2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ವ್ಯಾಪಕ ಪ್ರತಿಭಟನೆಗಳಿಗೆ ಕೊನೆಗೂ ಮಣಿದ ರಾಜ್ಯ ಸರ್ಕಾರ, ಮಂಗಳವಾರ ನೇಮಕಾತಿಗೆ ಸುತ್ತೋಲೆ ಹೊರಡಿಸಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ಸೆಮಿಸ್ಟರ್‌ಗಳು ಪೂರ್ಣಗೊಳ್ಳುವವರೆಗೆ ಕಳೆದ ವರ್ಷದ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಲು ಸರಕಾರ ತೀರ್ಮಾನ ತೆಗೆದುಕೊಂಡಿದೆ. ಅಡ್ವೊಕೇಟ್ ಜನರಲ್ ಕಾನೂನು ಸಲಹೆ ಆಧರಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉನ್ನತ ಶಿಕ್ಷಣ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ.
ಯುಜಿಸಿ ವಿದ್ಯಾರ್ಹತೆ ಕುರಿತ ವಿವಾದದಿಂದ ನೇಮಕಾತಿ ವಿಳಂಬವಾಗಿ, ಎರಡು ತಿಂಗಳಿನಿಂದ ವಿದ್ಯಾರ್ಥಿಗಳು ಪಾಠಗಳಿಂದ ವಂಚಿತರಾಗಿದ್ದರು. ಇದರಿಂದಾಗಿ, 3.5 ಲಕ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತಾತ್ಕಾಲಿಕ ಪರಿಹಾರವೊಂದು ಸಿಕ್ಕಂತಾಗಿದೆ.