ದೇಶದಲ್ಲಿ ವಿದ್ಯಾರ್ಥಿ ಸಮುದಾಯದ ಧ್ವನಿ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಎತ್ತಿಹಿಡಿಯಲು “ದೇಶದೆಲ್ಲೆಡೆ ನೂರಾರು ‘ಜಂತರ್ ಮಂತರ್’ ಮಾದರಿಯ ಪ್ರತಿಭಟನಾ ಹಾಗೂ ಸಂವಾದ ಅಂಗಳಗಳು ಅರಳಲಿವೆ” ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಜೆನ್ ಝೀ ರೈಸಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದ ನೇಹಾ ಬೋರಾ, “ದೆಹಲಿಯ ಜಂತರ್ ಮಂತರ್ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಧ್ವನಿ ಎತ್ತುವ ಕೇಂದ್ರವಾಗಿದೆ. ಅದೇ ಮಾದರಿಯಲ್ಲಿ ದೇಶದ ಪ್ರತಿಯೊಂದು ರಾಜ್ಯ ಮತ್ತು ಶೈಕ್ಷಣಿಕ ನಗರಗಳಲ್ಲಿಯೂ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಇಂತಹ ವೇದಿಕೆಗಳನ್ನು ರೂಪಿಸಲಾಗುವುದು” ಎಂದು ನೇಹಾ ಬೋರಾ ಹೇಳಿದರು.
ಇದನ್ನೂ ಓದಿ: ಒಬ್ಬ ಪ್ರಧಾನ್ ಹೋದರೆ ಮತ್ತೊಬ್ಬ ಪ್ರಧಾನ್ ಬರುತ್ತಾರೆ; ಹೋರಾಟ ಮುಗಿದಿಲ್ಲ: ವಿದ್ಯಾರ್ಥಿ ನಾಯಕಿ ನೇಹಾ
“ದೆಹಲಿಯ ಜೆನ್‌ಝೀ, ವಿದ್ಯಾರ್ಥಿಗಳ ಹೋರಾಟಕ್ಕೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ. ಆದರೆ ಅದೇ ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಇದೇ ಜೆನ್ ಝೀ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿಯಿದೆ. ಈ ಕೂಡಲೇ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲೇ ಹೋರಾಟ ನಡೆಸಲಾಗುವುದು” ಎಂದೂ ಎಚ್ಚರಿಕೆ ನೀಡಿದರು.
ಹಾಗೆಯೇ, “ಶಿಕ್ಷಣದ ಖಾಸಗೀಕರಣ ತಡೆಯುವುದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾಯತ್ತತೆ ರಕ್ಷಿಸುವುದು ಹಾಗೂ ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿ ಚಳವಳಿಯನ್ನು ಗಟ್ಟಿಮಾಡಲಾಗುವುದು. ಪ್ರಮುಖ ಶೈಕ್ಷಣಿಕ ಹಾಗೂ ತಂತ್ರಜ್ಞಾನ ಕೇಂದ್ರವಾಗಿರುವ ಬೆಂಗಳೂರಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
“ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವವರು ನಾವೇ. ಅರ್ಥವ್ಯವಸ್ಥೆಯ ನಿರ್ಮಾಣ ಮಾತ್ರವಲ್ಲ, ಜಾಗತಿಕವಾಗಿ ಇತರೆ ದೇಶಗಳನ್ನು ನಮ್ಮ ದೇಶವನ್ನು ನೋಡುವ ರೀತಿ, ದೇಶ ತನ್ನನ್ನು ನಾನು ನೋಡಿಕೊಳ್ಳುವ ರೀತಿಯ ಬಗ್ಗೆ ನಾವೇ ತೀರ್ಮಾನಿಸುತ್ತೇವೆ. ನಾವು ದೇಶದ ಯುವಜನರಿಗೆ ಮಹಾತ್ಮ ಗಾಂಧೀಜಿಯವರನ್ನು ಕೊಂದವರ ಸಿದ್ದಾಂತವು ದೇಶಭಕ್ತಿಯ ಸಿದ್ಧಾಂತವಲ್ಲ. ಬದಲಾಗಿ ಭಗತ್‌ಸಿಂಗ್, ಅಶ್ಲಾಕುಲ್ಲಾ ಖಾನ್ ಖುದಿರಾಮ್ ಬೋಸ್, ಡಾ. ಬಿ.ಆರ್. ಅಂಬೇಡ್ಕರ್ ಅವರ ದೇಶಭಕ್ತಿ ನಿಜವಾಗಿದ್ದು ಎಂಬುದನ್ನು ತಿಳಿಸಿಕೊಡುತ್ತೇವೆ” ಎಂದರು.
“ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ಚರ್ಚೆ ನಡೆಸಿದರೆ, ಚರ್ಚಾಗೋಷ್ಠಿ ನಡೆಸಿದರೆ ಬಿಜೆಪಿ ಯಾಕೆ ಭಯಗೊಳ್ಳುತ್ತದೆ? ಅವರಿಗೆ ಗೋಷ್ಠಿ ಭಯ ಉಂಟು ಮಾಡುವುದಕ್ಕಿಂತ ಹೆಚ್ಚಾಗಿ ನಮ್ಮ ಒಗ್ಗಟ್ಟು ನೋಡಿ ಭಯವಾಗುತ್ತದೆ. ಆ ಕಾರಣಕ್ಕಾಗಿಯೇ ಜೆಎನ್‌ಯು, ಜಾಮೀಯಾ ಮಿಲಿಯಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬಿಜೆಪಿ ಟೀಕಿಸುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲೇ, “ಬಿಜೆಪಿ ವಿರೋಧ ಮಾಡುವ ಇತರೆ ರಾಜಕೀಯ ಪಕ್ಷಗಳು ಬರೀ ಬಾಯಿ ಮಾತಿನಲ್ಲಿ ಫ್ಯಾಸಿಸ್ಟ್ ಸಿದ್ಧಾಂತವನ್ನು ವಿರೋಧಿಸಿದರೆ ಸಾಕಾಗುವುದಿಲ್ಲ. ಅದನ್ನು ಕಾರ್ಯ ರೂಪದಲ್ಲಿ ತೋರಿಸಬೇಕು. ಇಲ್ಲದಿದ್ದರೆ ನಾವು ಬಿಜೆಪಿಗೆ ಕಲಿಸಿದ ಪಾಠವನ್ನೇ ಇತರೆ ಪಕ್ಷಗಳಿಗೂ ಕಲಿಸಬೇಕಾಗುತ್ತದೆ. ಕೊಟ್ಟ ಮಾತನ್ನು ಈಡೇರಿಸದೆ, ಬಿಜೆಪಿಯಂತೆ ಬರೀ ಮಾತುಗಳಿಗೆ ಸೀಮಿತವಾಗಿದ್ದರೆ ರಾಜ್ಯದಲ್ಲಿ ಆಡಳಿತರದಲ್ಲಿರುವ ಕಾಂಗ್ರೆಸ್ ಪಕ್ಷದ ವಿರುದ್ಧವೂ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.




