ಜಸ್ಟೀಸ್ ಎಚ್.ಎನ್. ನಾಗಮೋಹನ್ ದಾಸ್ ಸಮಿತಿಗೆ ಸಮೀಕ್ಷೆ ಸಮಯದಲ್ಲಿ ತಮ್ಮ ಮೂಲ ಜಾತಿಗಳನ್ನು ಹೇಳಿಕೊಳ್ಳದ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳನ್ನು ಪರಿಶಿಷ್ಟ ಜಾತಿಗಳ (ಎಸ್‌ಸಿ) ಪಟ್ಟಿಯಿಂದ ಕೈಬಿಡುವಂತೆ ‘ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿ’ ಆಗ್ರಹಿಸಿದೆ.
ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ ಒಳಮೀಸಲಾತಿ ಹೋರಾಟ ಸಮಿತಿ ನಿಯೋಗ, “ಎಕೆ, ಎಡಿ, ಎಎ ಗುಂಪಿಗೆ ಮೂಲಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳಲು ಕಂದಾಯ ಇಲಾಖೆ ಆದೇಶ ಹೊರಡಿಸಬೇಕು ಹಾಗೂ ಎಕೆ, ಎಡಿ, ಎಎಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸ್ಸು ಮಾಡಬೇಕು” ಎಂದು ಒತ್ತಾಯಿಸಿದರು.
ಜಸ್ಟೀಸ್ ನಾಗಮೋಹನ್ ದಾಸ್ ವರದಿಯನ್ನು ದಿನಾಂಕ: 25-08-2025ರಂದು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯ ಬಗ್ಗೆ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿಯನ್ನು ಕೂಲಂಕುಶವಾಗಿ ಚರ್ಚಿಸಿ ಕೆಲವು ಮಾರ್ಪಾಡುಗಳೊಂದಿಗೆ ಸದರಿ ವರದಿಯನ್ನು ಸಚಿವ ಸಂಪುಟವು ಕೊಟ್ಟಿರುತ್ತದೆ. ಆದರೆ, ಸರ್ಕಾರದ ಆದೇಶದ ಪ್ಯಾರಾ-2 ಗೊಂದಲದಿಂದ ಕೂಡಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
“ಸರ್ಕಾರದ ಪ್ಯಾರ-2 ರ ಆಯೋಗದ ವರದಿಯಲ್ಲಿನ ಪ್ರವರ್ಗ-ಇ ರಲ್ಲಿನ ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಈ ಮೂರು ಸಮುದಾಯಗಳು ತಮ್ಮ ಮೂಲ ಜಾತಿಯನ್ನು ತಿಳಿಸದೇ ಇರುವುದರಿಂದ ಸದರಿ ಮೂರು ಜಾತಿಗಳು ಅನುಬಂಧಳಲ್ಲಿರುವ ಪ್ರವರ್ಗ-ಎ ಅಥವಾ ಪ್ರವರ್ಗ-ಬಿ ಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದು ಎಂದು ಹೇಳಿದ್ದು, ಎಕೆ. ಎಡಿ, ಎಎ ಯ ವರಿಗೆ ಮೂಲಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳಲು ಕಂದಾಯ ಇಲಾಖೆ ಆದೇಶ ಹೊರಡಿಸಬೇಕು ಹಾಗೂ ಎಕೆ ಎಡಿ ಎಎಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸ್ಸು ಮಾಡಬೇಕು” ಎಂದು ಮುಖ್ಯ ಕಾರ್ಯದರ್ಶಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
