ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಗೆ ತಡೆ ನೀಡುವಂತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಮತ್ತೆ ಕೈಗೆತ್ತಿಕೊಂಡಿತು. ವಾದ ಮತ್ತು ಪ್ರತಿವಾದಗಳು ಮುಂದುವರಿದಿದ್ದು, ವಿಚಾರಣೆಯನ್ನು ಬುಧವಾರಕ್ಕೆ (ನಾಳೆಗೆ) ಕೋರ್ಟ್ ಮುಂದೂಡಿದೆ.
ಸಮೀಕ್ಷೆಗಾಗಿ ಆಗಸ್ಟ್ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಮಧ್ಯಂತರ ಆದೇಶ ನಿರೀಕ್ಷಿಸುತ್ತಿರುವ ಅರ್ಜಿದಾರರ ವಾದವನ್ನು ತಿರಸ್ಕರಿಸಬೇಕೆಂದು ಸರ್ಕಾರ ಪಟ್ಟು ಹಿಡಿದಿದೆ.
“ಇದು ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೇ ಹೊರತು ಜಾತಿಗಣತಿಯಲ್ಲ. ಅರ್ಜಿದಾರರು ಇದನ್ನು ಜಾತಿ ಗಣತಿ ಎಂದು ವಾದಿಸುತ್ತಿರುವುದು ಸರಿಯಲ್ಲ. ಸರ್ಕಾರದ ನೀತಿ ನಿರೂಪಣೆಗಳಿಗೆ ದತ್ತಾಂಶ ಅಗತ್ಯ” ಎಂಬ ವಾದವನ್ನು ಸರ್ಕಾರ ಮುಂದಿಟ್ಟಿದೆ.
ಇಂದು ಏನೇನಾಯ್ತು?
ಅರ್ಜಿದಾರ ಬಿ.ಆರ್.ಉದಯ್‌ಶಂಕರ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, “ಸಮೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರವು ಎರಡು ಆದೇಶಗಳನ್ನು ಹೊರಡಿಸಿದೆ. ಇದರ ಜೊತೆಗೆ ಹಿಂದುಳಿದ ವರ್ಗಗಳ ಆಯೋಗವು ಹ್ಯಾಂಡ್‌ಬುಕ್ ಸಿದ್ಧಪಡಿಸಿದೆ. ಇದರಲ್ಲಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕುಟುಂಬದ ಎಲ್ಲರೂ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ನೀಡಬೇಕು ಎಂದು ಹೇಳಲಾಗಿದೆ. ರಾಜ್ಯ ಸರ್ಕಾರಕ್ಕೆ ಜನರ ಹಿಂದುಳಿದಿರುವಕೆ ಪತ್ತೆ ಮಾಡುವ ಸಮೀಕ್ಷೆ ನಡೆಸುವ ಅಧಿಕಾರಿ ಇಲ್ಲ. ಸಂವಿಧಾನಕ್ಕೆ 105ನೇ ತಿದ್ದುಪಡಿ ಮಾಡುವುದಕ್ಕೂ ಮುನ್ನ ಸಂವಿಧಾನದ 342(ಎ) ಏನಿದೆ ಎಂಬುದನ್ನು ಪರಿಶೀಲಿಸಬೇಕು. ಒಟ್ಟಾರೆ ಹೇಳುವುದಾದರೆ ಸಮೀಕ್ಷೆ ನಡೆಸುವ ಅಧಿಕಾರ ಸರ್ಕಾರಕ್ಕೆ ಇಲ್ಲ” ಎಂದರು.
ಇದನ್ನೂ ಓದಿರಿ: ಜಾತಿ ಸಮೀಕ್ಷೆ | ಕಾಲಂ 27ಸಿ ಅಡಿಯಲ್ಲಿ ಸ್ವಯಂ ಸೇವಾ ಕ್ಷೇತ್ರದ ನೌಕರರು ತಮ್ಮ ವೃತ್ತಿ ದಾಖಲಿಸಲು ಕರೆ!
