ಲೈಂಗಿಕ ಕಿರುಕುಳ ತಡೆ (PoSH)ಕಾಯ್ದೆಯಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏಳು ಮಂದಿ ಇರುವ ಆಂತರಿಕ ದೂರು ಸಮಿತಿಯನ್ನು ರಚಿಸಿದೆ. ಸಮಿತಿಯಲ್ಲಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ ನರಸಿಂಹಲು ಉಪಾಧ್ಯಕ್ಷ ಎಂ ಎನ್ ಕುಮಾರ್, ನಿರ್ಮಾಪಕರಾದ ಸಾ ರಾ ಗೋವಿಂದು, ಎಂ ಎನ್ ಸುರೇಶ್, ಬಿ ಎಲ್ ನಾಗರಾಜ್, ಎನ್‌ಜಿಒ ಪ್ರತಿನಿಧಿಯಾಗಿ ಅನ್ನಪೂರ್ಣ ಮತ್ತು ನಿರ್ಮಾಪಕಿ ಅನಿತಾರಾಣಿ ಇದ್ದಾರೆ. ಈ ಪಟ್ಟಿ ನೋಡಿದರೆ ಇದು ಕಾಟಾಚಾರಕ್ಕಷ್ಟೇ ಮಾಡಿರುವ ಸಮಿತಿ ಎಂದು ತಕ್ಷಣಕ್ಕೆ ಅನಿಸುತ್ತದೆ. ಏಳು ಮಂದಿಯ ಸಮಿತಿಯಲ್ಲಿ ಇಬ್ಬರು ಮಹಿಳೆಯರು. ಮಹಿಳೆಯರ ಮೇಲೆ ಪುರುಷರಿಂದಾಗುವ ಲೈಂಗಿಕ ಕಿರುಕುಳದ ದೂರನ್ನು ಪುರುಷರೇ ತುಂಬಿರುವ ಸಮಿತಿಯ ಮುಂದೆ ತೆಗೆದುಕೊಂಡು ಹೋದರೆ ನ್ಯಾಯ ಸಿಗಬಹುದೇ ಎಂಬ ಪ್ರಶ್ನೆ ಸಹಜವಾಗಿಯೇ ಉಂಟಾಗಿದೆ.
ಸೆಪ್ಟಂಬರ್‌ನಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತು ನ್ಯಾ. ಹೇಮಾ ಸಮಿತಿ ವರದಿ ನೀಡಿದ ಬಳಿಕ ಕರ್ನಾಟಕದಲ್ಲಿಯೂ ಅಂತಹ ಸಮಿತಿ ರಚಿಸಬೇಕು ಎಂದು FIRE (ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ) ಸಂಘಟನೆ ಮಹಿಳಾ ಆಯೋಗವನ್ನು ಒತ್ತಾಯಿಸಿತ್ತು. ಮಹಿಳಾ ಆಯೋಗ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಆಂತರಿಕ ದೂರು ಸಮಿತಿ ರಚಿಸುವಂತೆ ಸೂಚಿಸಿತ್ತು. ವಾಣಿಜ್ಯ ಮಂಡಳಿಯಿಂದ ಸೆಪ್ಟೆಂಬರ್ 16ರಂದು ಕಲಾವಿದರ ಸಭೆಯನ್ನು ಕರೆಯಲಾಗಿತ್ತು. ಅಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರೂ ಉಪಸ್ಥಿತರಿದ್ದರು. ಆಂತರಿಕ ದೂರು ಸಮಿತಿ ಬೇಡ, ಇಲ್ಲೇ ಬಂದು ದೂರು ಕೊಡಲಿ ಎಂದು ಅಂದಿನ ಸಭೆಯಲ್ಲಿದ್ದ ನಿರ್ಮಾಪಕ ಸಾ ರಾ ಗೋವಿಂದು ಸೇರಿದಂತೆ ಕೆಲವು ಹಿರಿಯ ನಿರ್ಮಾಪಕರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಸಮಿತಿ ರಚನೆ ಮಾಡುವುದಾಗಿ ಮಂಡಳಿ ತಿಳಿಸಿತ್ತು.
