ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಅಕ್ಟೋಬರ್ 1ರಿಂದ ನಗದುರಹಿತ ಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷಿ ಸಂಜೀವಿನಿ ಯೋಜನೆ ಇದಾಗಿದೆ. ಈ ಯೋಜನೆಯಡಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ. ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿಯೂ ನಗದು ರಹಿತ ಉಚಿತ ಚಿಕಿತ್ಸೆ ಸಿಗಲಿದೆ.
ಈ ಯೋಜನೆಗಾಗಿ ನೌಕರರ ವೇತನದಿಂದ ಗ್ರೂಪ್‌ಗೆ ಅನುಗುಣವಾಗಿ ಮಾಸಿಕ ವಂತಿಕೆ ಕಡಿತವಾಗಲಿದ್ದು, ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಯೋಜನೆ ಅನುಷ್ಠಾನಗೊಳ್ಳಲಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬಂದ ದಿನಾಂಕದಿಂದ ಪ್ರಸ್ತುತ ಜಾರಿಯಲ್ಲಿರುವ “ಜ್ಯೋತಿ ಸಂಜೀವಿನಿ” ಯೋಜನೆ ಸ್ಥಗಿತಗೊಳ್ಳಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾಸಿಕ ವಂತಿಕೆ ಪಾವತಿ ಹೇಗೆ?
ಈ ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಓಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಈ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ-2ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ (ID)ಗೆ ಜಮಾ ಮಾಡಬೇಕು.
ನೌಕರರ ವರ್ಗವಾರು ವಂತಿಗ ಕಡಿತ ವಿವರ
ಗ್ರೂಪ್ ಎ: 1,000 ರೂ.
ಗ್ರೂಪ್ ಬಿ: 500 ರೂ.
ಗ್ರೂಪ್ ಸಿ: 350 ರೂ.
ಗ್ರೂಪ್ ಡಿ: 250 ರೂ.
ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಕೂಡ ಸರ್ಕಾರಿ ನೌಕರರಾಗಿರುವಲ್ಲಿ ವಂತಿಕೆಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಪಾವತಿಸುವ ಬಗ್ಗೆ ಸಂಬಂಧಪಟ್ಟ ಸರ್ಕಾರಿ ನೌಕರರೇ ತೀರ್ಮಾನಿಸಿ ಸಂಬಂಧಿಸಿದ ಡಿಡಿಓ ರವರಿಗೆ ಮಾಹಿತಿ ನೀಡಬೇಕು.
ತಂದೆ, ತಾಯಿಯ ಮಾಸಿಕ ಆದಾಯ ಮಿತಿ ಹೆಚ್ಚಳ
ಯೋಜನೆಯ ಉದ್ದೇಶಕ್ಕಾಗಿ ಸರ್ಕಾರಿ ನೌಕರನ “ಕುಟುಂಬ” ವ್ಯಾಪ್ತಿಗೆ ಒಳಪಡುವ ತಂದೆ ಮತ್ತು ತಾಯಿಯ ಮಾಸಿಕ ಆದಾಯ ಮಿತಿ ಪರಿಷ್ಕರಣೆ ಮಾಡಲಾಗಿದೆ. “ಕುಟುಂಬ” ಪದವನ್ನು ಮರುವ್ಯಾಖ್ಯಾನಿಸಲಾಗಿದ್ದು, ಸರ್ಕಾರಿ ನೌಕರನ ತಂದೆ ಮತ್ತು ತಾಯಿಯ ಮಾಸಿಕ ಆದಾಯ ಮಿತಿಯನ್ನು ಮಾಸಿಕ ರೂ. 17,000ಕ್ಕೆ ನಿಗದಿಪಡಿಸಲಾಗಿದ್ದು, ಈ ಆದಾಯ ಮಿತಿಯನ್ನು ಪರಿಷ್ಕರಿಸಿ ಮಾಸಿಕ ರೂ. 27,000/- ಗಳಿಗೆ ನಿಗದಿಪಡಿಸಲಾಗಿದೆ.
ಯೋಜನೆಯಡಿ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲದೇ ಸಾರ್ವಜನಿಕ ವಲಯದ ಅಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೂಡ ನಗದುರಹಿತ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು.