‘ಜಾತಿ ಸಮೀಕ್ಷೆಯಲ್ಲಿ ಉಪಜಾತಿಗಳನ್ನು ಒಂದೇ ಕಡೆ ಸೇರಿಸಿ’; ಕೆ.ಎನ್.ಲಿಂಗಪ್ಪ ಸಲಹೆ

Date:

Advertisements
'ಇದು ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲವೇ?' ಎಂದು ಗಣತಿದಾರರು ನಿರ್ಲಕ್ಷ್ಯ ತಾಳಿದರೆ ಏನು ಮಾಡುವುದು? ಇದನ್ನು ತಪ್ಪಿಸಬೇಕಾದರೆ ಮುಖ್ಯಮಂತ್ರಿ ಮತ್ತು ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಮಾನಿಟರಿ ಕಮಿಟಿ ರಚಿಸಬೇಕು ಎಂದು ಕೆ.ಎನ್.ಲಿಂಗಪ್ಪ ಅಭಿಪ್ರಾಯಪಟ್ಟರು.

“ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸೆಪ್ಟೆಂಬರ್‌ನಲ್ಲಿ ನಡೆಸುವ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆಯಲ್ಲಿ ಉಪಜಾತಿಗಳನ್ನು ಒಂದು ಕಡೆ ಸೇರಿಸಬೇಕು. ಇಲ್ಲವಾದರೆ ತಮ್ಮ ಜಾತಿಗಳನ್ನು ಸರಿಯಾಗಿ ದಾಖಲಿಸಿಲ್ಲ ಎಂಬ ತಕರಾರುಗಳು ಬರುತ್ತವೆ” ಎಂದು ಆಯೋಗದ ಮಾಜಿ ಸದಸ್ಯರಾದ ಕೆ.ಎನ್.ಲಿಂಗಪ್ಪ ಎಚ್ಚರಿಸಿದರು.

‘ಕರ್ನಾಟಕ ದಮನಿತ ಹಿಂದುಳಿದ ಸಮುದಾಯಗಳ ಸಂಘಟನೆ’, ‘ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನ’ದ ಸಹಯೋಗದಲ್ಲಿ ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಯು ಬೆಂಗಳೂರಿನ ಗಾಂಧಿಭವನದಲ್ಲಿ ಇಂದು (ಶನಿವಾರ) ಹಮ್ಮಿಕೊಂಡಿದ್ದ ‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2: ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಸಂಕಿರಣದ ‘ಜಾತಿ ಸಮೀಕ್ಷೆ ಸಮರ್ಪಕವಾಗಿ ನಡೆಯಲು ಏನು ಮಾಡಬೇಕು?’ ಎಂಬ ವಿಷಯದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪಟ್ಟಿಯಲ್ಲಿ ಜಾತಿಯನ್ನು ಬಿಟ್ಟಿದ್ದರೆ ಅದನ್ನು ಮತ್ತೆ ಪ್ರತ್ಯೇಕವಾಗಿ ಬರೆದುಕೊಂಡು ಬರಬೇಕಾಗುತ್ತದೆ. ಅದಕ್ಕೊಂದು ಕೋಡ್ ನಂಬರ್‌ ಕೊಟ್ಟರೆ ಸಮಸ್ಯೆಯೇ ಇಲ್ಲವಾಗುತ್ತದೆ. ತಮ್ಮ ಅನುಕೂಲಕ್ಕಾಗಿ ವರ್ಣಮಾಲೆ ಕ್ರಮದಲ್ಲಿ (alphabetical order) ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಹೀಗಾಗಿ ಜಾತಿಗಳು ಎಲ್ಲೆಲ್ಲೋ ಚದುರು ಹೋಗಿರುವಂತೆ ಕಾಣುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮಗಳಿವೆ. ಉದಾಹರಣೆ ‘ಎ’ಯಿಂದ ಶುರುವಾದಾಗ ‘ಆಚಾರಿ’ ಎಂಬ ಪ್ರಧಾನ ಜಾತಿಯು ಮೊದಲಿದೆ ಎಂದುಕೊಳ್ಳಿ. ಪ್ರಧಾನ ಜಾತಿಯ ಕೆಳಗೆ ಸಂಬಂಧಪಟ್ಟ ಉಪಜಾತಿಗಳನ್ನು ‘ಎ, ಬಿ, ಸಿ, ಡಿ..’ ಎಂದು ನಮೂದಿಸಿಕೊಳ್ಳಬಹುದು. 26ಕ್ಕಿಂತ ಹೆಚ್ಚು ಉಪಜಾತಿಗಳಿದ್ದರೆ ‘ಎಎ, ಎಬಿ, ಎಸಿ…’ ಎಂದು ದಾಖಲಿಸಬಹುದು. ಆಗ ಉಪಜಾತಿಗಳು ಚದುರಿ ಹೋಗುವುದಿಲ್ಲ ಎಂದು ಸಲಹೆ ನೀಡಿದರು.

