ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ಆರೋಗ್ಯ ಇಲಾಖೆ ಕೈಗೊಂಡಿರುವ ಕಠಿಣ ಕ್ರಮಗಳು ಮತ್ತೊಮ್ಮೆ ಫಲ ಕೊಟ್ಟಿವೆ. ಕರ್ನಾಟಕ ಆರೋಗ್ಯ ಇಲಾಖೆ ಅಧಿಕಾರಿಗಳು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿ, ಭ್ರೂಣ ಲಿಂಗ ಪತ್ತೆ ಹಾಗೂ ಅಕ್ರಮ ಗರ್ಭಪಾತ ನಡೆಸುತ್ತಿದ್ದ ಏಜೆಂಟ್‌ರನ್ನು ಸೆರೆ ಹಿಡಿದಿದ್ದಾರೆ.
ಇಂದು (ಸೆಪ್ಟೆಂಬರ್ 24) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, “ಭ್ರೂಣ ಹತ್ಯೆ ಒಂದು ಗಂಭೀರ ಸಾಮಾಜಿಕ ಪಿಡುಗು. ಗರ್ಭದಲ್ಲೇ ಹೆಣ್ಣು ಮಗು ಕೊಲ್ಲುವ ಕ್ರೂರ ಮನೋಭಾವವನ್ನು ಸಮಾಜವೇ ತೊಡೆದು ಹಾಕಬೇಕು. ಇಲಾಖೆ ನಿರಂತರವಾಗಿ ಕ್ರಮ ಕೈಗೊಂಡಿದೆ ಮತ್ತು ಇಂತಹ ಅಪರಾಧಿಗಳನ್ನು ಕಟ್ಟುನಿಟ್ಟಾಗಿ ಕಾನೂನಿನ ಮುಂದಿಡಲಾಗುತ್ತದೆ,” ಎಂದು ಎಚ್ಚರಿಸಿದರು.
ಘಟನೆ ಬಯಲಾಗಿದ್ದು ಹೇಗೆ?
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಬಂಡೂರು ಪ್ರದೇಶದ 30 ವರ್ಷದ ಗರ್ಭಿಣಿ ಮಹಿಳೆ — ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿ — ಅಕ್ರಮವಾಗಿ ಲಿಂಗಪರೀಕ್ಷೆ ಮಾಡಿಸಿಕೊಂಡಿದ್ದರು. ಐದು ತಿಂಗಳ ಗರ್ಭಿಣಿಯಾಗಿದ್ದ ಈ ಮಹಿಳೆ, ಆಶಾ ಕಾರ್ಯಕರ್ತೆ ಹಾಗೂ ಸ್ಥಳೀಯ ವೈದ್ಯಾಧಿಕಾರಿಗಳ ದಿನನಿತ್ಯದ ಆರೋಗ್ಯ ತಪಾಸಣೆಯಲ್ಲಿ ದುರ್ಬಲವಾಗಿ ಕಾಣಿಸಿಕೊಂಡರು. ವಿಚಾರಣೆ ವೇಳೆ ಅವರು ಗರ್ಭದಲ್ಲಿರುವ ಮಗು ಹೆಣ್ಣು ಎಂದು ತಿಳಿದು, ಗರ್ಭಪಾತ ಮಾಡಿಸಿಕೊಳ್ಳುವ ಯೋಚನೆ ನಡೆಸಿರುವುದಾಗಿ ಬಹಿರಂಗಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?
ಮಹಿಳೆಯ ಪತಿಗೆ ಅಪರಿಚಿತ ವ್ಯಕ್ತಿಯೊಬ್ಬನು ಆಂಧ್ರಪ್ರದೇಶದಲ್ಲಿ ಲಿಂಗಪರೀಕ್ಷೆ ಮಾಡುವ ಏಜೆಂಟ್‌ರ ಸಂಪರ್ಕ ನೀಡಿದ್ದ. ಆಗಸ್ಟ್ 31ರಂದು ದಂಪತಿ ಆಂಧ್ರದ ಗುಂಟಕಲ್ ಬಸ್ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿ ಸೀತಮ್ಮ ಎಂಬ ಏಜೆಂಟ್ ಗರ್ಭಿಣಿಯನ್ನು ಕರೆದುಕೊಂಡು ಹೋಗಿ ಅಕ್ರಮ ಲಿಂಗಪರೀಕ್ಷೆ ನಡೆಸಿ, 7,000 ರೂ. ಸಂಗ್ರಹಿಸಿದ್ದಾರೆ. ಬಳಿಕ ಗರ್ಭಪಾತ ಬಯಸಿದರೆ 20,000 ರೂ. ಬೇಕು ಎಂದು ತಿಳಿಸಿದ್ದರು. ದಂಪತಿಗಳು ತಕ್ಷಣ ಗರ್ಭಪಾತ ಮಾಡಿಸದೆ ವಾಪಸ್ಸಾದರೂ, ಮುಂದಿನ ದಿನಗಳಲ್ಲಿ ಮರಳಬಹುದು ಎಂದು ಏಜೆಂಟ್‌ಗೆ ತಿಳಿಸಿದ್ದಾರೆ.
