ನಾಗರಿಕ ಸೇವೆಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆ ಸಂಬಂಧ ಪರಿಶಿಷ್ಟ ಜಾತಿಗಳಿಗೆ ಒದಗಿಸಲಾಗಿದ್ದ ಮೀಸಲಾತಿಯನ್ನು ಪುನರ್ ವರ್ಗೀಕರಿಸಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ.
ಈ ಹಿಂದೆ ಒಟ್ಟಾರೆಯಾಗಿ ಶೇಕಡ 17ರಷ್ಟು ಮೀಸಲಾತಿ ಹೊಂದಿದ್ದ ಪರಿಶಿಷ್ಟ ಜಾತಿ(ಎಸ್ಸಿ)ಗಳನ್ನು ಈಗ ಮೂರು ಪ್ರವರ್ಗಗಳಾಗಿ ವಿಂಗಡಿಸಿ, ಅವುಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ನಿಗದಿಪಡಿಸಿದೆ.
ಈ ಹೊಸ ಆದೇಶದ ಪ್ರಕಾರ, ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದ್ದು, ಪ್ರವರ್ಗ-‘ಎ’: ಈ ಪ್ರವರ್ಗಕ್ಕೆ ಶೇಕಡ 6ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಪ್ರವರ್ಗ-‘ಬಿ’: ಈ ಪ್ರವರ್ಗಕ್ಕೆ ಶೇಕಡ 6ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಪ್ರವರ್ಗ-‘ಸಿ’: ಈ ಪ್ರವರ್ಗಕ್ಕೆ ಶೇಕಡ 5ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕೆಂದ ಉಮರ್ ಪರಮ ಪಾತಕಿಯೇ?
ಅದರಂತೆ ಈ ಆದೇಶವು ಈಗಾಗಲೇ ಜಾರಿಯಲ್ಲಿದ್ದ 100-ಪಾಯಿಂಟ್ ರೋಸ್ಟರ್ನಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಲಾಗಿದ್ದ 17 ರೋಸ್ಟರ್ ಪಾಯಿಂಟ್ಗಳನ್ನು ಮಾತ್ರ ಪುನರ್ ವರ್ಗೀಕರಿಸಿದೆ. ಈ ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಆದೇಶದ ಹಿನ್ನೆಲೆಯಲ್ಲಿ, ಈಗಾಗಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿರುವ ಇಲಾಖೆಗಳು, ಈ ಹಿಂದೆ ಯಾವ ರೋಸ್ಟರ್ ಪಾಯಿಂಟ್ವರೆಗೆ ಭರ್ತಿ ಮಾಡಿರುತ್ತಾರೋ, ಅದರ ನಂತರದ ಪಾಯಿಂಟ್ಗಳಿಂದ ಈ ಹೊಸ ಆದೇಶದ ಪ್ರಕಾರ ನೇಮಕಾತಿಯನ್ನು ಮುಂದುವರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.ಉಳಿದಂತೆ, 2022 ಡಿಸೆಂಬರ್ 28ರ ಹಿಂದಿನ ಸರಕಾರಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದೂ ತಿಳಿಸಲಾಗಿದೆ.