ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಸೇವೆಯಿಂದ ಅಮಾನತುಗೊಂಡಿದ್ದ ಜಿಲ್ಲೆಯ ಇಬ್ಬರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಾನೂನು ನೆಮ್ಮದಿ ದೊರೆತಿದೆ. ಶಿಕ್ಷಕರ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಕಲಬುರಗಿ ಪೀಠವು ಗುರುವಾರ (ಸೆಪ್ಟೆಂಬರ್ 3) ತಡೆಯಾಜ್ಞೆ ನೀಡಿದೆ.
ಹುಣಸಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಗುರುರಾಜ ಜೋಷಿ ಹಾಗೂ ಕುಪ್ಪಿ ಸರ್ಕಾರಿ ಶಾಲೆಯ ಶಿಕ್ಷಕ ಅಣ್ಣಾಸಾಹೇಬ ದೇಶಮುಖ್ ಅಮಾನತು ಶಿಕ್ಷೆಗೆ ಗುರಿಯಾಗಿದ್ದವರು. ಈ ಇಬ್ಬರೂ ಶಿಕ್ಷಕರು ಕಳೆದ 2025ರ ಅಕ್ಟೋಬರ್ 10ರಂದು ನಡೆದಿದ್ದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಸಂಘದ ಪೂರ್ಣ ಗಣವೇಷ ಧರಿಸಿ ಪಾಲ್ಗೊಂಡಿದ್ದರು.
ಶಿಕ್ಷಕರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಚನ್ನಬಸಪ್ಪ ಮುಧೋಳ ಅವರು, ಇಬ್ಬರೂ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿ ಆಗಸ್ಟ್ 20ರಂದು ಆದೇಶ ಹೊರಡಿಸಿದ್ದರು.
ಈ ಬೆಳವಣಿಗೆಯ ಬೆನ್ನಲ್ಲೇ, ತಮ್ಮ ವಿರುದ್ಧದ ಅಮಾನತು ಆದೇಶವನ್ನು ಪ್ರಶ್ನಿಸಿ ಶಿಕ್ಷಕರಿಬ್ಬರೂ ಕೆಎಟಿಯ ಕಲಬುರಗಿ ಪೀಠದ ಮೊರೆ ಹೋಗಿದ್ದರು. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿಯು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೊರಡಿಸಿದ್ದ ಅಮಾನತು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.





