ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ. 92 ವರ್ಷದ ಜೆಡಿ(ಎಸ್) ವರಿಷ್ಠರಿಗೆ ಜ್ವರ ಕಾಣಿಸಿಕೊಂಡ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಜೆಡಿಎಸ್ ಪಕ್ಷದ ಮಾಧ್ಯಮ ವಕ್ತಾರರೊಬ್ಬರು, “ದೇವೇಗೌಡರು ಸದ್ಯ ಆರಾಮಾಗಿದ್ದಾರೆ. ಉಳಿದ ಮಾಹಿತಿ ಏನೂ ಇಲ್ಲ. ಆತಂಕ ಪಡಬೇಕಿಲ್ಲ” ಎಂದು ಹೇಳಿದರು.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೋಮವಾರ ರಾತ್ರಿ ದಾಖಲಿಸಲಾಗಿದೆ. ದೇವೇಗೌಡರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬಹುತೇಕ ಅವರು ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಹೆಚ್ ಡಿ ದೇವೇಗೌಡ ಅವರಿಗೆ ಚಳಿ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಡಾ ಸುದರ್ಶನ್ ಬಲ್ಲಾಳ್ ರಿಂದ ದೇವೇಗೌಡರಿಗೆ ಚಿಕಿತ್ಸೆ ನಡೆಯುತ್ತಿದೆ. ಮಣಿಪಾಲ್ ಆಸ್ಪತ್ರೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಗಮಿಸಿ, ಆರೋಗ್ಯ ವಿಚಾರಿಸಿದ್ದಾರೆ. ನಾಳೆ ವಾರ್ಡ್‌ಗೆ ಶಿಪ್ಟ್ ಮಾಡುವ ಸಾಧ್ಯತೆ ಇದೆ.
ಹೆಚ್‌ಡಿ ದೇವೇಗೌಡರ ವಯಸ್ಸು 92 ಆಗಿದ್ರೂ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯಸಭಾ ಅಧಿವೇಶನದಲ್ಲಿಯೂ ದೇವೇಗೌಡರು ಭಾಗಿಯಾಗುತ್ತಾರೆ. ಲೋಕಸಭಾ ಚುನಾವಣೆ ಮತ್ತು ಚನ್ನಪಟ್ಟಣ ಉಪ ಚುನಾವಣೆ ಸಂದರ್ಭದಲ್ಲಿಯೂ ದೇವೇಗೌಡರು ಪ್ರಚಾರ ನಡೆಸಿದ್ದರು. ಕಲಬುರಗಿ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಎರಡು ದಿನದಲ್ಲಿ ಹೋಗುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.