ಹಿರಿಯ ವಕೀಲ ಜಯಕುಮಾರ್ ಪಾಟೀಲ್ ವಾದ ಮಂಡಿಸಿ, “ರಾಜ್ಯಾದಾದ್ಯಂತ ಸಮೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಎಲ್ಲಾ ಜಾತಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಇರುವ, ಇಲ್ಲದಿರುವ, ಊಹೆಯ ಜಾತಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಸಮೀಕ್ಷೆಯ ಹ್ಯಾಂಡ್‌ಬುಕ್ ನೋಡಿದರೆ ಇದು ಗಣತಿ ಎಂದೇ ಕಾಣುತ್ತದೆ. ಇದು ಗಣತಿ ಕಾಯಿದೆ ಅಡಿ ಕೇಂದ್ರ ಸರ್ಕಾರಕ್ಕೆ ಬರುವ ವಿಚಾರ. ಕಾರ್ಯಕಾರಿ ಆದೇಶದ ಮೂಲಕ ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯು ಕಾನೂನುಬಾಹಿರ. ಪ್ರತಿಯೊಂದು ಜಾತಿಯ ಸಂಖ್ಯೆಯನ್ನು ತಿಳಿದು, ರಾಜಕೀಯಕ್ಕೆ ಬಳಕೆ ಮಾಡುವುದು ಸಮೀಕ್ಷೆಯ ಹಿಂದಿನ ಉದ್ದೇಶವಾಗಿದೆ” ಎಂದು ಪ್ರತಿಪಾದಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, “ಜಾತಿ ಸಮೀಕ್ಷೆಯೂ ಗಣತಿಯ ಭಾಗ ಎಂದು ಕೇಂದ್ರ ಸರ್ಕಾರ ಹೇಳಿದೆ. 2027 ಮಾರ್ಚ್ 1ಕ್ಕೆ ಜನಗಣತಿ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. 2015ರಲ್ಲಿ ಸರ್ಕಾರವು ಇಂಥದ್ದೇ ಸಮೀಕ್ಷೆ ನಡೆಸಿತ್ತು. ಆ ಸಂದರ್ಭದಲ್ಲಿ ಸರ್ಕಾರವು ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ 29-2-2024ರಂದು ಜಯಪ್ರಕಾಶ್ ಹೆಗ್ಡೆ ಅವರ ನೇತೃತ್ವದ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತ್ತು. ಈ ವರದಿಯ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಂಡಿದೆ ಎಂಬುದನ್ನು ತಿಳಿಸಿಲ್ಲ” ಎಂದು ಆಕ್ಷೇಪಿಸಿದರು.
“ಹಿಂದಿನ ಸಮೀಕ್ಷೆಗೆ ರಾಜ್ಯ ಸರ್ಕಾರವು 150 ಕೋಟಿ ರೂಪಾಯಿ ಖರ್ಚು ಮಾಡಿದೆ. ಈಗ 1,561 ಜಾತಿಗಳನ್ನು ಉಲ್ಲೇಖಿಸಲಾಗಿದೆ. ಇಷ್ಟು ಜಾತಿಗಳ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ. ಹೊಸದಾಗಿ ಜಾತಿಗಳನ್ನು ಸೃಷ್ಟಿಸಲಾಗಿದೆ. ಇಲ್ಲಿ ನಕಲಾಗುವ ಸಾಧ್ಯತೆ ಇದೆ. ಇದರಿಂದ ದೋಷಪೂರಿತ ದತ್ತಾಂಶ ಸಂಗ್ರಹವಾಗುವ ಸಾಧ್ಯತೆ ಇದೆ” ಎಂದು ವಾದ ಮಂಡಿಸಿದರು.
