“ಇಲ್ಲಿ ಯಾರೂ ಭಿನ್ನರಲ್ಲ, ಯಾರೂ ಪರಕೀಯರಲ್ಲ. ಮುಸ್ಲಿಮರ ಮೇಲೆ ಜಯಚಾಮರಾಜೇಂದ್ರ ಒಡೆಯರ್ ಅವರು ಬಹಳ ನಂಬಿಕೆಯಿಟ್ಟು ಗೌರವದಿಂದ ನಡೆಸಿಕೊಂಡಿರುವ ಪರಂಪರೆ ಇದೆ. ದಸರಾ ಎಂಬುದು ಕೇವಲ ಹಬ್ಬವಲ್ಲ. ಇದು ಈ ನಾಡಿನ ನಾಡಿಮಿಡಿತ, ಸಂಸ್ಕೃತಿಯ ಉತ್ಸವ, ಎಲ್ಲರನ್ನು ಒಳಗೊಳ್ಳುವ ಗಳಿಗೆ ಹಾಗೂ ಸಮನ್ವಯದ ಮೇಳ…”
ಲೇಖಕಿ ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ಮೈಸೂರು ದಸರಾ- 2025 ಅನ್ನು ಇಂದು (ಸೆ.22) ಉದ್ಘಾಟಿಸಿ ಆಶಯ ಭಾಷಣ ಆರಂಭಿಸಿದ್ದು ಹೀಗೆ.
ಕವಯಿತ್ರಿಯೂ ಆಗಿರುವ ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನೆಯ ಭಾಷಣ ಕಾವ್ಯದಂತಿದ್ದು, ಸಭಿಕರನ್ನು ಸಮ್ಮೋಹನಗೊಳಿಸಿತು. ಅವರ ಪ್ರತಿ ಪದವೂ ದ್ವೇಷ, ಅಸೂಯೆ ತುಂಬಿರುವವರಲ್ಲಿ ಚಾಮುಂಡಿ ತಾಯಿ ಮಾನವೀಯ ಮೌಲ್ಯಗಳ ಬೆಳಕನ್ನು ಬೆಳಗಲಿ ಎಂದು ಆಶಿಸಿತು.
“ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಕ್ಕೂ ಈ ಮಣ್ಣಿನ ವಾರಸುದಾರಿಕೆ, ಸ್ಪಂದನೆ, ಜವಾಬ್ದಾರಿ ಹಾಗೂ ನೆನಪುಗಳು ಇವೆ. ಈ ದಿನ ದಸರಾ ಉತ್ಸವದ ಉದ್ಘಾಟನೆಯನ್ನು ತಾಯಿ ಚಾಮುಂಡೇಶ್ವರಿ ಕೃಪಾಶೀರ್ವಾದದಿಂದ ನಾವೆಲ್ಲರೂ ಸೇರಿ ವಿಜೃಂಭಣೆಯಿಂದ ಉದ್ಘಾಟಿಸಿದ್ದೇವೆ. ದಸರಾ ಉದ್ಘಾಟನೆಯ ಸುತ್ತ ಬೇಕಾದಷ್ಟು ಏರುಪೇರುಗಳಾದವು. ಚಾರಿತ್ರಿಕ ಸಂಗತಿಗಳು ಉತ್ಪನ್ನವಾದವು. ಆದರೂ ಚಾಮುಂಡಿ ತಾಯಿ ನನ್ನನ್ನು ಉದ್ಘಾಟನೆಗೆ ಬರಮಾಡಿಕೊಂಡಳು. ತಾಯಿಯ ಸನ್ನಿಧಿಯಿಂದ ಬಂದು ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದರು.
ಮೈಸೂರು ದಸರಾದ ಪವಿತ್ರ ಕ್ಷಣದಲ್ಲಿ ಚಾಮುಂಡಿ ತಾಯಿಯ ಕೃಪೆಯ ನೆರಳಿನಲ್ಲಿ ನಿಮ್ಮೆಲ್ಲರ ಮುಂದೆ ನಿಲ್ಲುವ ಅವಕಾಶ ನನಗೆ ದೊರೆತಿರುವುದು ನನ್ನ ಜೀವನದ ಅತ್ಯಂತ ಗೌರವದ ಗಳಿಗೆ. ಮೈಸೂರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು, ಕನ್ನಡ ಭಾಷೆಯ ಹೃದಯಾಳದ ಸ್ಪಂದನೆಯಿಂದ ಈ ಹಬ್ಬವು ನಮಗೆ ಸಾಕಷ್ಟು ನೆನಪುಗಳನ್ನು ಕೊಟ್ಟಿದೆ. ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ದಸರಾ ನಮ್ಮ ಸಮಗ್ರ ಸಂಸ್ಕೃತಿಯ ಪ್ರತೀಕ” ಎಂದು ಬಣ್ಣಿಸಿದರು.

