‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2: ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಸಂಕಿರಣವು 8 ನಿರ್ಣಯಗಳನ್ನು ಕೈಗೊಂಡಿತು.
“ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶಾಸನಸಭೆಗಳಲ್ಲಿ ಮೀಸಲಾತಿ ಕಲ್ಪಿಸಿರುವುದು ನ್ಯಾಯಕ್ಕೆ ಪೂರಕವಾದ ಕ್ರಮವಾಗಿದೆ. ಅದೇ ರೀತಿ ಹಿಂದುಳಿದ ವರ್ಗಗಳಿಗೂ ಶಾಸನಸಭೆಗಳಲ್ಲಿ ಮೀಸಲಾತಿ ಕಲ್ಪಿಸುವುದು ಅಗತ್ಯವಿದೆ. ಮುಂಬರುವ ಜಾತಿ ಸಮೀಕ್ಷೆಯಲ್ಲಿ ಬರುವ ದತ್ತಾಂಶಗಳನ್ನು ಆಧರಿಸಿ ಆ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ‘ಜಾಗೃತ ಕರ್ನಾಟಕ’ ಆಯೋಜಿಸಿದ್ದ ‘ವಿಚಾರಸಂಕಿರಣ’ ಆಗ್ರಹಿಸಿದೆ.
‘ಕರ್ನಾಟಕ ದಮನಿತ ಹಿಂದುಳಿದ ಸಮುದಾಯಗಳ ಸಂಘಟನೆ’, ‘ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನ’ದ ಸಹಯೋಗದಲ್ಲಿ ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಯು ಬೆಂಗಳೂರಿನ ಗಾಂಧಿಭವನದಲ್ಲಿ ಇಂದು (ಶನಿವಾರ) ಹಮ್ಮಿಕೊಂಡಿದ್ದ ‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2: ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಸಂಕಿರಣವು 8 ನಿರ್ಣಯಗಳನ್ನು ಕೈಗೊಂಡಿತು.
ಶಾಸನಸಭೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರದೆ ಆಗಿರುವ ಅನ್ಯಾಯದ ಕುರಿತು ಕಾರ್ಯಕ್ರಮದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ವಿಚಾರಸಂಕಿರಣದ ನಿರ್ಣಯಗಳು
1. ಕಾಲಕಾಲಕ್ಕೆ ಜಾತಿ ಸಮೀಕ್ಷೆ ನಡೆಯಬೇಕಾದ್ದು ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯಕ್ಕೆ ಪೂರಕ, ಸುಪ್ರೀಂ ಕೋರ್ಟಿನ ತೀರ್ಪು ಮತ್ತು ಕಾಯ್ದೆಯನುಸಾರ ಕಡ್ಡಾಯ. ಕರ್ನಾಟಕ ಸರ್ಕಾರ 2ನೇ ಜಾತಿ ಸಮೀಕ್ಷೆಯನ್ನು ಕೈಗೆತ್ತಿಕೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ.
2. ಜಾತಿ ಸಮೀಕ್ಷೆ ಎನ್ನುವುದು ತಲೆ ಎಣಿಕೆಯಲ್ಲ. ವಿವಿಧ ಸಮುದಾಯಗಳು ಆಯಾ ಸಂದರ್ಭದಲ್ಲಿ ಯಾವ ಪ್ರಮಾಣದಲ್ಲಿ ಸಾಮಾನ್ಯವಾಗಿ, ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಪ್ರಾತಿನಿಧ್ಯ ಪಡೆದಿದ್ದಾರೆ ಮತ್ತು ವಿವಿಧ ಸೂಚಿಗಳಿಗನುಗುಣವಾಗಿ ಎಷ್ಟು ಮುಂದುವರೆದಿದ್ದಾರೆ ಅಥವಾ ಹಿಂದುಳಿದಿದ್ದಾರೆ ಎಂಬ ಸಮೀಕ್ಷೆ ಇದಾಗಿದೆ. ಜಾತಿ ಸಮೀಕ್ಷೆಯು ದೇಶದ ಅಭಿವೃದ್ಧಿಗೆ ಅತ್ಯಗತ್ಯವಾದ ಕ್ರಮ ಎಂಬುದನ್ನು ನಾವೆಲ್ಲರೂ ಒತ್ತಿ ಹೇಳಬಯಸುತ್ತೇವೆ.
3. ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗವು ಈ ಸಮೀಕ್ಷೆಯನ್ನು ತಡ ಮಾಡದೇ, ಅದೇ ಸಂದರ್ಭದಲ್ಲಿ ಪರಿಣಾಮಕಾರಿಯಾದ ಸಮೀಕ್ಷೆ ನಡೆಸಲು ಅಗತ್ಯವಿರುವಷ್ಟು ಸಮಯವನ್ನು ತೆಗೆದುಕೊಂಡು, ಸಮರ್ಪಕವಾದ ರೀತಿಯಲ್ಲಿ ಈ ಮಹತ್ವದ ಸಮೀಕ್ಷೆಯನ್ನು ನಡೆಸಬೇಕೆಂದು ಆಗ್ರಹಿಸುತ್ತೇವೆ.
4. ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಅವಕಾಶಗಳಲ್ಲಿ ಮೀಸಲಾತಿ ನಿಗದಿಗಾಗಿ ಈ ಸಮೀಕ್ಷೆ ಪೂರಕವಾಗಿರುತ್ತದೆ ಎಂಬುದು ಸರಿ. ಆದರೆ, ಖಾಸಗಿ ವಲಯದಲ್ಲಿ ವಿವಿಧ ಸಮುದಾಯಗಳು ಎಷ್ಟು ಅವಕಾಶ ಪಡೆದುಕೊಂಡಿದ್ದಾರೆ ಮತ್ತು ರಾಜಕೀಯ ಪ್ರಾತಿನಿಧ್ಯವು ಸ್ಥಳೀಯ ಸಂಸ್ಥೆಗಳಾಚೆ, ಶಾಸನಸಭೆಗಳಲ್ಲಿ ಮತ್ತು ಸಹಕಾರಿ ಹಾಗೂ ವಿವಿಧ ವಲಯಗಳಲ್ಲಿ ಎಷ್ಟಿದೆ ಎಂಬುದೂ ಈ ಸಮೀಕ್ಷೆಯಲ್ಲಿ ಒಳಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ.
5. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶಾಸನಸಭೆಗಳಲ್ಲಿ ಮೀಸಲಾತಿ ಕಲ್ಪಿಸಿರುವುದು ನ್ಯಾಯಕ್ಕೆ ಪೂರಕವಾದ ಕ್ರಮವಾಗಿದೆ. ಅದೇ ರೀತಿ ಹಿಂದುಳಿದ ವರ್ಗಗಳಿಗೂ ಶಾಸನಸಭೆಗಳಲ್ಲಿ ಮೀಸಲಾತಿ ಕಲ್ಪಿಸುವುದು ಅಗತ್ಯವಿದೆ. ಮುಂಬರುವ ಜಾತಿ ಸಮೀಕ್ಷೆಯಲ್ಲಿ ಬರುವ ದತ್ತಾಂಶಗಳನ್ನು ಆಧರಿಸಿ ಆ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು.
6. ಖಾಸಗಿ ವಲಯದಲ್ಲೂ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶ ಏರ್ಪಡಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದೆಂಬ ಕುರಿತೂ ಆಯೋಗ, ಸರ್ಕಾರ ಮತ್ತು ಸಮಾಜದ ವಿವಿಧ ವಲಯಗಳು ಚಿಂತಿಸಬೇಕು ಮತ್ತು ಆ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ನಾವು ಭಾವಿಸುತ್ತೇವೆ.
ಇದನ್ನೂ ಓದಿರಿ: ಜಾತಿ ಸಮೀಕ್ಷೆ ಬೇಕೆಂಬ ಕೂಗು ಒಬಿಸಿಗಳ ಒಳಗಿಂದ ಬರಬೇಕು: ಎಲ್.ಕೆ.ಅತೀಕ್
7. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯದೆಲ್ಲೆಡೆ ಶಾಸಕರಿಗೆ, ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ಹಿಂದುಳಿದ ವರ್ಗಗಳ ಆಯೋಗಕ್ಕೆ ಎಲ್ಲಾ ಸಮುದಾಯಗಳ ವತಿಯಿಂದ ಮತ್ತು ಸಮುದಾಯಗಳ ಒಕ್ಕೂಟಗಳ ಕಡೆಯಿಂದ ಮನವಿ ಸಲ್ಲಿಸುವುದು ಮತ್ತು ರಾಜ್ಯದ ಎಲ್ಲೆಡೆ ಈ ನಿಟ್ಟಿನಲ್ಲಿ ವಿಚಾರಗೋಷ್ಠಿಗಳು/ಚಿಂತನ ಸಭೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ನಾವೆಲ್ಲರೂ ತೀರ್ಮಾನಿಸಿದ್ದೇವೆ.
8. ಹಿಂದುಳಿದ ವರ್ಗದೊಳಗೆ ಐಕ್ಯತೆ ಸಾಧಿಸುವುದು, ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಜೊತೆಗೆ ಒಗ್ಗೂಡುವುದು ಹಾಗೂ ಇದುವರೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಅನುಕೂಲ ಪಡೆದುಕೊಂಡಿರುವ ಜಾತಿಗಳಲ್ಲಿರುವ ಸಾಮಾಜಿಕ ನ್ಯಾಯದ ಪರವಾಗಿರುವವರೆಲ್ಲರೂ ಜೊತೆ ಸೇರುವುದು ಇಂದಿನ ಅಗತ್ಯ. ಈಗಾಗಲೇ ಸಾಪೇಕ್ಷವಾಗಿ ಹೆಚ್ಚು ಪಡೆದುಕೊಂಡಿರುವವರು, ಇದುವರೆಗೂ ಪಡೆದುಕೊಂಡಿಲ್ಲದವರಿಗೆ ಒಂದು ಪಾಲು ಹೆಚ್ಚು ಕೊಡುವುದೇ ಸಾಮಾಜಿಕ ನ್ಯಾಯ. ಇದು ಜಾತಿಗಳ ಐಕ್ಯತೆ ಮಾತ್ರವಲ್ಲ, ದಮನಿತ ವರ್ಗಗಳು ಹಾಗೂ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲರೂ ಸಾಮಾಜಿಕ ನ್ಯಾಯಕ್ಕಾಗಿ ಒಂದು ಧ್ರುವವಾಗುವ ಅವಶ್ಯಕ. ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಪ್ರಯತ್ನ ಇರಲಿದೆ.
