ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ರಹಸ್ಯವಾಗಿ ಹೂತುಹಾಕಲಾದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ, ಹೂತುಹಾಕಲಾಗಿರುವ ಶವಗಳ ಅವಶೇಷಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಭೂಮಿಯ ಒಳಭಾಗವನ್ನು ಸಮೀಕ್ಷೆ ಮಾಡುವ ‘ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್’ಗಳ (ಜಿಪಿಆರ್) ಕೃತಕ ಅಭಾವ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ, ಧರ್ಮಸ್ಥಳದಲ್ಲಿ ಸುಮಾರು 22 ವರ್ಷಗಳ ಹಿಂದೆ ಕಾಣೆಯಾಗಿದ್ದಾರೆ ಎಂದು ಹೇಳಲಾಗಿರುವ ಅನನ್ಯಾ ಭಟ್ ಅವರ ತಾಯಿ ಸುಜಾತ ಭಟ್ ಪರ ವಕೀಲರು ಕಳವಳ ವ್ಯಕ್ತಪಡಿಸಿದ್ದಾರೆ.
ಸುಜಾತ ಭಟ್ ಅವರ ವಕೀಲ ಮುಂಜುನಾಥ್ ಎಸ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, “ದೂರು/ಸಾಕ್ಷಿದಾರ ಗುರುತಿಸಿರುವ ಸ್ಥಳಗಳಲ್ಲಿ ಅವಶೇಷಗಳನ್ನು ಗುರುತಿಸಲು ಜಿಪಿಆರ್ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಎಸ್‌ಐಟಿ ಅಧಿಕಾರಿಗಳಿಗೆ ಸುಜಾತ ಭಟ್ ಮನವಿ ಮಾಡಿದ್ದರು. ಈ ಜಿಪಿಆರ್‌ಗಳು ಸಮಗ್ರ ಹಾಗೂ ವೈಜ್ಞಾನಿಕ ತನಿಖೆಗೆ ಅತ್ಯಗತ್ಯ. ಆದರೆ, ತನಿಖೆಗೆ ಜಿಪಿಆರ್‌ಗಳ ಕೃತಕ ಅಭಾವ ಸೃಷ್ಟಿಯಾಗಿದೆ ಎಂಬುದು ತಿಳಿದುಬಂದಿದೆ. ಇದು ಕಳವಳಕಾರಿ” ಎಂದು ಹೇಳಿದ್ದಾರೆ.
‘‘ಭಾರತದಲ್ಲಿ ಜಿಪಿಆರ್ ಸಲಕರಣೆಗಳ ಉತ್ಪಾದನೆ ಮತ್ತು ಪೂರೈಕೆಯನ್ನು ಕೆಲವೇ ಕೆಲವು ಖಾಸಗಿ ಕಂಪೆನಿಗಳು ಮಾಡುತ್ತಿವೆ. ಹಾಗಾಗಿ, ಜಿಪಿಆರ್ ಪೂರೈಕೆ ಸೀಮಿತವಾಗಿದೆ. ಈಗ ಲಭ್ಯವಿರುವ ಜಿಪಿಆರ್‌ಗಳನ್ನು ಅಜ್ಞಾತ ಮತ್ತು ಸ್ಥಾಪಿತ ಹಿತಾಸಕ್ತಿಗಳು ಖರೀದಿಸಿವೆ. ಮಾತ್ರವಲ್ಲದೆ, ಹೆಚ್ಚಿನ ಸಲಕರಣೆಗಳಿಗಾಗಿ ಬೇಡಿಕೆ ಸಲ್ಲಿಸಿವೆ. ಉದ್ದೇಶಪೂರ್ವಕವಾಗಿ ಜಿಪಿಆರ್ ಸಲಕರಣೆಗಳ ಪೂರೈಕೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಯುವತಿಯ ಅಪಹರಣ- ಪ್ರತ್ಯಕ್ಷ ಸಾಕ್ಷಿಯಿಂದ ಎಸ್‌ಐಟಿಗೆ ದೂರು; ಅಲ್ಲಿದ್ದ ಆ ವ್ಯಕ್ತಿ ಯಾರು ಗೊತ್ತೇ?
“ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವಗಳ ಹೊರತೆಯುವ ಕಾರ್ಯಾಚರಣೆಗೆ ಜಿಪಿಆರ್‌ಗಳನ್ನು ನೀಡದಂತೆ ಈ ಕಂಪನಿಗಳಿಗೆ ಸೂಚಿಸಲಾಗಿದೆ ಅಥವಾ ಬೆದರಿಕೆ ಹಾಕಲಾಗಿದೆ. ಈ ಬೆಳವಣಿಗೆಯು ಅತ್ಯಂತ ಅಸಹಜ ಮತ್ತು ಕಳವಳಕಾರಿ. ಧರ್ಮಸ್ಥಳದಲ್ಲಿ ನಡೆಸುತ್ತಿರುವ ತನಿಖೆಗೆ ಜಿಪಿಆರ್‌ಗಳನ್ನು ನೀಡದಂತೆ ಕಂಪನಿಗಳಿಗೆ ಒತ್ತಡ ಹೇರಲಾಗಿದೆಯೇ ಎಂಬುದನ್ನು ಪತ್ತೆಹಚ್ಚಬೇಕಿದೆ” ಎಂದು ಹೇಳಿದ್ದಾರೆ.
ಆದಾಗ್ಯೂ, ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದ ಎಸ್‌ಐಟಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಮಂಜುನಾಥ್ ಶ್ಲಾಘಿಸಿದ್ದಾರೆ.
‘‘ನಾಪತ್ತೆಯಾಗಿರುವ ಹೆಣ್ಣುಮಕ್ಕಳು, ಮಹಿಳೆಯರು ಹಾಗೂ ಪುರುಷರ ಪ್ರಕರಣಗಳ ಹಿಂದಿನ ಸತ್ಯಾಸತ್ಯತೆಯನ್ನು ತಿಳಿಯುವ ಹಕ್ಕು ಕರ್ನಾಟಕ ಮತ್ತು ಭಾರತದ ಜನತೆಗೆ ಇದೆ. ನಾಪತ್ತೆಯಾಗಿರುವವರ ಅವಶೇಷಗಳನ್ನು ಪತ್ತೆಹಚ್ಚಿ ಅವರ ಕಟುಂಬಗಳಿಗೆ ಒಪ್ಪಿಸಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಮಾಡಲು ಜಿಪಿಆರ್ ತಂತ್ರಜ್ಞಾನ ಮುಂತಾದ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ತನಿಖೆ ನಡೆಸಬೇಕು” ಎಂದು ಮನವಿ ಮಾಡಿದ್ದಾರೆ.