ಧರ್ಮಸ್ಥಳದಲ್ಲಿ ಸೌಜನ್ಯ ಮನೆ ರಸ್ತೆಯ ಬಳಿ ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಯುಟ್ಯೂಬರ್‌ಗಳನ್ನು ಭೇಟಿ ಮಾಡಿರುವ ಎಸ್‌ಡಿಪಿಐ ನಿಯೋಗ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಬೆನಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಮುಖಂಡರು ಯೂಟ್ಯೂಬರ್‌ಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, “ಇದೊಂದು ವ್ಯವಸ್ಥಿತವಾದ ಹಲ್ಲೆ. ಮಾಧ್ಯಮದವರು ಸುಳ್ಳನ್ನು ಮಾತ್ರವೇ ಪ್ರಸರಿಸುವ ಈ ಸಂದರ್ಭದಲ್ಲಿ ಕೆಲ ಯೂಟ್ಯೂಬರ್‌ಗಳು ಮುಂದೆ ಬಂದು ಸತ್ಯವನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೂಟ್ಯೂಬರ್‌ಗಳನ್ನು ತಡೆದು ಕ್ಯಾಮೆರಾಗಳನ್ನು ಪುಡಿಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಕಿಡಿಗೇಡಿಗಳ ವಿರುದ್ದ ಹಾಗೂ ಇದರ ಹಿಂದಿರುವ ಸೂತ್ರಧಾರಿಗಳ ಮೇಲೂ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸರಕಾರ ಯಾವುದೇ ರೀತಿಯಲ್ಲಿಯೂ ಬಲಾಢ್ಯರ ಪರವಾಗಿ ನಿಲ್ಲದೆ, ಹಸ್ತಕ್ಷೇಪ ಮಾಡದೆ ನ್ಯಾಯವನ್ನು ಎತ್ತಿ ಹಿಡಿಯಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿರಿ: ಧರ್ಮಸ್ಥಳ | ಯೂಟ್ಯೂಬರ್ಸ್ ಮೇಲೆ ಹಲ್ಲೆ; ಬೆಂಗಳೂರಿನಲ್ಲಿ ಸಮಾನ ಮನಸ್ಕರಿಂದ ಖಂಡನೆ
ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮೂನಿಶ್ ಅಲಿ, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪೂಂಜಾಲ್ ಕಟ್ಟೆ, ಅಬೂಬಕ್ಕರ್ ಮದ್ದ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
