ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಅವಶ್ಯವಿರುವ ಜಮೀನು ಸ್ವಾಧೀನಕ್ಕಾಗಿ ಮತ್ತು ಪರಿಹಾರ ನಿಗದಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಮುಳುಗಡೆಯಾಗುವ ನೀರಾವರಿ ಜಮೀನಿಗೆ ಒಂದು ಎಕರೆಗೆ 40 ಲಕ್ಷ ರೂ. ಮತ್ತು ಒಣ ಬೇಸಾಯದ ( ಖುಷ್ಕಿ ) ಜಮೀನಿಗೆ 30 ಲಕ್ಷ ರೂ. ದಂತೆ ಭೂಮಿ ಖರೀದಿಗೆ ಸರ್ಕಾರ ತೀರ್ಮಾನ ಮಾಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ, “ಒಟ್ಟಾರೆ ಈ ಯೋಜನೆಗೆ 70 ಸಾವಿರ ಕೋಟಿ ರೂ. ಬೇಕು. ಪ್ರತಿ ವರ್ಷ 15-20 ಖರ್ಚು ಮಾಡುತ್ತೇವೆ. ಹೇಗೆ ಹಣ ಹೊಂದಿಸಬೇಕು ಎಂಬುದನ್ನು ಸರ್ಕಾರ ಮುಂದಿನ ಹಂತದಲ್ಲಿ ತೀರ್ಮಾನ ಮಾಡಲಿದೆ” ಎಂದು ಹೇಳಿದರು.
“ಇನ್ನು ಕಾಲುವೆ ನಿರ್ಮಾಣಕ್ಕೆ, 51,000 ಎಕರೆ ಜಮೀನು ಬೇಕಾಗಿದೆ. ಇದಕ್ಕೆ ಪರಿಹಾರವಾಗಿ ಒಣ ಭೂಮಿಗೆ ಎಕರೆಗೆ 25 ಲಕ್ಷ ಹಾಗೂ ನೀರಾವರಿ ಭೂಮಿಗೆ 30 ಲಕ್ಷ ಪರಿಹಾರ ಕೊಡಲು ತೀರ್ಮಾನ ಮಾಡಲಾಗಿದೆ. ಭೂಮಿ ಮುಳುಗಡೆ, ಕಾಲುವೆ, ಪುನರ್ವಸತಿಗೆ ಒಟ್ಟು 1,33,000 ಜಮೀನು ಅಗತ್ಯ ಇದೆ. ಯೋಜನೆಯಿಂದ 20 ಗ್ರಾಮಗಳು ಮುಳುಗಡೆ ಆಗಲಿದೆ. ಯೋಜನೆಗೆ ಒಟ್ಟು 70,000 ಕ್ಕೂ ಹೆಚ್ಚು ಕೋಟಿ ಖರ್ಚು ಆಗಲಿದೆ” ಎಂದು ವಿವರಿಸಿದರು.
“ಆಲಮಟ್ಟಿ ಜಲಾಶಯವನ್ನು 519.6 ಮೀಟರ್ 524.256 ಮೀಟರ್ ಎತ್ತರಕ್ಕೆ ಏರಿಸಲು ಟ್ರಿಬ್ಯೂನಲ್ ಅವಾರ್ಡ್ ಮಾಡಿದೆ. 75,000 ಕ್ಕೂ ಹೆಚ್ಚು ಎಕರೆ ಭೂಮಿ ಮುಳುಗಡೆ ಆಗಲಿದೆ. 5 ಲಕ್ಷ ಹೆಕ್ಟೇರ್ ನೀರಾವರಿ ಭೂಮಿಯ ಅಗತ್ಯ ಇದೆ. ಯೋಜನೆಯಿಂದ ರೈತರ ಭೂಮಿಗೆ ನೀರು ಸಿಗಲಿದೆ. ರೈತರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಸಲಾಗಿದೆ” ಎಂದು ತಿಳಿಸಿದರು.