ಕಳೆದ ಲೋಕಸಭಾ ಚುನಾವಣೆ ವೇಳೆ ಮಾದಾವರದ ಬಳಿ 4.8 ಕೋಟಿ ಹಣ ಪತ್ತೆಯಾದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಡಾ ಕೆ ಸುಧಾಕರ್ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿದೆ.
ಸುಧಾಕರ್ ಪರ ಪದಾಂಕಿತ ಹಿರಿಯ ವಕೀಲರುಗಳಾದದ ಬಿ.ವಿ.ಆಚಾರ್ಯ, ಬಿ.ಎಲ್.ಆಚಾರ್ಯ ಮತ್ತು ಗೋವಿಂದಪ್ಪ ಪರ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದ್ದರು.
‘ಜಪ್ತಿ ಮಾಡಲಾದ ಹಣ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವುದಕ್ಕಾಗಿ ಸಂಗ್ರಹಿಸಿದ್ದ ಮೊತ್ತ’ ಎಂದು ಹೇಳಲಾಗಿತ್ತು. ಈ ಪುಕಾರುಗಳ ಬೆನ್ನಲ್ಲೇ ಸುಧಾಕರ್ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯ ಜವಾಬ್ದಾರಿ ಹೊತ್ತಿದ್ದ ರಾಜ್ಯ ನೋಡಲ್ ಅಧಿಕಾರಿ ಮುನೀಶ್ ಮೌನ್ಸಿಲ್ ಅವರಿಗೆ ವಾಟ್ಸ್ ಆ್ಯಪ್ ಮೆಸೇಜ್ ಮಾಡಿ, ‘ತಾವು ನನಗೆ ಸಹಾಯ ಮಾಡಿದರೆ ಅಭಾರಿಯಾಗಿರುತ್ತೇನೆ’ ಎಂದು ಕೇಳಿಕೊಂಡಿದ್ದರು.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಚುನಾವಣಾ ಸರ್ವೇಲೆನ್ಸ್ ತಂಡದ ಸದಸ್ಯ ದಶರಥ್ ವಿ.ಕುಂಬಾರ್ ದೂರು ನೀಡಿ, 2024ರ ಸಂಸತ್ ಚುನಾವಣೆ ವೇಳೆ ಏ.25ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಅಧಿಕಾರಿ ಮುನೀಶ್ ಮೌದ್ಗಿಲ್ ಅವರ ಮೊಬೈಲ್‌ಗೆ ಒಂದು ಕಡೆ 10 ಕೋಟಿ ರೂ. ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಇಡಲಾಗಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಮಾದಾವರ ಗ್ರಾಮದ ಗೋವಿಂದಪ್ಪ ಎಂಬುವರ ಮನೆಯಲ್ಲಿ ಚುನಾವಣಾಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾಗ 4.8 ಕೋಟಿ ರೂ. ಜಪ್ತಿ ಮಾಡಲಾಯಿತು ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು, ನೆಲಮಂಗಲ ಜೆಎಂಎಫ್‌ಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಸುಧಾಕರ್ ಹಾಗೂ ಗೋವಿಂದಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