ಇದನ್ನೂ ಓದಿರಿ: ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ | ಮೊದಲ ದಿನದ ಕಾರ್ಯ ನೀರಸ, ಕೇವಲ 10,642 ಜನರ ದತ್ತಾಂಶ ಸಂಗ್ರಹ
“ಸಂಗ್ರಹಿಸುವ ದತ್ತಾಂಶವನ್ನು ಹೇಗೆ ಜತನದಿಂದ ಕಾಪಾಡಲಾಗುತ್ತದೆ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ಇದು ರಾಜ್ಯ ಸರ್ಕಾರದ ಬಳಿ ಇರುತ್ತದೋ ಅಥವಾ ಬೇರೆಯವರ ಬಳಿ ಇರಲಿದೆಯೇ ಎಂಬುದು ಗೊತ್ತಿಲ್ಲ. ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿರುವ ಈ ದತ್ತಾಂಶವನ್ನು ಸೋರಿಕೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು” ಎಂದು ಹೇಳಿದರು.
ಖಾಸಗಿತನಕ್ಕೆ ಸಂಬಂಧಿಸಿದ ಕೆ ಎಸ್ ಪುಟ್ಟಸ್ವಾಮಿ ವರ್ಸಸ್ ಕೇಂದ್ರ ಸರ್ಕಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಅವರು, “ಸಂಗ್ರಹಿಸುವ ದತ್ತಾಂಶವನ್ನು ದುರ್ಬಳಕೆ ಮಾಡುವುದಿಲ್ಲ ಎಂಬುದಕ್ಕೆ ಖಾತರಿ ಏನು? ಸಮೀಕ್ಷೆಯ ಹ್ಯಾಂಡ್‌ಬುಕ್ ನೋಡಿದರೆ ಇದು ವ್ಯಕ್ತಿಯ ಪ್ರೊಫೈಲ್ ಮಾಡುವುದಲ್ಲದೆ ಬೇರೇನೂ ಅಲ್ಲ. ನೀವು ನಾಸ್ತಿಕನೋ, ಆಸ್ತಿಕನೋ ಎಂಬ ಪ್ರಶ್ನೆಯೂ ಇದೆ. ಇಂಥ ಸಮೀಕ್ಷೆಗೆ ಅನುಮತಿಸಬಾರದು” ಎಂದು ತಿಳಿಸಿದರು.
ಅರ್ಜಿದಾರ ಕೆ.ಎನ್.ಸುಬ್ಬಾರೆಡ್ಡಿ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, “2002ರಲ್ಲಿ 207 ಜಾತಿಗಳಿದ್ದವು. ಈಗ ಸಮೀಕ್ಷೆಯ ಹ್ಯಾಂಡ್‌ಬುಕ್‌ನಲ್ಲಿ 1,561 ಜಾತಿಗಳನ್ನು ಉಲ್ಲೇಖಿಸಲಾಗಿದೆ. ದಕ್ಷಿಣ ಭಾರತದ ಜಾತಿ ವ್ಯವಸ್ಥೆಯಲ್ಲಿ ಪ್ರಮುಖ ಜಾತಿ ಅದರಲ್ಲಿ ಉಪ ಜಾತಿ ಬರುತ್ತದೆ. ಬಣಜಿಗ ಕ್ರಿಶ್ಚಿಯನ್, ಬೆಸ್ತರು ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಚರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಗೊಲ್ಲ ಕ್ರಿಶ್ಚಿಯನ್, ಗೊಂಡ ಕ್ರಿಶ್ಚಿಯನ್.. ಈ ರೀತಿ 50ಕ್ಕೂ ಜಾತಿ-ಧರ್ಮಗಳನ್ನು ಸೇರ್ಪಡೆ ಮಾಡಲಾಗಿದೆ. ಪ್ರಮುಖ ಜಾತಿ ಅದರ ಅಡಿ ಉಪಜಾತಿಗಳು ಬರುತ್ತಿದ್ದವು. ಒಕ್ಕಲಿಗ ಜಾತಿಯ ಜಾತಿ ಅಡಿ ಸರ್ಪ ಒಕ್ಕಲಿಗ.. ಹಾಲಿ ಸಮೀಕ್ಷೆಯಲ್ಲಿ ಪ್ರಮುಖ ಜಾತಿಯನ್ನು ಉಪ ಜಾತಿ ಮಾಡಲಾಗಿದೆ. ಇದು ಅವೈಜ್ಞಾನಿಕ ಗುಂಪನ್ನು ಆಯೋಗ ಮಾಡುತ್ತಿದೆ. ಇದಕ್ಕೆ 450 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇಲ್ಲಿ ವಿವೇಚನ ಬಳಕೆ ಮಾಡಲಾಗಿಲ್ಲ” ಎಂದು ವಾದಿಸಿದರು.