ರಹಸ್ಯ ಕಾರ್ಯಾಚರಣೆಯ ರೂಪುರೇಷೆ
ವಿಷಯ ಗಂಭೀರತೆ ಅರಿತು, ಕರ್ನಾಟಕ ರಾಜ್ಯ PCPNDT ನೋಡಲ್ ಅಧಿಕಾರಿ ಡಾ. ವಿವೇಕ್ ದೊರೈ ಮತ್ತು ಅವರ ತಂಡವು, ಆಂಧ್ರಪ್ರದೇಶದ ನೋಡಲ್ ಅಧಿಕಾರಿ ಡಾ. ಕೆ.ವಿ.ಎನ್.ಎಸ್. ಅನಿಲ್ ಕುಮಾರ್ ಅವರ ಸಹಕಾರದಲ್ಲಿ ಸೆಪ್ಟೆಂಬರ್ 21ರಂದು ಡಿಕಾಯ್ ಆಪರೇಶನ್ ರೂಪಿಸಿದರು.
ಹಿಂದಿನ ದಂಪತಿಗೇ ನಕಲಿ ಕಾರ್ಯಾಚರಣೆಗಾಗಿ ಸಹಕರಿಸುವಂತೆ ಕೋರಲಾಯಿತು. ಕಾರ್ಯಾಚರಣೆಯ ದಿನ ದಂಪತಿ 9,000 ರೂ. ನಗದು ಏಜೆಂಟ್‌ಗೆ ಹಸ್ತಾಂತರಿಸಿದರು. ಏಜೆಂಟ್ ಸೀತಮ್ಮರು ಅಲ್ಟ್ರಾಸೌಂಡ್ ಬಳಿಕ 7,500 ರೂ. ಪಡೆದು, ಅದರಲ್ಲಿ 2,000ರೂ. ಔಷಧ ಅಂಗಡಿಗೆ ಪಾವತಿಸಿ, ಉಳಿದ ಹಣವನ್ನು ತಮ್ಮ ಬಳಿ ಇಟ್ಟುಕೊಂಡರು. ತಂಡವು ನೀಡಿದ ನೋಟುಗಳ ಸರಣಿ ಸಂಖ್ಯೆಯನ್ನು ಪರಿಶೀಲಿಸಿ ಪುರಾವೆ ಸಂಗ್ರಹಿಸಿತು.
ಇದೇ ವೇಳೆ, ಗರ್ಭಪಾತ ಮಾಡಲು ಗುಂಟಕಲ್‌ನ ಡಾ. ಬೇಬಿ ಎಂಬ ಆರ್‌ಎಂಪಿ ವೈದ್ಯರನ್ನು ಸಂಪರ್ಕಿಸುವ ವ್ಯವಸ್ಥೆ ಏಜೆಂಟ್ ಮಾಡುತ್ತಿದ್ದುದನ್ನು ಕೂಡ ದಾಖಲಿಸಲಾಯಿತು.
ಸಂಪೂರ್ಣ ಮಾಹಿತಿಯನ್ನು ಹಾಗೂ ಪುರಾವೆಗಳನ್ನು ಆಂಧ್ರಪ್ರದೇಶ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ.
ಸಚಿವರ ಎಚ್ಚರಿಕೆ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, “ಕರ್ನಾಟಕದ ಗಡಿಭಾಗಗಳಲ್ಲಿ ಇಂತಹ ಅಕ್ರಮ ಲಿಂಗಪರೀಕ್ಷೆ ಹಾಗೂ ಭ್ರೂಣ ಹತ್ಯೆಯನ್ನು ತಡೆಯಲು ರಾಜ್ಯಾಂತರ ಮಟ್ಟದಲ್ಲಿ ಕಠಿಣ ನಿಗಾವಳಿ ಮುಂದುವರಿಯಲಿದೆ. ಗರ್ಭಿಣಿಯರಿಗೂ, ಅವರ ಕುಟುಂಬಕ್ಕೂ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಯುತ್ತದೆ. ಹೆಣ್ಣು ಭ್ರೂಣ ಹತ್ಯೆ ಕಾನೂನುಬಾಹಿರ — ಇಂಥ ಕೃತ್ಯ ಮಾಡಿದರೆ ಕಠಿಣ ಶಿಕ್ಷೆ ಅನಿವಾರ್ಯ,” ಎಂದು ಸ್ಪಷ್ಟಪಡಿಸಿದರು.