“2ನೇ ಶಿಫಾರಸ್ಸು ರಾಜ್ಯದಲ್ಲಿ ಚರ್ಚೆಗೆ ತುಂಬಾ ಗ್ರಾಸವಾಗಿದೆ. ಏಕೆಂದರೆ, 2ನೇ ಶಿಫಾರಸ್ಸಿನಂತೆ ಒಳಮೀಸಲಾತಿ ಜಾರಿಯಾದರೆ ಆದಿಕರ್ನಾಟಕ, ಆದಿ ಆಂಧ್ರ, ಆದಿದ್ರಾವಿಡದ ನೆಪದಲ್ಲಿ ಪ್ರವರ್ಗ-ಬಿ ಮೆರಿಟ್ ಅಭ್ಯರ್ಥಿಗಳು, ಪ್ರವರ್ಗ-ಎ ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಕಡಿಮೆ ಮೆರಿಟ್ ಇರುವ ಮಾದಿಗ ಸಮುದಾಯಳೊಂದಿಗೆ ಸ್ಪರ್ಧಿಸಿ ಮೇಲುಗೈ ಪಡೆಯುವುದರಿಂದ ನಿಜವಾದ ಮಾದಿಗ ಸಮುದಾಯಗಳ ಅಭ್ಯರ್ಥಿಗಳಿಗೆ ಮತ್ತೊಮ್ಮೆ ನೇಮಕಾತಿಗಳಲ್ಲಿ ಹಿನ್ನಡೆಯಾಗುವ ಸಂಭವ ಹೆಚ್ಚಿದೆ” ಎಂದು ಒಳಮೀಸಲಾತಿ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು | ಅಕ್ರಮಗಳನ್ನು ಬಯಲಿಗೆಳೆದ ವ್ಯಕ್ತಿಯನ್ನು ಕಾರು ಹರಿಸಿ ಕೊಂದ ಡಿಎಂಕೆ ನಾಯಕ; ಬಂಧನ
“ಪ್ರವರ್ಗ-ಎ ಅಭ್ಯರ್ಥಿಗಳಾದ ಮಾದಿಗ ಸಮುದಾಯದ ಅಭ್ಯರ್ಥಿಗಳು ಸಹಜವಾಗಿ ಕಡಿಮೆ ಮೆರಿಟ್‌ನವರಾಗಿದ್ದು, ಪ್ರವರ್ಗ-ಬಿ ಸಮುದಾಯಗಳು ಅಧಿಕ ಮೆರಿಟ್ ಹೊಂದಿದವರಾಗಿರುವುದರಿಂದ ಪ್ರತ್ಯೇಕವಾಗಿ ಐತಿಹಾಸಿಕವಾದ ಒಳಮೀಸಲಾತಿ ಹೋರಾಟ ನಡೆಯಿತು. ಒಂದು ವೇಳೆ ದಿನಾಂಕ: 25-08-2025ರ ಆದೇಶ ಅಂತಿಮಗೊಂಡರೆ 30 ವರ್ಷಗಳಿಂದ ಹೋರಾಟ ನಡೆಸಿ ಪಡೆದ ಒಳಮೀಸಲಾತಿ ಸೌಲಭ್ಯವು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುವ ಎಲ್ಲ ಸಂಭವಗಳಿವೆ. ಆದ್ದರಿಂದ ಸರ್ಕಾರಿ ಆದೇಶದ ಪ್ಯಾರಾ-2ನ್ನು ತಿದ್ದುಪಡಿ ಮಾಡಬೇಕಾಗಿದೆ” ಎಂದು ಮನವಿ ಮಾಡಿದ್ದಾರೆ.
“ಪ್ಯಾರ-2 ರ ಆಯೋಗದ ವರದಿಯಲ್ಲಿನ ಪ್ರವರ್ಗ-ಇ ರಲ್ಲಿನ ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಈ ಮೂರು ಸಮುದಾಯಗಳು ತಮ್ಮ ಮೂಲಜಾತಿಯನ್ನು ತಿಳಿಸದೇ ಇರುವುದರಿಂದ ಸದರಿ ಮೂರು ಜಾತಿಗಳು ಸರ್ಕಾರ ಪ್ರವರ್ಗವಾರು ಪ್ರವರ್ಗ-ಎ, ಪ್ರವರ್ಗ-ಬಿ ಅನುಬಂಧಗಳಲ್ಲಿ ಸೂಚಿಸಿರುವಂತೆ ತಮಗೆ ಸಂಬಂಧಿಸಿದ ಮೂಲಜಾತಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯಿಂದ ಕೂಡಲೇ ಪಡೆದುಕೊಂಡು ತಮ್ಮಜಾತಿ ಸಂಬಂಧಿಸಿದ ಪ್ರವರ್ಗದಿಂದ ಮೀಸಲಾತಿ ಸೌಲಭ್ಯವನ್ನು ಪಡೆಯಲು ತಿಳಿಸಬೇಕು” ಎಂದು ಹೋರಾಟಗಾರರು ಮನವಿಯಲ್ಲು ಉಲ್ಲೇಖಿಸಿದ್ದಾರೆ.
ಜೊತೆಗೆ, “ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ನೇಮಕಾತಿ ಅಲ್ಲದೇ ಬಡ್ತಿ ನೇಮಕಾತಿ, ಬ್ಯಾಕ್ಲಾಗ್ ಅನ್ವಯಿಸಿ ರೋಸ್ಟರ್ ಬಿಂದು ಪ್ರಕಟಿಸಬೇಕು” ಎಂದು ನಿಯೋಗ ಮನವಿ ಮಾಡಿದೆ.