“ಅಪ್ಲಿಕೇಶನ್‌ನಲ್ಲಿ ಒಂದು ಉಪಜಾತಿಗೆ ಮಾತ್ರ ಲಾಗ್ ಆಗಬೇಕಿದೆ. ಇದು ಸ್ವೇಚ್ಛೆಯ ಕ್ರಮವಾಗಿದೆ. 2002ರಲ್ಲಿ 800ಪ್ಲಸ್ ಜಾತಿಗಳಿದ್ದವು, ಈಗ ಇದು 1,500ಕ್ಕೂ ಹೆಚ್ಚು ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಇದಕ್ಕೆ ಯಾವುದೇ ಅಧ್ಯಯನವಾಗಿಲ್ಲ. ಮೇಲೆ ಯಾರೋ ಒಬ್ಬ ಕೂತು ಹೇಳಿದ್ದಾನೆ ಅದನ್ನು ಆಯೋಗ ಸಮೀಕ್ಷೆಗೆ ಸೇರಿಸಿದೆ” ಎಂದು ಹೇಳಿದರು.
“ಕೃತಕವಾಗಿ ಜಾತಿಗಳನ್ನು ಸೃಷ್ಟಿಸಲಾಗಿದೆ. ಪ್ರಮುಖ ಜಾತಿಯನ್ನು ಉಲ್ಲೇಖಿಸದಿರುವುದು ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಸರ್ಕಾರದ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ. ಎಸ್‌ಟಿ/ಎಸ್‌ಟಿ ಸಮೀಕ್ಷೆಗೆ ಒಂದು ಆಯೋಗ, ಇನ್ನೊಂದು ಜಾತಿಗೆ ಹಿಂದುಳಿದ ವರ್ಗಗಳ ಆಯೋಗ… ಏನಿದು?” ಎಂದು ಪ್ರಶ್ನಿಸಿದರು.
“ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಲು ದತ್ತಾಂಶವನ್ನು ರಾಜ್ಯ ಸರ್ಕಾರ ಸಂಗ್ರಹಿಸಲು ಮುಂದಾಗಿದೆ” ಎಂದು ಟೀಕಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಶ್ರೀರಂಗ ಸುಬ್ಬಣ್ಣ, “ರಾಜ್ಯ ಸರ್ಕಾರಿದಂದ ಸಮಾಲೋಚನೆ ನಡೆಯಬೇಕು ಎಂದು ಮನವಿ ಸಲ್ಲಿಸಿದ್ದೇವೆ. ಆದರೆ, ಅದನ್ನು ಪರಿಗಣಿಸಲಾಗಿಲ್ಲ. ಬ್ರಾಹ್ಮಣ ಜಾತಿಯಲ್ಲಿ 57 ಉಪ ಉಪಜಾತಿಗಳನ್ನು ಸರ್ಕಾರ ಉಲ್ಲೇಖಿಸಿದೆ. ಇದಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ್ದು, ಯಾವುದೇ ಉತ್ತರ ಬಂದಿಲ್ಲ. ದಸರಾ ರಜೆಯ ಸಂದರ್ಭದಲ್ಲಿ ಸಾಕಷ್ಟು ಮಂದಿ ಪ್ರವಾಸದಲ್ಲಿರುತ್ತಾರೆ. ಈ ಸಂದರ್ಭದಲ್ಲಿ ದತ್ತಾಂಶ ಸಂಗ್ರಹಿಸಲು ಸರ್ಕಾರ ಮುಂದಾಗಿದೆ. ವಿದ್ಯುತ್ ಮೀಟರ್ ರೀಡಿಂಗ್‌ಗೆ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಸಮೀಕ್ಷೆಗೆ ಮೀಟರ್ ರೀಡರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಇಲ್ಲಿ ಸೂಕ್ಷ್ಮವಾದ ದತ್ತಾಂಶವನ್ನು ಗೌಪ್ಯವಾಗಿ ಕಾಪಾಡುವ ಸಾಧ್ಯತೆ ಇಲ್ಲ” ಎಂದು ತಿಳಿಸಿದರು.
