ಧರ್ಮಸ್ಥಳದಲ್ಲಿನ ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿಗೃಹಗಳಲ್ಲಿ ಈ ಹಿಂದೆ ಕಂಡುಬಂದ ನಾಲ್ಕು ಅನುಮಾನಾಸ್ಪದ ಸಾವುಗಳಿಗೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ದೂರು ದಾಖಲಿಸಿದ್ದಾರೆ.
ಧರ್ಮಸ್ಥಳದಲ್ಲಾಗಿರುವ ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪ್ರಣಬ್ ಮೊಹಂತಿ ನೇತೃತ್ವದ ಎಸ್ಐಟಿಗೆ ತಿಮರೋಡಿ ದೂರು ಸಲ್ಲಿಸಿದ್ದಾರೆ.
“ನಾನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳನ್ನು ಆಧರಿಸಿ ಈ ದೂರು ಸಲ್ಲಿಸುತ್ತಿದ್ದೇನೆ. 2006ರಿಂದ 2010ರವರೆಗೆ ಧರ್ಮಸ್ಥಳ ದೇವಸ್ಥಾನ ಆಡಳಿತ ನಡೆಸುವ ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ಅನೇಕ ಸಂಶಯಾಸ್ಪದ ಸಾವುಗಳು ಸಂಭವಿಸಿವೆ. ಈ ದೂರು ಅಂತಹ ನಾಲ್ಕು ಅಪರಿಚಿತ ಸಾವುಗಳಿಗೆ ಕುರಿತಾಗಿದೆ. ಪರಿಚಿತ ಶವಗಳನ್ನು ಬೇಕಂತಲೇ ‘ಅನಾಥ ಶವ’ ಎಂದು ಘೋಷಿಸಿ, ತಕ್ಷಣವೇ ಗ್ರಾಮ ಪಂಚಾಯಿತಿ ಮುಖಾಂತರ ಸಮಾಧಿ ಮಾಡಲಾಗಿದೆ. ಇವುಗಳು ಎಲ್ಲ ದೃಷ್ಟಿಯಿಂದ ಸಂಭಾವ್ಯ ಕೊಲೆ ಪ್ರಕರಣಗಳು ಎಂದು ಶಂಕೆ ಮೂಡುತ್ತವೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನಾಲ್ಕು ಪ್ರಕರಣಗಳ ಯುಡಿಆರ್ (ಅನ್ನ್ಯಾಚುರಲ್ ಡೆತ್ ರಿಪೋರ್ಟ್) ಸಂಖ್ಯೆಯನ್ನು ದೂರಿನಲ್ಲಿ ಲಗತ್ತಿಸಿದ್ದಾರೆ. ಗ್ರಾಮ ಪಂಚಾಯಿತಿ ಮೂಲಕ ಶವ ವಿಲೇವಾರಿ ಆಗಿರುವುದಕ್ಕೆ ಸಂಬಂಧಿಸಿದಂತೆ ಪಾವತಿ ವಿವರಗಳನ್ನು ದೂರಿನಲ್ಲಿ ವಿವರಿಸಿದ್ದಾರೆ.
28-02-2006ರಂದು ಗಾಯತ್ರಿ ವಸತಿ ಗೃಹದಲ್ಲಿ ಪತ್ತೆಯಾದ 50-55 ವರ್ಷದ ಅಪರಿಚಿತ ಗಂಡಸಿನ ಶವ (UDR No. 12/2006), 13-04-2006ರಂದು ಶರಾವತಿ ವಸತಿ ಗೃಹದಲ್ಲಿ ಪತ್ತೆಯಾದ ಅಪರಿಚಿತ ಹೆಂಗಸಿನ ಶವ (UDR No 23/2006), 03-08-2007ರಂದು ವೈಶಾಲಿ ವಸತಿ ಗೃಹದಲ್ಲಿ ಸಿಕ್ಕ 30-35 ವರ್ಷದ ಅಪರಿಚಿತ ಗಂಡಸಿನ ಶವ (UDR No. 53/2007), 28-09-2010ರಂದು ಗಾಯತ್ರಿ ವಸತಿ ಗೃಹದಲ್ಲಿ ಸಿಕ್ಕ ಅಪರಿಚಿತ ಗಂಡಸಿನ ಶವ (UDR No. 108/2010) ಪ್ರಕರಣಗಳ ಮರುತನಿಖೆಗೆ ಆಗ್ರಹಿಸಿದ್ದಾರೆ.
“ಎಫ್ಐಆರ್ (IPC 302/306) ದಾಖಲಾಗದೆ ಕೇವಲ ಯುಡಿಆರ್ ಎಂದು ನಮೂದಿಸಿರುವುದು ಸಂಶಯಾಸ್ಪದವಾಗಿದೆ. ಕಾನೂನಿನ ಪ್ರಕಾರ, ಯಾವುದೇ ಸಂಭಾವ್ಯ ಕೊಲೆ/ಆತ್ಮಹತ್ಯೆ ಶಂಕೆ ಮೂಡಿದರೆ ಎಫ್ಐಆರ್ ದಾಖಲಿಸುವುದು ಕಡ್ಡಾಯ. ವಸತಿ ಗೃಹಗಳಲ್ಲಿ ಕಾನೂನಿನ ಪ್ರಕಾರ ಅತಿಥಿ ನೋಂದಣಿ ಪುಸ್ತಕ ಇರಲೇಬೇಕು. ಪ್ರತಿ ಅತಿಥಿಯ ಗುರುತಿನ ಚೀಟಿ, ಹೆಸರು, ವಿಳಾಸ ಮತ್ತು ಸಹಿ ಕಡ್ಡಾಯ. ಈ ಹಿನ್ನೆಲೆಯಲ್ಲಿ, ವಸತಿ ಗೃಹದಲ್ಲಿ ಕೊಠಡಿ ಪಡದ ವ್ಯಕ್ತಿಯನ್ನು ‘ಅಪರಿಚಿತ’ ಎಂದು ದಾಖಲಿಸುವುದು ಕಾನೂನುಬದ್ಧವಾಗಿ ಅಸಾಧ್ಯ. ಆದ್ದರಿಂದ ಅತಿಥಿಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ ಅಥವಾ ದಾಖಲೆಗಳನ್ನು ನಾಶಗೊಳಿಸಲಾಗಿದೆ ಎಂಬ ಗಂಭೀರ ಅನುಮಾನ ಬಲವಾಗುತ್ತದೆ” ಎಂದು ತಿಳಿಸಿದ್ದಾರೆ.
“ನಾಲ್ಕು ಪ್ರಕರಣಗಳನ್ನು (UDR 12/2006, 23/2006, 53/2007, 108/2010) ಆಧರಿಸಿ ಕೊಲೆ ಸೇರಿದಂತೆ ಸೂಕ್ತ ಕಲಂಗಳಡಿ ನಾಲ್ಕು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿ, ವಸತಿ ಗ್ರಹಗಳ ಅತಿಥಿ ನೋಂದಣಿ ಪುಸ್ತಕ, ಸಿಬ್ಬಂದಿಗಳ ಕರ್ತವ್ಯ ಪಟ್ಟಿ, ಪಾವತಿ ವೌಚರ್ಗಳನ್ನು ವಶಕ್ಕೆ ಪಡೆಯಬೇಕು” ಎಂದು ಕೋರಿದ್ದಾರೆ.