ಯಾವ ಮುಖ್ಯಜಾತಿಗೆ ಯಾವ ಉಪಜಾತಿ ಸೇರುತ್ತದೆ ಎಂಬುದು ಆಯೋಗಕ್ಕೆ ಗೊತ್ತಾಗಬೇಕು. ಇದನ್ನು ಮಾಡದಿದ್ದರೆ ನಮ್ಮ ಜಾತಿ ಚದುರು ಹೋಗಿದೆ, ನಮ್ಮ ಜಾತಿಯ ಪೂರ್ಣ ಸಂಖ್ಯೆ ಬಂದಿಲ್ಲ ಎಂಬ ಮತ್ತೆ ತಕರಾರು ತೆಗೆಯುತ್ತಾರೆ ಎಂದು ತಿಳಿಸಿದರು.

ಲಿಂಗಾಯತರನ್ನು ಕೇಳಿದರೆ, ಒಂದು ಕೋಟಿ ಮೂವತ್ತು ಲಕ್ಷ ಇದ್ದೇವೆ ಎನ್ನುತ್ತಾರೆ. ಆದರೆ ಲಿಂಗಾಯತರು 66 ಲಕ್ಷ ಎಂದು ಕಾಂತರಾಜ ಆಯೋಗದ ಜಾತಿ ಸಮೀಕ್ಷೆಯಲ್ಲಿ ದಾಖಲಾಗಿದೆ. ಅದಕ್ಕೆ ಮೂರು ಕಾರಣಗಳಿವೆ. ಲಿಂಗಾಯತ ಗಾಣಿಗರು, ಜಾತಿ ಪ್ರಮಾಣಪತ್ರಕ್ಕಾಗಿ ‘ಗಾಣಿಗ’ ಎಂದು ಬರೆಸಿಕೊಂಡಿದ್ದಾರೆ. ಲಿಂಗಾಯತ ಜಂಗಮರೆಲ್ಲ ಪರಿಶಿಷ್ಟ ಜಾತಿಯ ಪ್ರಮಾಣಪತ್ರಕ್ಕಾಗಿ ‘ಬೇಡ ಜಂಗಮ, ಬೇಡುವ ಜಂಗಮ’ ಎಂದು ದಾಖಲಿಸಿಕೊಂಡಿದ್ದಾರೆ. ಅಂಥವರ ಸಂಖ್ಯೆ 5 ಲಕ್ಷದಷ್ಟು ಇದೆ ಎಂದು ಆಯೋಗ ಗುರುತಿಸಿತ್ತು. ‘ಸಾದರು’ ಸಮುದಾಯವು 2ಎನಲ್ಲಿ ‘ಹಿಂದೂ’ ಸಾದರು ಎಂದು ನಮೂದಿಸಿಕೊಂಡಿದೆ. ಹೀಗಾದಾಗ ಲಿಂಗಾಯತರ ಪೂರ್ಣ ಸಂಖ್ಯೆ ಎಲ್ಲಿ ಸಿಗುತ್ತದೆ? ಎಂದು ಪ್ರಶ್ನಿಸಿದರು.

ಒಳಮೀಸಲಾತಿ ಸಮೀಕ್ಷೆಯ ವೇಳೆ ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಅವರು ಎಚ್ಚರಿಕೆ ವಹಿಸಿದ್ದಾರೆ. ಲಿಂಗಾಯತ ಜಂಗಮರನ್ನು ಬೇಡ ಜಂಗಮರೆಂದು ಪರಿಗಣಿಸಬಾರದು ಎಂದಿದ್ದಾರೆ. ಆದರೂ ಮೂರುವರೆ ಲಕ್ಷ ಜನ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. 1961ರ ಜನಗಣತಿಯನ್ನು ಪರಿಗಣನೆಗೆ ತೆಗೆದುಕೊಂಡು ಜಾತಿಗಳ ಪ್ರಮಾಣ ನೋಡಬೇಕು. ಯಾಕೆಂದರೆ 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿ ಸಮಗ್ರ ಕರ್ನಾಟಕ ರೂಪುಗೊಂಡಿತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬೇಡ ಜಂಗಮರು ಇದ್ದದ್ದು 5141 ಜನರಷ್ಟೇ. ಅದರ ಪ್ರಕಾರ 2011ರವರೆಗೆ ಲೆಕ್ಕಹಾಕಿದರೂ 14,000 ಜನ ದಾಟುವುದಿಲ್ಲ. ದುರಾದೃಷ್ಟವಶಾತ್ ಕಾಂತರಾಜ ಆಯೋಗದ ಸರ್ವೇಯಲ್ಲಿ 9 ಲಕ್ಷ ಬೇಡ ಜಂಗಮರು ಇದ್ದರು ಎಂದು ಆತಂಕ ವ್ಯಕ್ತಪಡಿಸಿದರು.