“ನನ್ನ ತಿಳಿವಳಿಕೆಯಿಂದ ಹೇಳುವುದಾದರೆ ಮೈಸೂರಿನ ಉರ್ದು ಭಾಷಿಕರು ವಿಜಯದಶಮಿಯನ್ನು ‘ಸಿಲಿಂಗನ್’ ಎಂದು ಕರೆಯುತ್ತಾರೆ. ಜಯಚಾಮರಾಜೇಂದ್ರ ಒಡೆಯರ್ ಅವರು ಮುಸ್ಲಿಮರ ಮೇಲೆ ಭರವಸೆ ಇಟ್ಟುಕೊಂಡಿದ್ದರ ಪ್ರತೀಕ ಮೈಸೂರಿನ ಅಂಗರಕ್ಷಕ ಸಿಪಾಯಿ ಮಹಮ್ಮದ ಗೌಸ್ ಆಗಿದ್ದುದು. ಇದರಿಂದ ತಿಳಿಯುತ್ತದೆ ಇಲ್ಲಿ ಯಾರೂ ಭಿನ್ನರಲ್ಲ, ಯಾರೂ ಪರಕೀಯರಲ್ಲ ಎಂಬುದು” ಎಂದರು.
“ಸಂಸ್ಕೃತಿ ಎಂದರೆ ಹೃದಯಗಳನ್ನು ಒಟ್ಟುಗೂಡಿಸುವ ಸೇತುವೆ. ಅದು ದ್ವೇಷವನ್ನು ಬೆಳೆಸುವುದಲ್ಲ. ಪ್ರೀತಿಯನ್ನು ಹರಡುವುದೇ ಅದರ ಗುರಿ. ನನ್ನ ಧಾರ್ಮಿಕ ನಂಬಿಕೆ, ನನ್ನ ಜೀವನ ಪಾಠಗಳು ಯಾವಾಗಲೂ ಹೊಸ್ತಿಲ ಗಡಿಯನ್ನು ದಾಟಿಲ್ಲ. ಅವು ಯಾವತ್ತೂ ಪ್ರಾಣಿಯನ್ನು, ಮನುಷ್ಯನನ್ನು ನೋಯಿಸಿಲ್ಲ. ಈ ನೆಲದ ಸಂಸ್ಕೃತಿ ನನಗೆ ಕಲಿಸಿದ ಪಾಠ ಎಂದರೆ; ಎಲ್ಲರನ್ನು ಒಳಗೊಳ್ಳುವ ಮನಸ್ಸು ಮತ್ತು ಎಲ್ಲರ ಬದುಕನ್ನು ಗೌರವಿಸುವ ಹೃದಯ” ಎಂದು ಹೇಳಿದರು.
“ಇಂದು ಇಡೀ ಜಗತ್ತು ಯುದ್ದದ ಹಾದಿಯಲ್ಲಿ ನಡೆಯುತ್ತಿರುವಾಗ ಮನುಕುಲವು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗಿದೆ. ಮೈಸೂರು ದಸರಾ ಘೋಷಣೆ ನಮ್ಮೆಲ್ಲ ಕಿವಿಯಲ್ಲಿ ಪ್ರತಿಧ್ವನಿಸಲಿ, ಇದು ಶಾಂತಿಯ ಹಬ್ಬ, ಇದು ಸೌಹಾರ್ಧದ ಮೇಳ, ಇದು ಸರ್ವಜನಾಂಗದ ಶಾಂತಿಯ ತೋಟವಾಗಲಿ. ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳು ಇನ್ನೊಬ್ಬರ ಸಂಸ್ಕೃತಿಗಳನ್ನು ಗೌರವಿಸುವ ಮೂಲಕ ನಮ್ಮ ಬದುಕನ್ನು ಮತ್ತಷ್ಟು ಶ್ರೀಮಂತಗೊಳಿಸಲಿ” ಎಂದು ಆಶಯ ವ್ಯಕ್ತಪಡಿಸಿದರು.
“ಈ ನೆಲದ ಸುಗಂಧವು ಐಕ್ಯತೆಯಾಗಲಿ. ಈ ನೆಲದ ಹೂವುಗಳು ಸೌಹಾರ್ದತೆಯಿಂದ ಕೂಡಿವೆ. ಈ ನೆಲದ ಬಿಸಿಲು ಕೂಡ ಮಾನವೀಯ ಪ್ರತೀಕವಾಗಿದೆ. ಚಾಮುಂಡಿ ತಾಯಿಯ ಮಹಿಮೆ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶನವಾಗಿರಲಿ. ನಮ್ಮೊಳಗಿನ ದ್ವೇಷ, ಅಸೂಯೆಯನ್ನು ನಾಶಪಡಿಸಲಿ” ಎಂದು ಪ್ರಾರ್ಥಿಸಿದರು.
“ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸೋಣ. ನನ್ನ ಧಾರ್ಮಿಕ ನಂಬಿಕೆಗಳು ಮತ್ತು ನನ್ನ ಜೀವನ ದರ್ಶನ ಯಾವತ್ತೂ ಜೀವಪರವಾಗಿವೆ. ಅವು ಮರದ ನೆರಳಿನಂತೆ, ತಂಪಾದ ನದಿಯಂತೆ. ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ನಾವು ಅಸ್ತ್ರಗಳನ್ನು ಬದಿಗಿಟ್ಟು ಅಕ್ಷರಗಳಿಂದ ಬದುಕನ್ನು ಗೆಲ್ಲಬಹುದು. ಹಗೆತನಗಳಿಂದ ಜೀವನ ಗೆಲ್ಲಲು ಆಗುವುದಿಲ್ಲ. ಇದನ್ನೇ ಈ ನೆಲದ ಪರಂಪರೆ ಸಾರಿದೆ. ಇದು ಸರ್ವಜನಾಂಗದ ಶಾಂತಿಯ ತೋಟ. ಈ ತೋಟದಲ್ಲಿ ಪ್ರತಿ ಹೂವು ತನ್ನ ಬಣ್ಣದಲ್ಲೇ ಅರಳಲಿ, ತನ್ನ ಸುಗಂಧವನ್ನೇ ಬೀರಲಿ. ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ. ಇದೆಲ್ಲವೂ ಸಾಧ್ಯವಾದಾಗ ಸೌಹಾರ್ದಾದ ಮೇಳವಾಗಲಿದೆ” ಎಂದು ರೂಪಕಗಳಲ್ಲಿ ಮಾತುಗಳನ್ನು ಕಟ್ಟಿಕೊಟ್ಟರು.

“ಪ್ರಜಾಪ್ರಭುತ್ವ ಎಂಬುದು ಒಂದು ವ್ಯವಸ್ಥೆಯಲ್ಲ, ಅದು ಒಂದು ಮೌಲ್ಯ. ಪ್ರತಿಯೊಬ್ಬರ ಧ್ವನಿಯನ್ನು ಗೌರವಿಸುವ ಮನೋಭಾವ, ಬೇರೆಯವರ ಬದುಕಿನಲ್ಲಿ ಅರ್ಥಪೂರ್ಣವಾಗಿ ನಡೆದುಕೊಳ್ಳುವ ಜವಾಬ್ದಾರಿ. ಅದನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ನಾವೆಲ್ಲರೂ ಒಂದೇ ಆಗಿದ್ದು, ಗಗನದಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ಹೊರ ತಳ್ಳುವುದಿಲ್ಲ. ಮನುಷ್ಯ ಮಾತ್ರ ಗಡಿಗಳನ್ನು ಹಾಕುತ್ತಾನೆ. ಈ ಗಡಿಗಳನ್ನು ನಾವೇ ಅಳಿಸಬೇಕು” ಎಂದು ಕರೆ ನೀಡಿದರು.
“ನಾಡಹಬ್ಬ ಬರೀ ಮೈಸೂರಿನ ಬೀದಿಗಳನ್ನು ಮಾತ್ರವಲ್ಲ ಜಗತ್ತಿನ ಪ್ರತಿ ಬೀದಿಗಳನ್ನು ಬೆಳಗಲಿ. ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀ ಅಂದರೆ ಬರೀ ತಾಯ್ತನವಲ್ಲ, ಅನ್ಯಾಯದ ವಿರುದ್ಧ ದಿಟ್ಟವಾಗಿ ಹೋರಾಡುವ ಶಕ್ತಿ. ನಾಲ್ವಡಿ ಕೃಷ್ಣರಾಜ ಒಡೆಯರ್ ನಮಗೆ ಈಗಲೂ ಪ್ರಸ್ತುತರಾಗುತ್ತಾರೆ. ಕಾರಣ ಅವರು ಹಂಚಿಕೊಳ್ಳುವುದರಲ್ಲಿ ನಂಬಿಕೆ ಇಟ್ಟಿದ್ದರು. ಒಡೆಯರ್ ಪರಂಪರೆಯಲ್ಲಿ ನಾಲ್ವಡಿ ಕೃಷ್ಣರಾಜರು ಅನರ್ಘ್ಯ ರತ್ನ. ಅವರು ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಮಾಜಿಕ ನ್ಯಾಯದ ಔದಾರ್ಯದ ಧ್ವನಿಯಾಗಿದ್ದರು. ಭೇದ ಭಾವಕ್ಕಿಂತ ವಿಶಾಲ ಮನಸ್ಸಿಗೆ ಅವರು ಬೆಲೆ ಕೊಡುತ್ತಿದ್ದರು. ಅವರು ನೀಡಿದ ಸಂದೇಶ, ಸಂಪತ್ತನ್ನು ಹಂಚಿದಾಗ ಮಾತ್ರ ಅದು ಬೆಳೆಯುತ್ತದೆ ಎಂಬುದಾಗಿತ್ತು. ನಾವೆಲ್ಲರೂ ಹಂಚಿ ಬದುಕೋಣ” ಎಂದು ಹೇಳುತ್ತ ತಮ್ಮ ‘ಬಾಗಿನ’ ಕವಿತೆ ಮೂಲಕ ಭಾಷಣಕ್ಕೆ ಪೂರ್ಣವಿರಾಮವಿಟ್ಟರು.