ಸಾರ್ವಜನಿಕ ಸಂಚಾರ ಸಾರಿಗೆ ವ್ಯವಸ್ಥೆಯಲ್ಲಿ ತುರ್ತು ಹೂಡಿಕೆಗಾಗಿ ಆಗ್ರಹಿಸಿ ನಗರದ ಜಲ ವಾಯು ವಿಹಾರ (ಕಮ್ಮನಹಳ್ಳಿ) ಮತ್ತು ಅಗರ ಬಸ್ ನಿಲ್ದಾಣದಲ್ಲಿ ಬಸ್ಸು ಪ್ರಯಾಣಿಕರು, ನಾಗರಿಕರು ಮತ್ತು ವಿವಿಧ ನಾಗರಿಕ ಸೇವಾ ಸಂಸ್ಥೆಗಳ ಸದಸ್ಯರು ‘ಡಬಲ್ ದಿ ಬಸ್’ ಅಭಿಯಾನವನ್ನು ನಡೆಸಿದರು.
ಸೆ.೨೨, ʻವಿಶ್ವ ಕಾರು ಮುಕ್ತ ದಿನʼ ದಂದು, ನಾಗರಿಕರ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ, ಪ್ರಯಾಣಿಕರು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು. ಸುಸ್ಥಿರ ಮತ್ತು ಎಲ್ಲರಿಗೂ ಸಮಾನ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆ ಮಾಡುವಂತೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು. ಮೂರು ದಿನಗಳ ಕಾಲ ನಾಗರಿಕರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ನಡೆದ ಈ ಅಭಿಯಾನವನ್ನು ಬೆಂಗಳೂರು ಸೇರಿದಂತೆ ಮುಂಬೈ, ಚೆನ್ನೈ, ಪುಣೆ ಮುಂತಾದ ಪ್ರಮುಖ ನಗರಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
“ಬೆಂಗಳೂರಿನಲ್ಲಿ ಶೇಕಡಾ 81ರಷ್ಟು ಜನರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬಿಎಂಟಿಸಿ (BMTC) ಬಸ್ಸುಗಳನ್ನು ಬಳಸುತ್ತಾರೆ (ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 42 ಲಕ್ಷಕ್ಕೂ ಹೆಚ್ಚು). ನಗರ ಸಾರಿಗೆ ವ್ಯವಸ್ಥೆ ನಮ್ಮ ನಗರದ ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿದೆ. ಆದರೂ ಪ್ರಯಾಣಿಕರು ದಿನನಿತ್ಯ ಜನರಿಂದ ಕಿಕ್ಕಿರಿದ ಬಸ್ಸುಗಳನ್ನು ಏರಬೇಕಾಗುತ್ತದೆ. ಸರ್ಕಾರ ಬಸ್ಸುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮೂಲಕ ಪ್ರಯಾಣಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ, ಪರಿಸರ-ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಒದಗಿಸಬಹುದುʼʼ ಎಂದು ಹೆಚ್ಎಸ್ಆರ್ ಲೇ ಔಟಿನ ಸಮುದಾಯ ಕಾರ್ಯಪಡೆಯ/ಕಮ್ಯುನಿಟಿ ಟಾಸ್ಕ್ಫೊರ್ಸ್ನ ಸ್ವಯಂಸೇವಕ ಸಚಿನ್ ಪಂಡಿತ್ ಹೇಳಿದರು.
ಹೆಚ್ಚಿನ ವಿವರಗಳಿಗೆ https://doublethebus.in/