ರಾಜ್ಯದಲ್ಲಿ ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಚರ್ಚೆ ಮುನ್ನೆಲೆಯಲ್ಲಿದೆ. ಇದರ ನಡುವೆಯೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆಯ ಇಂಜಿನಿಯರ್ಗಳ ನೇಮಕಾತಿಯಲ್ಲೂ ಬೃಹತ್ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಅಕ್ರಮ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜವಾಬ್ದಾರಿ ಕುರಿತು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಅಕ್ರಮವನ್ನು ಪ್ರಿಯಾಂಕ್ ಖರ್ಗೆ ಅವರೇ ಮಾಡಿದ್ದಾರೆ ಎಂದು ನಾನು ಬೆರಳು ಮಾಡಿ ತೋರಿಸುತ್ತಿಲ್ಲ. ಆದರೆ, ಆರ್ಡಿಪಿಆರ್ ಇಲಾಖೆಯಲ್ಲಿ ನಡೆದ ಈ ಅಕ್ರಮ ಬೆಳವಣಿಗೆಗಳಿಗೆ ಇಲಾಖೆಯ ಅಂದಿನ ಸಚಿವರಾಗಿ ಅವರ ಜವಾಬ್ದಾರಿ ಇಲ್ಲವೇ” ಎಂದು ಕೇಳಿದ್ದಾರೆ.
“ಪರೀಕ್ಷೆ ನಡೆಸುವುದು ಕೆಪಿಎಸ್ಸಿ ಇರಬಹುದು. ಆದರೆ, ನೇಮಕಾತಿ ಆದೇಶ ನೀಡುವುದು ಸರ್ಕಾರ. ಆರ್ಡಿಪಿಆರ್ ಇಲಾಖೆ ಯಾರ ಕೈಯಲ್ಲಿತ್ತು? ಸಚಿವರಿಗೆ ಗೊತ್ತಿಲ್ಲದೆ 24 ಮಂದಿಗೆ ನೇಮಕಾತಿ ಆದೇಶ ಹೇಗೆ ನೀಡಲಾಯಿತು? ಈ ವಿಚಾರ ಪತ್ತೆಹಚ್ಚಲು ಸರ್ಕಾರಕ್ಕೆ ಒಂದೂವರೆ ವರ್ಷ ಬೇಕಾಯಿತೇ” ಎಂದು ಪ್ರಶ್ನಿಸಿದ್ದಾರೆ.
“ಉತ್ತಮ ಉದ್ದೇಶದಿಂದ ಆರಂಭವಾದ ಕೆಪಿಎಸ್ಸಿ ಇಂದು ತನ್ನ ಮೂಲ ಆಶಯದಿಂದಲೇ ದೂರವಾಗಿದೆ. ಸರ್ಕಾರವು ಕೆಪಿಎಸ್ಸಿಗೆ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರನ್ನು ನೇಮಿಸುತ್ತದೆ. ಆದರೆ ಇಂದು ಇಡೀ ಪರೀಕ್ಷಾ ವ್ಯವಸ್ಥೆಯ ಮೇಲೆಯೇ ಸಾಲು ಸಾಲು ಅನುಮಾನಗಳು ಮೂಡಿವೆ. ಅಭ್ಯರ್ಥಿಗಳನ್ನು ರೆಸಾರ್ಟ್ಗಳಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಸರ್ಕಾರ ಈ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
“ಆರ್ಡಿಪಿಆರ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ನೇರ ಭಾಗಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಆದೇಶ ಪತ್ರ ಕೊಟ್ಟದ್ದು ಅವರ ಇಲಾಖೆಯೇ. ಹಾಗಿದ್ದಾಗ ಜವಾಬ್ದಾರಿ ಯಾರದ್ದು? ಇಷ್ಟೆಲ್ಲಾ ಆರೋಪಗಳು ಬಂದ ಮೇಲೆ ಸಚಿವರ ರಾಜೀನಾಮೆ ಪಡೆಯಬೇಕೋ ಬೇಡವೋ ಎಂಬುದನ್ನು ಸರ್ಕಾರವೇ ನಿರ್ಧರಿಸಲಿ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕೆಪಿಎಸ್ಸಿ ಮಾಜಿ ಅಧ್ಯಕ್ಷರನ್ನು ತಾವು ಜೈಲಿನಲ್ಲಿ ಭೇಟಿ ಮಾಡಿದ್ದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಟೀಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ನಾನು ಅವರನ್ನು ಭೇಟಿ ಮಾಡಿದ್ದು ನಿಜ. ಆದರೆ, ನಾನು ಹೋದಾಗ ಅವರು ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಲ್ಲಿ ಇರಲಿಲ್ಲ. ಆ ಅವಧಿಯಲ್ಲಿ ಅವರು 13 ಸಾವಿರ ಅಭ್ಯರ್ಥಿಗಳಿಗೆ ನಯಾಪೈಸೆ ಲಂಚ ಪಡೆಯದೆ ಪ್ರಾಮಾಣಿಕವಾಗಿ ಉದ್ಯೋಗ ನೀಡಿದ್ದರು. ನಮ್ಮ ಮೇಲಿನ ರಾಜಕೀಯ ದ್ವೇಷಕ್ಕೆ ಅವರನ್ನು ಬಲಿ ನೀಡಬೇಡಿ. ಕೆಪಿಎಸ್ಸಿ ಅಧ್ಯಕ್ಷರ ಆಯ್ಕೆ ಗೇಗೆ ನಡೆಯುತ್ತದೆ ಎಂಬುದನ್ನು ನಿಮ್ಮ ತಂದೆಯವರನ್ನೇ ಕೇಳಿ ತಿಳಿದುಕೊಳ್ಳಿ” ಎಂದಿದ್ದಾರೆ.
“ಕೆಎಎಸ್ ಪರೀಕ್ಷಾ ಅಕ್ರಮಗಳನ್ನು ಸಿಐಡಿ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಕೇವಲ ಕಣ್ಣೊರೆಸುವ ತನಿಖೆ ಮಾಡಿ ಪ್ರಕರಣ ಮುಚ್ಚಿಹಾಕುವ ಯತ್ನ ಬೇಡ. 2011ರ ಕೆಎಎಸ್ ಪರೀಕ್ಷೆ ರದ್ದತಿಗೆ ಕಾರಣವೇನು, ಸಿಐಡಿ ತನಿಖೆಯ ಮಧ್ಯಂತರ ವರದಿಯಲ್ಲಿ ಏನಿತ್ತು ಎಂಬುದನ್ನು ಸರ್ಕಾರ ತಕ್ಷಣ ಬಹಿರಂಗಪಡಿಸಲಿ” ಎಂದು ಒತ್ತಾಯಿಸಿದ್ದಾರೆ.




