“ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ಆಯೋಗದ ವರದಿ ಅನ್ವಯ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯಗಳಿಂದ ಅಕ್ಟೋಬರ್ 2ರಂದು ‘ದೆಹಲಿ ಚಲೋ’ ಹೋರಾಟಕ್ಕೆ ಕರೆ ನೀಡಿಲಾಗಿದ್ದು, ನ್ಯಾಯ ಸಿಗುವವರೆಗೂ ದೆಹಲಿಯಲ್ಲೇ ಪ್ರತಿಭಟನೆ ಮುಂದುವರಿಸುತ್ತೇವೆ” ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಮುಖಂಡರು ತಿಳಿಸಿದರು.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂವಿಧಾನದ ಆಶಯಗಳಿಗೆ ಮತ್ತು ಸುಪ್ರೀಂ ಕೋರ್ಟಿನ ಮಾರ್ಗಸೂಚಿಗೆ, ಡಾ. ನಾಗಮೋಹನ್ ದಾಸ್ ವರದಿಯ ಶಿಫಾರಸುಗಳಿಗೆ ವ್ಯತಿರಿಕ್ತವಾಗಿರುವ ಅಲೆಮಾರಿ ಸಮುದಾಯಗಳಿಗೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಈ ಕೂಡಲೇ ಬದಲಾಯಿಸುವಂತೆ ಸಚಿವ ಸಂಪುಟಕ್ಕೆ ಸೂಚಿಸಬೇಕು. ಅಲೆಮಾರಿ ಸಮುದಾಯಗಳನ್ನು ಪ್ರವರ್ಗ 1ರಲ್ಲಿ ಇರಿಸಿ, ಪ್ರಥಮ ಆದ್ಯತೆಯ ಪ್ರತ್ಯೇಕ ಶೇ.1 ಮೀಸಲಾತಿಯನ್ನು ಜಾರಿ ಮಾಡಬೇಕು” ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ನಮ್ಮ ಬೇಡಿಕೆ ಸಲ್ಲಿಸುತ್ತೇವೆ” ಎಂದರು.
‘ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ಆಯೋಗವನ್ನು ರಚಿಸಬೇಕು, ಈ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು’ ಎಂದು ಆಗ್ರಹಿಸಿದರು.
‘ಬಹುತೇಕ ಎಲ್ಲ ಮೂಲಭೂತ ಹಕ್ಕುಗಳಿಂದ ವಂಚಿಸಲ್ಪಟ್ಟಿರುವ ಅಲೆಮಾರಿ ಸಮುದಾಯಗಳಿಗೆ ಈಗಲಾದರೂ ಸೂಕ್ತ ನೆಲೆ, ಶಿಕ್ಷಣ, ಉದ್ಯೋಗ ಮತ್ತು ಪ್ರಾತಿನಿಧ್ಯವನ್ನು ಒದಗಿಸಲು ತ್ವರಿತಗತಿಯ ಮತ್ತು ಪರಿಣಾಮಕಾರಿಯಾದ ಪ್ಯಾಕೇಜ್ ಅನ್ನು ಘೋಷಿಸಬೇಕು’ ಎಂದು ಹೋರಾಟಗಾರರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ.
‘ಮಾನ್ಯ ಮುಖ್ಯಮಂತ್ರಿಗಳೇ, ನಾವು ದೆಹಲಿಯನ್ನು ಮುಟ್ಟಿ ಬರಲು ಹೋಗುತ್ತಿಲ್ಲ. ಹೈಕಮಾಂಡಿನ ಬಾಗಿಲುಗಳನ್ನು ತಟ್ಟಿ ತೆಗೆಸಲು ಹೊರಟಿದ್ದೇವೆ. ದೆಹಲಿಯಲ್ಲಿ ಮೇಲೆ ಉಲ್ಲೇಖಿಸಿರುವ ನಮ್ಮ ಹಕ್ಕೊತ್ತಾಯಗಳಿಗೆ ಸ್ಪಷ್ಟ ಪರಿಹಾರ ದೊರಕದೆ ನಾವು ಹಿಂತಿರುಗುವುದಿಲ್ಲ. ಕೆಲದಿನ ದೆಹಲಿಯಲ್ಲೇ ಉಳಿಯಬೇಕಾದರೂ, ಎಐಸಿಸಿ ಕಚೇರಿಯ ಮುಂದೆಯೇ ಬೀಡುಬಿಟ್ಟು ನ್ಯಾಯ ಸಿಗುವ ತನಕ ಕಾಯುತ್ತೇವೆ. ಬೀದಿಯ ಮೇಲೆಯೇ ಬದುಕಿದ ಜನಕ್ಕೆ ಇದು ದೊಡ್ಡ ವಿಚಾರವೇ ಅಲ್ಲ ಎಂಬುದು ತಮಗೂ ಗೊತ್ತಿದೆ. ಇತ್ತ ಕರ್ನಾಟಕ ಸರಕಾರವು ತನ್ನ ಈಗಿನ ನಿಲುವನ್ನು ಮತ್ತೊಮ್ಮೆ ಅವಲೋಕನ ಮಾಡಿಕೊಳ್ಳದೆ, ಇದೇ ತೀರ್ಮಾನದಲ್ಲಿ ಮುಂದುವರೆಯಲು ಬಯಸಿದಲ್ಲಿ ಮತ್ತು ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿದಲ್ಲಿ ನಮ್ಮ ಸಂಘಟನೆಯ ಮೂಲಕ ನ್ಯಾಯಾಲಯದ ಮೊರೆ ಹೋಗಿ ಇಡೀ ಒಳಮೀಸಲಾತಿ ಪ್ರಕ್ರಿಯೆಯ ಮೇಲೆ ತಡೆಯಾಜ್ಞೆ ತರುವುದು ಅನಿವಾರ್ಯವಾಗುತ್ತದೆ. ಅಲ್ಲದೆ ಮುಂದಿನ ಚಳಿಗಾಲದ ಅಧಿವೇಶನಕ್ಕೆ ಕರ್ನಾಟಕದ ಸಮಸ್ತ ಅಲೆಮಾರಿ ಸಮುದಾಯಗಳು ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆ. ನಮ್ಮನ್ನು ನಿಷ್ಟುರ ಸ್ವರೂಪದ ಹೋರಾಟಗಳಿಗೆ ತಳ್ಳಬೇಡಿ ಎಂದು ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ’ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ ಲೇಖಕಿಯರ ಸಂಘ | ಪದಾಧಿಕಾರಿಗಳ ರಾಜೀನಾಮೆಗೆ ಕಾರಣವೇನು? ಅಧ್ಯಕ್ಷರು ಏನಂತಾರೆ?