“ಮನೆಗಳ ಗಣತಿ ಮಾಡಲೇ ಕನಿಷ್ಠ ಆರು ತಿಂಗಳು ಬೇಕು. 17 ದಿನಗಳಲ್ಲಿ ಸಮೀಕ್ಷೆ ನಡೆಸಲು ಆಯೋಗ ಮುಂದಾಗಿದೆ. ಕಾಂತರಾಜ್ ಸಮೀಕ್ಷೆಯ ವರದಿಯನ್ನು ಇದುವರೆಗೂ ಸರ್ಕಾರ ಬಹಿರಂಗಪಡಿಸಿಲ್ಲ. ಈ ದತ್ತಾಂಶವನ್ನು ಅಪ್‌ಡೇಟ್ ಮಾಡಲು ಸರ್ಕಾರ ಮತ್ತೆ 420 ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾಗಿದೆ” ಎಂದರು.
ಸರ್ಕಾರದ ವಾದವೇನು?
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅರ್ಜಿದಾರರ ಆಕ್ಷೇಪಗಳಿಗೆ ಉತ್ತರಿಸಿದರು.
“ಅರ್ಜಿದಾರರು ಜಾತಿ ಸಮೀಕ್ಷೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದು ಸಾಮಾಜಿಕ-ಆರ್ಥಿಕ ಸಮೀಕ್ಷೆ ಮಾತ್ರ. ಸಮೀಕ್ಷೆ ಎಂಬುದು ಸಂಸ್ಕೃತ, ಹಿಂದಿ ಮತ್ತು ಕನ್ನಡ ಪದವಾಗಿದೆ” ಎಂದರು. ಅದಕ್ಕೆ ಪೀಠ, “ಅರ್ಜಿದಾರರ ವಾದವು ಎಲ್ಲರ ಜಾತಿಯನ್ನು ಪತ್ತೆ ಮಾಡಲಾಗುತ್ತಿದೆ ಎಂಬುದಾಗಿದೆ” ಎಂದು ತಿಳಿಸಿತು.
