ಧರ್ಮಸ್ಥಳ ಪ್ರಕರಣ ಗಮನಿಸಿದರೆ ಹುಲಿಗೆ ರಕ್ತದ ರುಚಿ ಸಿಕ್ಕಿದೆ. ಮೂರು ವರ್ಷಗಳ ಹಿಂದೆ ಉಡುಪಿ ಕೃಷ್ಣ ಮಠದ ಮೇಲೂ ಇಂತಹ ಆಕ್ರಮಣ ನಡೆದಿತ್ತು. ಇನ್ನು ಸ್ವಲ್ಪ ದಿನ ತಡೆದರೆ ಬೇರೆ ಬೇರೆ ದೇವಸ್ಥಾನಗಳ ಮೇಲೂ ಆಕ್ರಮಣಗಳು ನಡೆಯಬಹುದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದ್ದಾರೆ.
ಉಡುಪಿಯ ಬಿಜೆಪಿ ಜಿಲ್ಲಾ ಕಚೇರಿಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿ, “ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವುದು ವೈಚಾರಿಕ ಆಕ್ರಮಣ. ನಾವು ಇದನ್ನು ಎದುರಿಸಬೇಕಿದೆ. ಇದೆ ನಮ್ಮ ಮುಂದಿರುವ ಸವಾಲು” ಎಂದು ತಿಳಿಸಿದರು.
“ಈಗಾಗಲೇ ವೈಚಾರಿಕವಾಗಿರುವ ವಾಮಪಂಥೀಯರು, ರಾಜಕೀಯ ಶಕ್ತಿಗಳು ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ದಾರೆ. ಈಶ ಆಶ್ರಮದಲ್ಲಿ, ಶನಿ ಶಿಂಗ್ನಾಪುರದಲ್ಲಿ ರಕ್ತದ ರುಚಿ ನೋಡಿದರು. ಧರ್ಮಸ್ಥಳದಲ್ಲೂ ಅದನ್ನೇ ಪ್ರಯತ್ನಿಸುತ್ತಿದ್ದಾರೆ” ಎಂದು ಮಾರ್ಮಿಕವಾಗಿ ನುಡಿದರು.
“ಕುಂಭಮೇಳದ ಬಗ್ಗೆಯೂ ಸಾಕಷ್ಟು ಅಪಪ್ರಚಾರಗಳು ನಡೆದವು. ಆದರೆ ನಂಬಿಕೆ ಗೆದ್ದಿದೆ. ನಮ್ಮ ದೇಶದಲ್ಲಿ ಹಿಂದುತ್ವದ ಬಗ್ಗೆ ಗಟ್ಟಿ ನಂಬಿಕೆ ಇದೆ. ಅಪಪ್ರಚಾರ ಮಾಡಿದಷ್ಟು ಅಲ್ಲಿಗೆ ಹೆಚ್ಚು ಜನರು ಹೋಗಿ ಬಂದರು” ಎಂದರು.
“ಈಗ ನಡೆದಿರುವ ಆಕ್ರಮಣಗಳಿಗೆ ಶಿಕ್ಷೆ ಆಗಬೇಕು. ಜೊತೆಗೆ ನಡೆಯುತ್ತಿರುವ ಅಪಪ್ರಚಾರಗಳಿಗೂ ತಕ್ಕನಾದ ಶಿಕ್ಷೆಯಾಗಲಿ. ದೇಶಕ್ಕೆ, ಸಂಸ್ಕೃತಿಗೆ ಎದುರಾಗುವ ಸವಾಲುಗಳಿಗೆ ನಾವು ಉತ್ತರ ಕೊಡಲು ಸಿದ್ಧ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಸುನಿಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಲಿ, ಗುರುರಾಜ್ ಗಂಟಿಹೊಳೆ ಉಪಸ್ಥಿತರಿದ್ದರು.