ಪರಿಶಿಷ್ಠ ಜಾತಿಗಳ ಒಳಮೀಸಲಾತಿ ಜಾರಿಗೆ ವಿರೋಧಿಸುತ್ತಿರುವ ಸಮಾಜ ಕಲ್ಯಾಣ ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒಳಮೀಸಲಾತಿ ಹೋರಾಟಗಾರರು ಒತ್ತಾಯಿಸಿದ್ದಾರೆ. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥರನ್ನು ತತ್‌ಕ್ಷಣ ವರ್ಗಾವಣೆ ಮಾಡಿ, ನೇರ ನೇಮಕಾತಿ, ಬಡ್ತಿ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವಂತೆ ಒತ್ತಡ ಹೇರಲು, 2025ರ ಅಕ್ಟೋಬರ್ 10ರಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರ ಮನೆಗೆ ಮುತ್ತಿಗೆ ಹಾಕುವ ಹೋರಾಟವನ್ನು ಘೋಷಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಈ ಹೋರಾಟವು ಸರ್ಕಾರದ ವಿಳಂಬ ನೀತಿ ಮತ್ತು ಒಳಮೀಸಲಾತಿ ಜಾರಿಗೆ ಅಡ್ಡಿಪಡಿಸುವ ಧೋರಣೆಯನ್ನು ಖಂಡಿಸಲು ಆಯೋಜಿಸಲಾಗಿದೆ. ಸರ್ಕಾರದ ಆದೇಶದ ಪ್ಯಾರಾ-2ರಲ್ಲಿನ ತೊಡಕುಗಳಿಂದ ಮಾದಿಗ ಸಮುದಾಯದಂತಹ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಸರಿಪಡಿಸಿ, ಮೂಲ ಜಾತಿ ಪ್ರಮಾಣಪತ್ರ ಆಧಾರದಲ್ಲಿ ಒಳಮೀಸಲಾತಿ ಸೌಲಭ್ಯ ನೀಡಬೇಕೆಂದು ಒತ್ತಾಯಿಸಲಾಗಿದೆ. ರಾಜ್ಯದಾದ್ಯಂತದ ಒಳಮೀಸಲಾತಿ ಹೋರಾಟಗಾರರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತ ಸಂವಿಧಾನದ ಸಾಮಾಜಿಕ ನ್ಯಾಯದ ತತ್ವದ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಚಳುವಳಿ 1975ರಿಂದಲೇ ಪ್ರಾರಂಭಗೊಂಡು ಹಲವು ಹಂತಗಳಲ್ಲಿ ಹೋರಾಟವನ್ನು ಕಂಡಿದೆ. ಮಾನ್ಯ ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1ರಂದು ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಜಾರಿಗೊಳಿಸಲು ಅಧಿಕಾರವಿದೆ ಎಂದು ತೀರ್ಪು ನೀಡಿದರೂ, ಕರ್ನಾಟಕ ಸರ್ಕಾರ ಅದನ್ನು ಜಾರಿಗೊಳಿಸುವಲ್ಲಿ ವಿಳಂಬ ವಹಿಸಿತು. ಬಳಿಕ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ರಚಿಸಲಾದ ಏಕಸದಸ್ಯ ಆಯೋಗವು 2025ರ ಜುಲೈ 4ರಂದು ಪರಿಶಿಷ್ಟ ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಭಜಿಸಿ ಏಳು ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿತು.
ಆದರೆ ಸರ್ಕಾರವು ಬಲಾಢ್ಯ ಸಮುದಾಯಗಳ ವಿರೋಧಕ್ಕೆ ತಲೆಬಾಗಿದ್ದು, ಅಂತಿಮವಾಗಿ ಕೇವಲ ಮೂರು ಪ್ರವರ್ಗಗಳನ್ನಾಗಿ ಪರಿಷ್ಕರಣೆ ಮಾಡಿತು. ಪ್ರವರ್ಗ–ಎಗೆ ಶೇ.6, ಪ್ರವರ್ಗ–ಬಿಗೆ ಶೇ.6 ಮತ್ತು ಪ್ರವರ್ಗ–ಸಿಗೆ ಶೇ.5 ಮೀಸಲಾತಿ ನೀಡುವ ನಿರ್ಧಾರದಿಂದ ಅತ್ಯಂತ ಹಿಂದುಳಿದ ಸಮುದಾಯಗಳು ಅನ್ಯಾಯಕ್ಕೊಳಗಾದವು ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ತೀರ್ಮಾನದಿಂದ ಸಾಮಾಜಿಕ ನ್ಯಾಯದ ತತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಿಶೇಷವಾಗಿ ಸರ್ಕಾರದ ಆದೇಶದ ಪ್ಯಾರಾ–2 ಅಂಶವು ಮಾದಿಗ ಸಮುದಾಯಕ್ಕೆ ಮತ್ತೆ ಅನ್ಯಾಯವಾಗುವ ರೀತಿಯಾಗಿದೆ ಎಂದು ಹೇಳಲಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಸಮುದಾಯಗಳು ತಮ್ಮ ಮೂಲ ಜಾತಿಯನ್ನು ಸ್ಪಷ್ಟಪಡಿಸದೆ ಪ್ರವರ್ಗ–ಎ ಅಥವಾ ಬಿ ಯಲ್ಲಿ ಮೀಸಲಾತಿ ಪಡೆಯಬಹುದೆಂಬ ಅಂಶದಿಂದ, ಪ್ರವರ್ಗ–ಬಿಯ ಮೇರು ಅಭ್ಯರ್ಥಿಗಳು ಪ್ರವರ್ಗ–ಎಯಲ್ಲಿಯೂ ಸ್ಪರ್ಧಿಸುವ ಅವಕಾಶ ಸಿಕ್ಕಿದ್ದು, ನಿಜವಾದ ಹಿಂದುಳಿದ ಮಾದಿಗ ಸಮುದಾಯದ ಅಭ್ಯರ್ಥಿಗಳಿಗೆ ಹಿನ್ನಡೆಯಾಗುವ ಆತಂಕ ವ್ಯಕ್ತವಾಗಿದೆ.
ಪ್ರವರ್ಗ-ಎ ಅಭ್ಯರ್ಥಿಗಳಾದ ಮಾದಿಗ ಸಮುದಾಯದ ಅಭ್ಯರ್ಥಿಗಳು, ಸಹಜವಾಗಿ ಕಡಿಮೆ ಮೆರಿಟ್‌ನವರಾಗಿದ್ದು, ಪ್ರವರ್ಗ-ಬಿ ಸಮುದಾಯಗಳು ಅಧಿಕ ಮೆರಿಟ್ ಹೊಂದಿರುವುದರಿಂದ ಪ್ರತ್ಯೇಕವಾಗಿ ಐತಿಹಾಸಿಕವಾಗಿ ಒಳಮೀಸಲಾತಿ ಹೋರಾಟ ನಡೆಯುತ್ತಿದೆ ಎನ್ನುವುದನ್ನು ಮರೆಯದಿರೋಣ. ಆದ್ದರಿಂದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಪ್ರಮಾಣ ಪತ್ರಗಳಿರುವ ಹೊಲೆಯರು, ಮಾದಿಗರು, ಇನ್ನಿತರರು ತಮ್ಮ ಮೂಲ ಜಾತಿ ಪ್ರಮಾಣ ಪತ್ರ ಅಧಾರದಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಯಲ್ಲಿ ಒಳಮೀಸಲಾತಿ ಪಡೆಯಲು ಸರ್ಕಾರ ಆದೇಶಿಸಬೇಕು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ಗೆ ನೂರು, ನ್ಯಾಯಮೂರ್ತಿಗಳ ಮೇಲೆ ಶೂ ತೂರು
ಅದಲ್ಲದೆ, ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಒಳಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಸಚಿವರೊಂದಿಗೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್, ಆಯುಕ್ತ ರಾಕೇಶ್ ಕುಮಾರ ಹಾಗೂ ಸಲಹೆಗಾರ ವೆಂಕಟಯ್ಯ ಇವರುಗಳು ಸರ್ಕಾರದ ಆದೇಶದ ಅನುಷ್ಠಾನವನ್ನು ತಡೆದು ನೇರ ನೇಮಕಾತಿ ಹಾಗೂ ಬಡ್ತಿ ನೇಮಕಾತಿಗೆ ಒಳಮೀಸಲಾತಿ ಅನ್ವಯಿಸುವುದಿಲ್ಲವೆಂದು ತಪ್ಪುಮಾಹಿತಿ ನೀಡುತ್ತಿದ್ದಾರೆ.ಒಳಮೀಸಲಾತಿ ಆದೇಶವು ಕೇವಲ ನೇರ ನೇಮಕಾತಿಗೆ ಮಾತ್ರ ಅನ್ವಯಿಸುತ್ತದೆ, ಬಡ್ತಿ ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಅನ್ವಯಿಸುವುದಿಲ್ಲವೆಂದು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ನೇರ ನೇಮಕಾತಿ, ಬಡ್ತಿ ನೇಮಕಾತಿ ರೋಸ್ಟರ್ ಬಿಂದುಗಳಿಗೆ ಸಂಬಂಧಿಸಿದ ಕರ್ನಾಟಕ ರಾಜ್ಯದ ಆದೇಶಗಳನ್ನು ಉಲ್ಲಂಘಿಸಿ ಸರ್ಕಾರವನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿಯ ಉಪಯೋಜನೆಗಳಿಗೆ ಮೀಸಲಾದ ಹಣವನ್ನು ದುರುಪಯೋಗ ಪಡಿಸಿ, ರೂ.11,000 ಕೋಟಿ ಮೊತ್ತವನ್ನು ಕಾನೂನುಬಾಹಿರವಾಗಿ ಗ್ಯಾರಂಟಿ ಯೋಜನೆಗೆ ವರ್ಗಾಯಿಸಲಾಗಿದೆ. ಇದರಿಂದ 101 ಪರಿಶಿಷ್ಟ ಜಾತಿ ಸಮುದಾಯಗಳಿಗೂ ದ್ರೋಹ ನಡೆದಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಸಮಾಜ ಕಲ್ಯಾಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲಾಖೆಯ ಮುಖ್ಯಸ್ಥರನ್ನು ವರ್ಗಾಯಿಸಬೇಕು ಮತ್ತು ಒಳಮೀಸಲಾತಿ ಜಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಇದರ ಭಾಗವಾಗಿ ಅಕ್ಟೋಬರ್ 10 ರಂದು ಸಚಿವ ಮಹಾದೇವಪ್ಪ ಅವರ ಮನೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಒಳಮೀಸಲಾತಿ ಹೋರಾಟಗಾರರು ಮುತ್ತಿಗೆ ಹಾಕಲಿದ್ದಾರೆ ಎಂದು ಮುಖಂಡರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮಿಸಲಾತಿ ಹೋರಾಟ ಸಮಿತಿ, ಕರ್ನಾಟಕ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ MRHS (ಸಂಸ್ಥಾಪಕ) ರಾಜ್ಯ ಸಮಿತಿ-ಬೆಂಗಳೂರು, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ, ಕರ್ನಾಟಕ ಆದಿ ಜಾಂಭವ ಸಂಘಗಳು, ಮಾದಿಗ, ಬಹುಜನ ವಿದ್ಯಾರ್ಥಿ ಸಂಘಗಳು
ಮಾದಿಗ ಸಮುದಾಯದ ಎಲ್ಲ ಸಂಘ-ಸಂಸ್ಥೆಗಳ ಪ್ರತಿನಿಧಿಗಳಾದ ಎಸ್ ಮಾರೆಪ್ಪ, ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಚಂದ್ರು ತರಹುಣಿಸೆ, ವೇಣುಗೋಪಾಲ್ ಮೌರ್ಯ ಮತ್ತು ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.