ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣವು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾಗಿದೆ. ಆರೋಪವೇ ಇಲ್ಲಎಂಬ ಪ್ರಕರಣ ಇದಲ್ಲ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೆ ಪರಿಗಣಿಸಿರುವುದನ್ನು ಪ್ರಶ್ನಿಸಿ ಯಡಿಯೂರಪ್ಪ ಮತ್ತಿತರರು ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿ, ವಿಚಾರಣೆಗೆ ಅರ್ಹವಾಗಿರುವ ಪ್ರಕರಣ ಇದು ಎಂದು ಹೇಳಿದೆ.
ವಿಚಾರಣೆಯ ವೇಳೆ ಯಡಿಯೂರಪ್ಪ ಪರ ವಕಾಲತ್ತು ಹಾಕಿರುವ ವಕೀಲ ಸಂದೀಪ್ ಪಾಟೀಲ್ ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು, “ಪ್ರಕರಣದ ಕಡತ ನೋಡಿದ್ದು, ಮೇಲ್ನೋಟಕ್ಕೆ ವಿಚಾರಣೆಗೆ ಇದು ಅರ್ಹವಾದ ಪ್ರಕರಣ ಎನ್ನುವುದು ನನ್ನ ಪ್ರಾಮಾಣಿಕ ಅಭಿಪ್ರಾಯ. ಪೋಕ್ಸೊ ಪ್ರಕರಣದಲ್ಲಿ ಕೆಲವೊಮ್ಮ ಸಂತ್ರಸ್ತೆಯ ಹೇಳಿಕೆಯೊಂದೇ ಆರೋಪಿಗೆ ಶಿಕ್ಷೆ ವಿಧಿಸಲು ಸಾಕಾಗುತ್ತದೆ. ಸಂತ್ರಸ್ತೆಯ ತಾಯಿ ಏಕೆ ಯಡಿಯೂರಪ್ಪ ಮನೆಗೆ ಬಂದಿದ್ದರು? ಯಡಿಯೂರಪ್ಪ ಸಂತ್ರಸ್ತೆಗೆ ನೀಡಲು ಹಣ ನೀಡಲು ಮುಂದಾಗಿದ್ದೇಕೆ? ಎಂಬೆಲ್ಲಾ ಅಂಶಗಳು ಸಹ ವಿಚಾರಣೆಗೆ ಅರ್ಹವಾಗಿದೆ” ಎಂದು ಹೇಳಿದರು.
“ನಿಮ್ಮ ವಾದ ಆಲಿಸಲಾಗುವುದು. ಯಡಿಯೂರಪ್ಪಗೆ ಇಷ್ಟು ವಯಸ್ಸಾಗಿದೆ. ಅನಗತ್ಯವಾಗಿ ಸಮನ್ಸ್ ನೀಡಬಾರದೆಂದು ಕೇಳಿದರೆ ಏನಾದರೂ ಮಾಡಬಹುದು. ಯಡಿಯೂರಪ್ಪ ಪ್ರತಿ ಪಕ್ಷದಲ್ಲಿದ್ದಾರೆ. ಅನಗತ್ಯವಾಗಿ ಕಿರುಕುಳ ನೀಡುತ್ತಾರೆಂದು ಹೇಳಬಹುದು. ಕಿರುಕುಳ ತಪ್ಪಿಸಿ, ನ್ಯಾಯಯುತ ವಿಚಾರಣೆಗೆ ಸಂಬಂಧಿಸಿದಂತೆ ರಕ್ಷಣೆ ಮಾಡಬಹುದು. ಅಂತಹ ಅಂಶವನ್ನು ಉಲ್ಲೇಖಿಸಿ, ಮೆರಿಟ್ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ” ಎಂದು ಪೀಠ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ |ಅಂಧಭಕ್ತರ ಕಿವಿಗೆ ಹೂ ಮುಡಿಸಿದ ಮೋಶಾ ಜೋಡಿ!
ಆಗ ಬಿಎಸ್‌ವೈ ಪರ ವಕೀಲ ಸಂದೀಪ್ ಪಾಟೀಲ್, “ನ್ಯಾಯಾಲಯದ ಅಭಿಪ್ರಾಯ ಏನಿದೆ ಎಂಬುದು ಅರ್ಥವಾಗುತ್ತದೆ. ಈ ಕುರಿತು ಅರ್ಜಿದಾರರೊಂದಿಧಿಗೆ ಚರ್ಚಿಸಿ, ವಿಚಾರ ತಿಳಿಸಲಾಗುವುದು ” ಎಂದು ಹೇಳಿದರು. ಹಾಗಾಗಿ, ನ್ಯಾಯಾಲಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಇನ್ನು, ರಾಜ್ಯ ಸರಕಾರ, ತನಿಖಾಧಿಕಾರಿಯು ಸಿಆರ್‌ಪಿಸಿ ಸೆಕ್ಷನ್ 161ರಡಿ ದಾಖಲಿಸಿಕೊಂಡಿರುವ ಹೇಳಿಕೆಯನ್ನು ಮೆಮೊ ಜತೆಗೆ ಸಲ್ಲಿಸಿತು. ಅದನ್ನು ನ್ಯಾಯಾಲಯ ದಾಖಲೆಯಲ್ಲಿ ಸ್ವೀಕರಿಸಿತು. ಇದಕ್ಕೂ ಮುನ್ನ ಬಿಎಸ್‌ವೈ ಪರ ಸಿ.ವಿ.ನಾಗೇಶ್ ಮತ್ತು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರೊ.ರವಿವರ್ಮಕುಮಾರ್ ಸುದೀರ್ಘ ವಾದ ಮಂಡನೆ ಮಾಡಿದರು.
ಪ್ರಕರಣದ ಹಿನ್ನೆಲೆ
‘ನನ್ನ ಮಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಹಾಯ ಮಾಡಬೇಕು’ ಎಂದು ಬೇಡಿ ಬಂದಿದ್ದ ಸಂತ್ರಸ್ತ ಬಾಲಕಿಯ ತಾಯಿ (ಈಗ ಬದುಕಿಲ್ಲ) ನೀಡಿದ್ದ ದೂರಿನ ಅನುಸಾರ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರ್‌ಎಂವಿ ಎರಡನೇ ಹಂತದಲ್ಲಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ‘ಧವಳಗಿರಿ’ ನಿವಾಸದಲ್ಲಿ 2024ರ ಫೆಬ್ರುವರಿ 2ರಂದು ಬೆಳಗ್ಗೆ 11ರಿಂದ 11.30ರ ನಡುವೆ ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.