ಕೈಗಾರಿಕಾ ವಲಯದ ಸವಾಲುಗಳನ್ನು ಎದುರಿಸಲು, ಸರ್ಕಾರದ ಸೂಕ್ತ ನೀತಿಗಳ ಬೆಂಬಲ ಪಡೆಯಲು ಮತ್ತು ರಾಜ್ಯದಲ್ಲಿ ಬಲಿಷ್ಠ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶದಿಂದ ಮುಸ್ಲಿಂ ಕೈಗಾರಿಕೋದ್ಯಮಿಗಳ ಸಂಘವು (MIA) ಅಕ್ಟೋಬರ್ 31ರಂದು ‘ಉಡಾನ್ 2026 – ಅಲ್ಪಸಂಖ್ಯಾತ ಉದ್ಯಮಶೀಲತೆಯ ಉನ್ನತೀಕರಣ’ (UDAAN 2026 – Elevating Minority Entrepreneurship) ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕುರಿತು ಶನಿವಾರ (ಅ.19) ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಅಧಿಕೃತ ಮಾಹಿತಿ ನೀಡಿದರು. ಅಕ್ಟೋಬರ್ 31ರ ಶನಿವಾರ ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿರುವ ‘ಬ್ಯಾರೀಸ್ ಅಮಿಟಿ’ಯಲ್ಲಿ ಈ ಕಾರ್ಯಕ್ರಮ ಜರುಗಲಿದೆ. ನಾಡಿನ ಗಣ್ಯ ಕೈಗಾರಿಕೋದ್ಯಮಿಗಳು, ಯಶಸ್ವಿ ಉದ್ಯಮಿಗಳು, ಹೈ-ನೆಟ್-ವರ್ತ್ ವ್ಯಕ್ತಿಗಳು, ಹೂಡಿಕೆದಾರರು, ನವೋದ್ಯಮಗಳ ಸಂಸ್ಥಾಪಕರು, ಸರ್ಕಾರದ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ವಿವಿಧ ವಾಣಿಜ್ಯ ಸಂಘಟನೆಗಳ ಪ್ರಮುಖರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ವಿವರಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರಮುಖ ನಗರಗಳಿಗೆ ವಿಮಾನ ಸೇವೆ ಆರಂಭಕ್ಕೆ ಮನವಿ
ಅಲ್ಪಸಂಖ್ಯಾತ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳನ್ನು ಸರ್ಕಾರದ ಗಮನಕ್ಕೆ ತರುವುದು ‘ಉಡಾನ್ 2026’ರ ಪ್ರಮುಖ ಉದ್ದೇಶ. ಕೈಗಾರಿಕಾ ಸಬ್ಸಿಡಿಗಳ ಸಮರ್ಪಕ ವಿತರಣೆ, ಸುಲಭವಾಗಿ ದೊರೆಯುವ ಸರ್ಕಾರಿ ಅನುದಾನಗಳು, ಉದ್ಯಮಶೀಲತಾ ಅಭಿವೃದ್ಧಿ ಹಾಗೂ ಸೂಕ್ತ ನೀತಿ ಬೆಂಬಲವನ್ನು ಒತ್ತಾಯಿಸಿ ಇದೇ ವೇದಿಕೆಯಲ್ಲಿ ಸಂಬಂಧಪಟ್ಟ ಸಚಿವರಿಗೆ ‘ಬೇಡಿಕೆ ಮತ್ತು ಶಿಫಾರಸುಗಳ ಮನವಿ ಪತ್ರ’ ಸಲ್ಲಿಸಲು ಸಂಘ ನಿರ್ಧರಿಸಿದೆ. ಈ ಮೂಲಕ ಸರ್ಕಾರ ಹಾಗೂ ವ್ಯಾಪಾರ ಸಮುದಾಯದ ನಡುವೆ ರಚನಾತ್ಮಕ ಸಂವಾದ ಸೃಷ್ಟಿಸುವ ಗುರಿ ಹೊಂದಿದೆ ಎಂದು ಆಯೋಜಕರು ತಿಳಿಸಿದರು.
ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ನವೋದ್ಯಮಗಳ ಪ್ರಾಮುಖ್ಯತೆ ಮನಗಂಡಿರುವ ಎಂ.ಐ.ಎ, ಕರ್ನಾಟಕ ರಾಜ್ಯ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಹೊಸ ಉದ್ದಿಮೆದಾರರಿಗೆ ಮಾರ್ಗದರ್ಶನ, ಕೌಶಲ್ಯ ತರಬೇತಿ, ಕೈಗಾರಿಕಾ ಸಂಪರ್ಕ, ಹೂಡಿಕೆದಾರರ ನೆಟ್‌ವರ್ಕಿಂಗ್ ಹಾಗೂ ಸೂಕ್ತ ಸರ್ಕಾರಿ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ‘ಎಂ.ಐ.ಎ ಎಂಟರ್‌ಪ್ರೆನ್ಯೂರ್ಸ್ ಹಬ್ ಮತ್ತು ಇನ್‌ಕ್ಯುಬೇಶನ್ ಸೆಂಟರ್’ ಸ್ಥಾಪಿಸುವ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಕಾರ್ಯಕ್ರಮದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.
ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯ ಅಪಾರ ಸಾಮರ್ಥ್ಯ ಹೊಂದಿರುವ ಅಲ್ಪಸಂಖ್ಯಾತ ಸಮುದಾಯದ 30 ಭರವಸೆಯ ಸ್ಟಾರ್ಟ್ಅಪ್‌ಗಳು ಮತ್ತು ಉದ್ಯಮಿಗಳನ್ನು ಗುರುತಿಸಿ ‘ಉಡಾನ್ 2026’ ವೇದಿಕೆಯಲ್ಲಿ ಸನ್ಮಾನಿಸಲಾಗುವುದು. ಆಯ್ಕೆಯಾದ ನವೋದ್ಯಮಿಗಳಿಗೆ ಕಾರ್ಯಕ್ರಮದಲ್ಲಿ ನೆರೆಯುವ ಹೂಡಿಕೆದಾರರು ಹಾಗೂ ಗಣ್ಯರ ಮುಂದೆ ತಮ್ಮ ಉದ್ಯಮದ ಕುರಿತು ಪ್ರಾತ್ಯಕ್ಷಿಕೆ ನೀಡಲು (Showcase) ಮತ್ತು ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ವಿವರಣೆ ನೀಡಿದರು.
ಕೇವಲ ಸನ್ಮಾನಗಳಿಗೆ ಮಾತ್ರ ಸೀಮಿತವಾಗಿರದೆ, ನವೋದ್ಯಮಗಳು ಮತ್ತು ಸ್ಥಾಪಿತ ಕೈಗಾರಿಕೆಗಳ ನಡುವೆ ಅರ್ಥಪೂರ್ಣ ವ್ಯವಹಾರ ಸಂಬಂಧಗಳನ್ನು ಬೆಳೆಸಲು ನೆರವಾಗಲಿದೆ. ಜ್ಞಾನ ವಿನಿಮಯ, ಬಂಡವಾಳ ಹೂಡಿಕೆ ಹಾಗೂ ಭವಿಷ್ಯದ ಮಾರುಕಟ್ಟೆ ವಿಸ್ತರಣೆಗೆ ಈ ಕಾರ್ಯಕ್ರಮವು ಅತ್ಯಮೂಲ್ಯ ವೇದಿಕೆಯಾಗಿ ರೂಪುಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಕೈಗಾರಿಕೋದ್ಯಮಿಗಳ ಸಂಘದ (MIA) ಅಧ್ಯಕ್ಷರಾದ ಅಬ್ದುಲ್ ರಶೀದ್ ಬಿ.ಜೆ., ಉಪಾಧ್ಯಕ್ಷರಾದ ತಾಹೀರ್ ಷರೀಫ್, ಕಾರ್ಯದರ್ಶಿ ಮೀರ್ ಅಬ್ದುಲ್ ಹಫೀಜ್, ‘ಉಡಾನ್ 2026’ರ ಪ್ರಾಜೆಕ್ಟ್ ಹೆಡ್ ಹಾಗೂ ಸಂಘದ ಜಂಟಿ ಕಾರ್ಯದರ್ಶಿಯಾಗಿರುವ ಮೊಹಮ್ಮದ್ ಅಜ್ಮತುಲ್ಲಾ, ಖಜಾಂಚಿ ಹಿದಾಯತುಲ್ಲಾ ಮತ್ತು ಜಂಟಿ ಖಜಾಂಚಿ ಮುನೀರ್ ಅಹ್ಮದ್ ಉಪಸ್ಥಿತರಿದ್ದರು. ಇವರೊಂದಿಗೆ ‘ಉಡಾನ್ 2026’ರ ಈವೆಂಟ್ ಹೆಡ್ ಹಾಗೂ ಕೌನ್ಸಿಲ್ ಸದಸ್ಯರಾಗಿರುವ ಸುಹೇಲ್ ಹೆಚ್.ಎ., ಮತ್ತು ಇತರ ಕೌನ್ಸಿಲ್ ಸದಸ್ಯರುಗಳಾದ ಶಫಿ ಹಾಗೂ ಶೋಯೆಬ್ ವಲೈ ಅವರು ಪಾಲ್ಗೊಂಡಿದ್ದರು.