ಅದಾದ ನಂತರ ಡಿಸೆಂಬರ್ 1ರಂದು ನಿರ್ದೇಶಕಿ ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಚೇಂಬರ್ ಆದೇಶ ಹೊರಡಿಸಿತ್ತು. ನಟಿಯರಾದ ಪ್ರಮೀಳಾ ಜೋಷಾಯ್ ಮತ್ತು ಶ್ರುತಿ ಹರಿಹರನ್, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಸಂಯೋಜಕ ಮಲ್ಲು ಕುಂಬಾರ್, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕೆ.ಎಸ್. ವಿಮಲಾ, ಪತ್ರಕರ್ತ ಮುರಳೀಧರ ಖಜಾನೆ, ನಿರ್ಮಾಪಕ ಸಾ.ರಾ.ಗೋವಿಂದ, ನಾಟಕಕಾರ ಶಶಿಕಾಂತ್ ಯಡಹಳ್ಳಿ, ವಕೀಲೆ ರಾಜಲಕ್ಷ್ಮಿ ಅಂಕಲಗಿ, KFCC ಅಧ್ಯಕ್ಷ ಎನ್ ಎಂ ಸುರೇಶ್ ಸದಸ್ಯರ ಪಟ್ಟಿಯಲ್ಲಿದ್ದರು.

ಅದಾಗಿ ಎರಡೇ ದಿನಕ್ಕೆ ಸಮಿತಿಯನ್ನು ತಡೆಹಿಡಿಯಲಾಗಿದೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್ ಹೇಳಿದ್ದರು. ಅದಕ್ಕೆ ಅವರು ಈ ಕಾರಣ ಕೊಟ್ಟಿದ್ದರು. “ನನ್ನ ಅವಧಿ ಮುಗಿಯುತ್ತಿರುವ ಕಾರಣ ಈ ಆದೇಶಕ್ಕೆ ಸಹಿ ಹಾಕುವ ಹಕ್ಕು ನನಗಿಲ್ಲ. ಚುನಾವಣೆ ನಡೆಯುತ್ತಿರುವುದರಿಂದ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವವರೆಗೆ ಕಾಯ್ದು ಆದೇಶ ಹೊರಡಿಸಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದ್ದರು. ಆದರೆ, ಕವಿತಾ ಲಂಕೇಶ್ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲು ಕೆಎಫ್‌ಸಿಸಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಈಗ ಹೊಸ ಮಂಡಳಿ ರಚನೆ ಮಾಡಿರುವ ಸಮಿತಿಯಲ್ಲಿ ಪೋಶ್ ಕಾಯ್ದೆಯ ನಿಯಮ ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮಹಿಳಾ ದೂರು ಸಮಿತಿಯಲ್ಲಿ ಮಹಿಳೆಯರ ಸಂಖ್ಯೆಗಿಂತ ಪುರುಷರ ಸಂಖ್ಯೆಯೇ ಹೆಚ್ಚು ಇದೆ. ಅಷ್ಟೇ ಅಲ್ಲ ನಿಯಮ ಪ್ರಕಾರ ಒಬ್ಬ ವಕೀಲರು ಇರಬೇಕು. ಇಲ್ಲಿ ಒಬ್ಬ ಮಹಿಳಾ ಎಂಜಿಒ ಪ್ರತಿನಿಧಿ ಬಿಟ್ಟರೆ ನಿರ್ಮಾಪಕಿ ಅನಿತಾರಾಣಿ ಎಂಬವರು ಇದ್ದಾರೆ. ಹಿರಿಯ ನಟಿಯರಲ್ಲಿ ಒಬ್ಬರೂ ಸಮಿತಿಯಲ್ಲಿ ಇಲ್ಲ. ಇದು ವಾಣಿಜ್ಯ ಮಂಡಳಿಯ ಬೇಜವಾಬ್ದಾರಿತನ ತೋರಿಸುತ್ತದೆ.
“ಇದು ಹೆಣ್ಣುಮಕ್ಕಳ ದೂರುಗಳನ್ನು ಆಲಿಸಿ ಪರಿಹಾರ ನೀಡಲು ಇರುವ ಸಮಿತಿಯಂತೆ ಕಾಣುತ್ತಿಲ್ಲ. ಮುಚ್ಚಿ ಹಾಕಲೆಂದು ರಚನೆಯಾದ ಸಮಿತಿಯಂತೆ ಕಾಣುತ್ತದೆ” ಎಂದು ನಿರ್ದೇಶಕಿ ಕವಿತಾ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. “ಹಿಂದೆ ರಚನೆಯಾದ ಸಮಿತಿಯ ಎಲ್ಲ ಮಹಿಳೆಯರನ್ನು ಈ ಸಮಿತಿಯಿಂದ ಹೊರಗಿಡಲಾಗಿದೆ. ನನ್ನನ್ನು ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂದು ನಾನು ಬಯಸಿರಲಿಲ್ಲ. ನಿಯಮದ ಪ್ರಕಾರ ದೂರು ಸಮಿತಿ ಇರಬೇಕು ಎಂಬುದಷ್ಟೇ ನಮ್ಮ ಒತ್ತಾಯವಾಗಿತ್ತು” ಎಂದು ಅವರು ಹೇಳಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಬಾಯಿ ಚೌಧರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಬಿಜಾಪುರ ಪ್ರವಾಸದಲ್ಲಿರುವ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಆಪ್ತ ಕಾರ್ಯದರ್ಶಿ ಡಾ. ಎಸ್. ಬಿ. ಲಕ್ಷ್ಮೀಕಾಂತ್ ಅವರು ಈ ದಿನದ ಜೊತೆಗೆ ಮಾತನಾಡಿ, “ನಾವು ಈಗಾಗಲೇ ಈ ಸಮಿತಿಯ ಲೋಪಗಳ ಬಗ್ಗೆ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಸಮಿತಿಯಲ್ಲಿ ಹೆಚ್ಚು ಮಹಿಳೆಯರು ಇರಬೇಕು ಎಂದು ತಿಳಿಸಿದ್ದೇವೆ. ಅವರು ಸರಿಪಡಿಸುವ ಭರವಸೆ ನೀಡಿದ್ದಾರೆ” ಎಂದರು.
ಸಿನಿಮಾದಲ್ಲಿ ನಟಿಸಲೆಂದು ಬರುವ ನಟಿಯರಿಗೆ ಅವಕಾಶ ನೀಡುವ ಆಮಿಷವೊಡ್ಡಿ ತಮ್ಮ ಕಾಮವಾಂಛೆಗೆ ಬಳಸಿಕೊಳ್ಳುವುದನ್ನು ಕಾಸ್ಟಿಂಗ್ ಕೌಚ್ ಎಂದು ಕರೆಯಲಾಗುತ್ತದೆ. ಇದು ಎಲ್ಲಾ ಭಾಷೆಯ ಚಿತ್ರರಂಗ, ಮನರಂಜನಾ ಕ್ಷೇತ್ರಗಳಲ್ಲಿ ಇದೆ ಎಂಬುದು ಬಹಿರಂಗ ಸತ್ಯ. ಕೇರಳದಲ್ಲಿ ಹೇಮಾ ಕಮಿಟಿ ವರದಿ ಬಂದ ನಂತರ ಹಲವು ನಟರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾದವರು. ಅಕ್ಕಪಕ್ಕದ ರಾಜ್ಯಗಳಲ್ಲೂ ನಟಿಯರು ಕಾಸ್ಟಿಂಗ್ ಕೌಚ್ ಆರೋಪ ಮಾಡಿದರು. ಅನೇಕರು ಮಾಧ್ಯಮ ಸಂದರ್ಶನಗಳಲ್ಲಿ ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲ ತಮ್ಮ ರಾಜ್ಯಗಳಲ್ಲೂ ಹೇಮಾ ಕಮಿಟಿ ರೀತಿಯಲ್ಲಿಯೇ ಕಮಿಟಿ ರಚನೆ ಮಾಡಿ ವರದಿ ಸಲ್ಲಿಕೆ ಮಾಡಬೇಕು ಎಂಬ ಬೇಡಿಕೆ ಬಂದಿತ್ತು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಕಮಿಟಿ ರಚಿಸಬೇಕು ಎಂದು ರಾಜ್ಯ ಮಹಿಳಾ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ.