ವಯಿಸುವುದಿಲ್ಲವೆಂದು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ನೇರ ನೇಮಕಾತಿ, ಬಡ್ತಿ ನೇಮಕಾತಿ ರೋಸ್ಟರ್ ಬಿಂದುಗಳಿಗೆ ಸಂಬಂಧಿಸಿದ ಕರ್ನಾಟಕ ರಾಜ್ಯದ ಆದೇಶಗಳನ್ನು ಉಲ್ಲಂಘಿಸಿ ಸರ್ಕಾರವನ್ನು ದಾರಿತಪ್ಪಿಸುತ್ತಿದ್ದಾರೆ. ಸರ್ಕಾರ ಆದೇಶದ ಪ್ಯಾರಾ-2ನ್ನು ತಯಾರಿಸಿದವರೂ ಇವರೇ ಆಗಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
“ಒಳಮೀಸಲಾತಿ ವಿರೋಧಿ ಮನಸ್ಥಿತಿಯ ಅವರ ಮಾತು, ನಡವಳಿಕೆಗಳು ಒಳಮೀಸಲಾತಿ ಹೋರಾಟಗಾರರ ಎದುರು ಗುಡುಗುತ್ತಿದ್ದಾರೆ ಎಂದು ಅರ್ಥೈಯಿಸಿಕೊಳ್ಳಬೇಕು. ಇವರ‍್ಯಾರು ಸಾರ್ವಜನಿಕ ಸೇವಕರಾಗಲು ಯೋಗ್ಯರಲ್ಲ. ಇಲಾಖೆಯಲ್ಲಿ ಇವರು ಇರುವ ತನಕ ಒಳಮೀಸಲಾತಿ ಕುತ್ತಿಗೆ ಕೊಯ್ಯುವುದಷ್ಟೆ ಅಲ್ಲ, ಮಾದಿಗ ಸಂಬಂಧಿತ ಸಮುದಾಯಗಳ ಅಭಿವೃದ್ಧಿಗೂ ಕಂಟಕ ಪ್ರಾಯವಾಗಿದ್ದಾರೆ. ಪರಿಶಿಷ್ಟ ಜಾತಿ ಉಪಯೋಜನೆಯ ಸಾವಿರಾರು ಕೋಟಿ ಹಣವನ್ನು ದುರಪಯೋಗ ಪಡಿಸಿಕೊಂಡು, ರೂ. 11,000/- ಕೋಟಿ ಹಣವನ್ನು ಕಾನೂನು ಬಾಹಿರವಾಗಿ ಗ್ಯಾರಂಟಿ ಯೋಜನೆಗೆ ನೀಡುವುದರ ಮೂಲಕ ಮುಖ್ಯಮಂತ್ರಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ದ್ರೋಹ ಬಗೆದಿದ್ದಾರೆ” ಎಂದು ಗಂಭಿರ ಆರೋಪ ಮಾಡಿದರು.
“ಆದ್ದರಿಂದ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿರೋಧಿಗಳಾದ ಸಮಾಜ ಕಲ್ಯಾಣ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲಾಖೆಯ ಮುಖ್ಯಸ್ಥರನ್ನು ಕೂಡಲೇ ವರ್ಗಾವಣೆ ಮಾಡಿ ನೇರ ನೇಮಕ, ಬಡ್ತಿ, ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿ ಒಳಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ 10 ಅಕ್ಟೋಬರ್ 2025ರಂದು ಸಮಾಜ ಕಲ್ಯಾಣ ಸಚಿವರ ಮನೆಗೆ ಮುತ್ತಿಗೆ ಹಾಕುವ ಹೋರಾಟಕ್ಕೆ ಎಲ್ಲ ಜಿಲ್ಲೆಗಳಿಂದ ಒಳಮೀಸಲಾತಿ ಹೋರಾಟಗಾರರು ಭಾಗವಹಿಸಿ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಳಮೀಸಲಾತಿ ಹೋರಾಟಗಾರರಾದ ಎಸ್.ಮಾರೆಪ್ಪ, ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಚಂದ್ರು ತರಹುಣಿಸೆ, ವೇಣುಗೋಪಾಲ್ ಮೌರ್ಯ, ಮಂಜುನಾಥ್ ಮರಾಟ ಉಪಸ್ಥಿತರಿದ್ದರು.
