ಒಳಮೀಸಲಾತಿ ಹಂಚಿಕೆಯಲ್ಲಿ ಅಲೆಮಾರಿ ಮತ್ತು ಅತಿ ಸೂಕ್ಷ್ಮ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿ ಅಲೆಮಾರಿ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಪರಿಶಿಷ್ಟ ಜಾತಿಗಳ ಮೀಸಲಾತಿ ಹಂಚಿಕೆ ಮಾಡುವಾಗ ಅಲೆಮಾರಿ ಮತ್ತು ಅತಿ ಸೂಕ್ಷ್ಮ ಸಮುದಾಯಗಳನ್ನು ಸ್ಪೃಶ್ಯ ಜಾತಿಗಳಿರುವ ‘ಸಿ’ ಗುಂಪಿಗೆ ಸೇರಿಸಲಾಗಿತ್ತು. ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಆಯೋಗವು ಅಲೆಮಾರಿಗಳನ್ನು ‘ಪ್ರವರ್ಗ- 1’ರಲ್ಲಿ ಇಟ್ಟು, ಶೇ. 1ರಷ್ಟು ಮೀಸಲಾತಿ ನೀಡಿತ್ತು. ಆದರೆ ಸರ್ಕಾರ ‘ಪ್ರವರ್ಗ-1’ರಲ್ಲಿದ್ದ ಅಲೆಮಾರಿಗಳನ್ನು ಸ್ಪೃಶ್ಯ ಜಾತಿಗಳೊಂದಿಗೆ ವಿಲೀನ ಮಾಡಿತ್ತು. ಇದರ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವ ಅಲೆಮಾರಿಗಳು, ಕೊನೆಗೂ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಅಲೆಮಾರಿ ಮುಖಂಡರಾದ ಎಚ್.ವಿ. ಮಂಜುನಾಥ, ಬಿ.ಎಚ್. ಮಂಜುನಾಥ್, ಬಿ.ಆರ್. ಲೋಹಿತಾಕ್ಷ, ಡಿ.ಆರ್.ಚಿನ್ನ, ಬಸವರಾಜ್ ನಾರಾಯಣಕರ್, ವೆಂಕಟರಾಮಯ್ಯ, ಶಿವಕುಮಾರ್, ಡಿ.ಶಾಂತರಾಜ, ಡಿ. ಹನುಮಂತ, ವಸಂತ ಕೆ. ಹಂಡಿಗುಂಡಿ ಅರ್ಜಿಯನ್ನು ಸಲ್ಲಿಸಿದ್ದಾರೆ.