ಸಮಯಾವಕಾಶ ಕಡಿಮೆ ಇದೆ, ಜಾತಿಗಳ ಪಟ್ಟಿ ಪ್ರಕಟಿಸಿಲ್ಲ ಎಂದು ಆಯೋಗದ ಗಮನಕ್ಕೆ ತಂದಾಗ ಆಗಸ್ಟ್ 22ರಂದು ಪಟ್ಟಿಯನ್ನು ಆಯೋಗ ಬಿಡುಗಡೆ ಮಾಡಿದೆ. ನಾನು ಸದಸ್ಯನಾಗಿದ್ದ ಕಾಂತರಾಜ ಆಯೋಗವು ಗಣತಿ ಮಾಡಿದಾಗ 1821 ಜಾತಿಗಳಿದ್ದವು. ಅಷ್ಟು ಜಾತಿಗಳು ಈಗ ಪಟ್ಟಿಯಲ್ಲಿ ಇಲ್ಲ. ಹತ್ತು ಜನರಿಗಿಂತ ಹೆಚ್ಚು ಜನರಿರುವ ಜಾತಿಗಳನ್ನಷ್ಟೇ ಪರಿಗಣಿಸಿದ್ದೇವೆ ಎನ್ನುತ್ತಿದ್ದಾರೆ. ಮೂರು ಜನ ಇದ್ದರೆ ಅದು ಜಾತಿಯಲ್ಲವೇ? ಅವುಗಳನ್ನೂ ಪಟ್ಟಿಯಲ್ಲಿ ಹಾಕಬೇಕು ಎಂದು ಆಗ್ರಹಿಸಿದರು.

‘ಇದು ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲವೇ?’ ಎಂದು ಗಣತಿದಾರರು ನಿರ್ಲಕ್ಷ್ಯ ತಾಳಿದರೆ ಏನು ಮಾಡುವುದು? ಇದನ್ನು ತಪ್ಪಿಸಬೇಕಾದರೆ ಮುಖ್ಯಮಂತ್ರಿ ಮತ್ತು ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಮಾನಿಟರಿ ಕಮಿಟಿ ರೂಪಿಸಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಒಂದು ಸಮಿತಿ ಆಗಬೇಕು ಮತ್ತು ಪ್ರತಿ ಎರಡು ದಿನಕ್ಕೊಮ್ಮೆ ಸಮೀಕ್ಷೆಯ ಆಗುಹೋಗುಗಳನ್ನು ಪರಿಶೀಲಿಸಬೇಕು. ತಾಲ್ಲೂಕು ಮಟ್ಟದ್ದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಅಭಿಪ್ರಾಯಪಟ್ಟರು.

ಜಾತಿಗಣತಿಗೆ ಅವಸರ ಬೇಕಿಲ್ಲ. ಯಾವುದೇ ಮನೆಯ ವಿವರ ಬಿಟ್ಟುಹೋಗದಂತೆ ಸಮೀಕ್ಷೆ ನಡೆಸಬೇಕು. ಒಂದು ಮನೆಯನ್ನು ಸರಿಯಾಗಿ ಸರ್ವೇ ಮಾಡಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ. ತಾಂತ್ರಿಕ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹೀಗಿದ್ದಾಗ ಆಯೋಗದ ಕೆಲಸ ಸಾಕಷ್ಟಿರುತ್ತದೆ ಎಂದು ತಿಳಿಸಿದರು.

WhatsApp Image 2025 08 30 at 14.30.23
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ಅಡ್ವೊಕೇಟ್ ರಾಜಲಕ್ಷ್ಮಿ ಅಂಕಲಗಿ ಮಾತನಾಡಿದರು

ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಕೋರ್ಟ್ ಅಡ್ವೊಕೇಟ್ ರಾಜಲಕ್ಷ್ಮಿ ಅಂಕಲಗಿಯವರು, “ಹೊಸದಾಗಿ ಜಾತಿಗಳ ಸೇರ್ಪಡೆಗೆ ಸಮಯ ಕೊಟ್ಟಿದ್ದಾರೆ. ಹೊಸದಾಗಿ ಸೇರುವ ಜಾತಿಗಳಿಗೆ ಮೀಸಲಾತಿ ಸೌಲಭ್ಯ ಯಾವಾಗ ದೊರಕುತ್ತದೆ ಎಂಬುದು ಸದ್ಯದ ಪ್ರಶ್ನೆ. ಈಚಿನ ವರ್ಷದಲ್ಲಿ ತಳವಾರ, ಪರಿವಾರಗಳನ್ನು ಸೇರಿಸಲಾಯಿತು. ಆದರೆ ಈ ಜಾತಿಗಳ ಹೆಸರಲ್ಲಿ ಸುಳ್ಳು ಜಾತಿಪ್ರಮಾಣ ಪತ್ರ ಪಡೆಯುತ್ತಿರುವವರು ಹೆಚ್ಚಿದ್ದಾರೆಂಬ ದೂರುಗಳು ಬಂದಿವೆ” ಎಂದರು.

ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆ ಸಂಸ್ಥಾಪಕರಾದ ಜಿ.ಬಿ.ವಿನಯ್‌ಕುಮಾರ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X