“ದಿನಾಂಕ:03-09-2025ರಂದು ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶವು ಕೇವಲ ನೇರನೇಮಕಾತಿಗೆ ಮಾತ್ರ ಅನ್ವಯಿಸುವಂತಹ ತಪ್ಪು ಆದೇಶವಾಗಿದೆ. ಸಂವಿಧಾನದ ಪರಿಚ್ಛೇದ 16ರಂತೆ ಹುದ್ದೆಗಳ ನೇಮಕಾತಿ ಎಂದರೆ, ನೇರನೇಮಕಾತಿ, ಬಡ್ತಿನೇಮಕಾತಿ ಮತ್ತು ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಅನ್ವಯಿಸುತ್ತದೆ. ಆದ್ದರಿಂದ, ಸರ್ಕಾರಿ ಆದೇಶವು ಮತ್ತೊಮ್ಮೆ ತಿದ್ದುಪಡಿ ಮಾಡಿ ಒಳಮೀಸಲಾತಿಯನ್ನು ನೇರನೇಮಕಾತಿ, ಬಡ್ತಿನೇಮಕಾತಿ ಮತ್ತು ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಅನ್ವಯಿಸಿ ಆದೇಶ ಹೊರಡಿಸಬೇಕು” ಎಂದು ಹೇಳಿದ್ದಾರೆ.
“ನೇರ ನೇಮಕಾತಿ ಮತ್ತು ಬಡ್ತಿ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ:04-09-2025ರಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮಣಿವಣ್ಣನ್ ಅವರು, ಸರ್ಕಾರದ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸಿದ ಪತ್ರದಲ್ಲಿ ಪರಿಶಿಷ್ಟ ಜಾತಿ ನೌಕರರಿಗೆ ರೋಸ್ಟರ್ ಬಿಂದುಗಳ ಬಗ್ಗೆ ಈಗ ಸರ್ಕಾರ ನಿಗಧಿಪಡಿಸಿದ ರೋಸ್ಟರ್ ಬಿಂದುಗಳಿಗೆ ಸಂಬಂಧಿಸಿದಂತೆ ತಪ್ಪು ಮತ್ತು ಸರ್ಕಾರವನ್ನು ದಾರಿತಪ್ಪಿಸುವಂತಿದೆ” ಎಂದು ನಿಯೋಗ ಕಳವಳ ವ್ಯಕ್ತಪಡಿಸಿದೆ.
ಪ್ರಮುಖ ಹಕ್ಕೊತ್ತಾಯಗಳು:
- ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಜಾತಿಯವರಿಗೆ ಮೂಲ ಜಾತಿ ಪ್ರಮಾಣಪತ್ರ ತೆಗೆದುಕೊಳ್ಳಲು ಕಂದಾಯ ಇಲಾಖೆ ಆದೇಶ ಹೊರಡಿಸಬೇಕು ಹಾಗೂ ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸ್ಸು ಮಾಡಬೇಕು.
- ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ನೇಮಕಾತಿ ಅಲ್ಲದೇ ಬಡ್ತಿ ನೇಮಕಾತಿ, ಬ್ಯಾಕ್ಲಾಗ್ ಅನ್ವಯಿಸಿ ರೋಸ್ಟರ್ ಬಿಂದು ಪ್ರಕಟಿಸಬೇಕು.
- ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಉನ್ನತ ಅಧಿಕಾರಿಗಳನ್ನು ಬದಲಾಯಿಸಬೇಕು.
- ತೆಲಂಗಾಣ ರಾಜ್ಯ ಹಾಗೂ ಆಂಧ್ರಪ್ರದೇಶದ ಮಾದರಿಯಲ್ಲಿ ಒಳಮೀಸಲಾತಿ ಪ್ರತ್ಯೇಕ ಕಾಯ್ದೆಯನ್ನು ಕೂಡಲೇ ರಚಿಸಬೇಕು.
- ಶಾಶ್ವತ ಆಯೋಗವನ್ನು ಕೂಡಲೇ ರಚಿಸಿ ಆದೇಶ ಹೊರಡಿಸಬೇಕು. ಶಾಶ್ವತ ಆಯೋಗದಲ್ಲಿ ಪರಿಶಿಷ್ಟ ಜಾತಿಗಳ ಎಲ್ಲ ಸಮುದಾಯಗಳ ಪ್ರತಿನಿಧಿಗಳು ಇರಬೇಕು.
ನಿಯೋಗದಲ್ಲಿ ಹಿರಿಯ ಹೋರಾಟಗಾರರಾದ ಎಸ್.ಮಾರೆಪ್ಪ, ಮಾರಸಂದ್ರ ಮುನಿಯಪ್ಪ, ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಶಿವರಾಯ ಅಕ್ಕರಕಿ, ಎಂ. ಶಂಕ್ರಪ್ಪ, ಪಾವಗಡಶ್ರೀರಾಮ್, ಹೇಮರಾಜ್ ಅಸ್ಕಿಹಾಳ, ಕರಿಯಪ್ಪ ಗುಡಿಮನೆ, ವೆಂಕಟೇಶ್ ದೀಪಾಂಜಲಿನಗರ, ವೈ. ಕೆ. ಬಾಲಕೃಷ್ಣ, ಚಂದ್ರ ತರಹುಣಸೆ ಸೇರಿದಂತೆ ಹಲವರು ಇದ್ದರು.