ಅದಕ್ಕೆ ಸಿಂಘ್ವಿ, “ಇದು ಸಾಮಾಜಿಕ-ಆರ್ಥಿಕ ಸಮೀಕ್ಷೆಯಾಗಿದ್ದು, ಅದನ್ನು ಕಲ್ಯಾಣ ಕಾರ್ಯಕ್ರಮ ರೂಪಿಸಲು ಸರ್ಕಾರ ಬಳಕೆ ಮಾಡಲಿದೆ. ಈ ಹಿಂದೆ ರಾಜ್ಯದಲ್ಲಿ ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗಗಳನ್ನು ರಚಿಸಲಾಗಿತ್ತು. ಇಂತಿಷ್ಟೇ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆಯೇ? ಸರ್ಕಾರವು ತನ್ನ ಇಚ್ಛೆಗೆ ತಕ್ಕಂತೆ ಸಮೀಕ್ಷೆ ಮಾಡಲಾಗುತ್ತದೆಯೇ? ಸರ್ಕಾರ ಹಾಗೆ ಮಾಡಲಾಗದು. ಹಿಂದುಳಿದುವರಿಕೆಯನ್ನು ಸರ್ಕಾರ ಹೇಗೆ ಪತ್ತೆ ಮಾಡಬೇಕು? ಅದಕ್ಕೆ ದತ್ತಾಂಶ ಬೇಕಲ್ಲವೇ? ಅದಕ್ಕೆ ಸರ್ಕಾರ ಸಮೀಕ್ಷೆ ನಡೆಸುತ್ತಿದೆ” ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿರಿ: ಕರ್ನಾಟಕದಲ್ಲಿ ಮಾತ್ರ ರಸ್ತೆ ಗುಂಡಿಗಳ ಸಮಸ್ಯೆ ಇದೆ ಎಂದು ಬಿಂಬಿಸುವುದು ಸರಿಯಲ್ಲ: ಡಿ ಕೆ ಶಿವಕುಮಾರ್
“ಕಾಯಿದೆಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಬಾರದು ಎಂದರೆ ಹೇಗೆ? ರಾಜ್ಯ ಸರ್ಕಾರಕ್ಕೆ ಅಧಿಕಾರ ಇಟ್ಟುಕೊಂಡು ಸಮೀಕ್ಷೆ ನಡೆಸಲಾಗುತ್ತಿದೆ. ಯಾತಕ್ಕೆ? ಹೇಗೆ ಮಾಡಲಾಗುತ್ತಿದೆ ಎಂಬುದು ನೀತಿಯ ಭಾಗವಾಗಿದೆ. ಸಂವಿಧಾನದ 15 (4) ಮತ್ತು 16 (4) ವಿಧಿಗಳನ್ನು ಒಳಗೊಂಡಂತೆ ಸಂವಿಧಾನದ ಅಡಿಯಲ್ಲಿನ ಹೆಚ್ಚಿನ ಕ್ರಮಗಳು ಪ್ರಾಯೋಗಿಕ ದತ್ತಾಂಶಕ್ಕೆ ಒತ್ತು ನೀಡುತ್ತವೆ. ಇಲ್ಲದಿದ್ದರೆ ವರ್ಗೀಕರಣವು ನಿಯಂತ್ರಣದಲ್ಲಿ ಇರುವುದಿಲ್ಲ” ಎಂದು ಪ್ರತಿಕ್ರಿಯಿಸಿದರು.
“ದತ್ತಾಂಶ ರಕ್ಷಣೆಗೆ ಏನು ಕ್ರಮಕೈಗೊಳ್ಳಲಾಗಿದೆ?” ಎಂದು ಕೋರ್ಟ್ ಕೇಳಿತು. ಹಿಂದುಳಿದ ವರ್ಗಗಳ ಆಯೋಗದ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, “ಜನರನ್ನು ಪತ್ತೆ ಮಾಡಲು ಮಾತ್ರ ಆಧಾರ್ ಬಳಕೆ ಮಾಡಲಾಗುತ್ತಿದೆ. ಎಲ್ಲಾ ದತ್ತಾಂಶವನ್ನು ಸ್ವಇಚ್ಛೆಯಿಂದ ಜನರು ನೀಡಬಹುದಾಗಿದೆ” ಎಂದು ಸ್ಪಷ್ಟಪಡಿಸಿದರು.
ಪೀಠವು ವಿಚಾರಣೆಯನ್ನು ನಾಳೆಗೆ ಮುಂದೂಡಿತು.
(ವರದಿ ಕೃಪೆ: ಬಾರ್ ಅಂಡ್ ಬೆಂಚ್)
