ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಗಡಿಗಳನ್ನು ಮೀರಿ ಎಲ್ಲ ಶೋಷಿತ ವರ್ಗಗಳನ್ನು ಒಂದೇ ವೇದಿಕೆಯಡಿ ಸಂಘಟಿಸಿದಾಗ ಮಾತ್ರ ನೈಜ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಅಧಿಕಾರ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ಪಿ. ಸುಧಾಮ್ ದಾಸ್ ಪ್ರತಿಪಾದಿಸಿದ್ದಾರೆ.
ಶೋಷಿತ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯ ಮತ್ತು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. “ಒಳಮೀಸಲಾತಿ ಜಾರಿಯ ನಂತರ ದಲಿತ ಸಮುದಾಯಗಳಲ್ಲಿ ಎದುರಾಗಿರುವ ವಿವಿಧ ಗೊಂದಲಗಳು, ಇತರ ಹಿಂದುಳಿದ ಮತ್ತು ಕಡೆಗಣಿಸಲ್ಪಟ್ಟ ಸಮುದಾಯಗಳ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ತಮ್ಮ ಉದ್ದೇಶಿತ ವೇದಿಕೆ ಗುರಿ” ಎಂದು ಹೇಳಿದ್ದಾರೆ.
ಪ್ರಸ್ತುತ ವ್ಯವಸ್ಥೆಯನ್ನು ವಿಶ್ಲೇಷಿಸಿದ ಸುಧಾಮ್ ದಾಸ್, “ರಾಜ್ಯದಲ್ಲಿ ಮಾದಿಗ, ಹೊಲೆಯ, ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಪ್ರತ್ಯೇಕ ನಾಯಕರಿದ್ದಾರೆ. ಆದರೆ, ಎಲ್ಲ ದಲಿತ ಹಾಗೂ ಶೋಷಿತ ಸಮುದಾಯಗಳನ್ನು ಒಟ್ಟಾಗಿ ಸಂಘಟಿಸಿ ಪ್ರತಿನಿಧಿಸುವ ಸಮಗ್ರ ನಾಯಕತ್ವದ ಕೊರತೆಯಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಪ್ರತ್ಯೇಕ ಹಿತಾಸಕ್ತಿಗಳನ್ನು ಬದಿಗೊತ್ತಿ ಸಮುದಾಯಗಳ ಸಾಮೂಹಿಕ ಹಕ್ಕುಗಳಿಗಾಗಿ ಒಂದಾಗುವ ನಾಯಕತ್ವವನ್ನು ಈ ಹೊಸ ಚಳವಳಿ ರೂಪಿಸಲಿದೆ” ಎಂದು ಆಶಯ ವ್ಯಕ್ತಪಡಿಸಿದರು.
ಆಧುನಿಕ ಸಂವಹನ ಮಾಧ್ಯಮಗಳು ಹಾಗೂ ಹೊಸ ಆಲೋಚನೆಗಳ ಮೂಲಕ ಯುವಪಡೆ ಶೋಷಿತ ವರ್ಗಗಳನ್ನು ಸಂಘಟಿಸಬೇಕು ಮತ್ತು ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ಸಭೆಯಲ್ಲಿ ಕರೆ ನೀಡಲಾಗಿದೆ. ವೈಯಕ್ತಿಕ ಸ್ವಾರ್ಥ ಮತ್ತು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮುದಾಯದ ಒಳಿತಿಗಾಗಿ ಒಗ್ಗೂಡಬೇಕು, ಚಳವಳಿಯನ್ನು ಕೆಡವಲು ಬರುವವರನ್ನು ಕಡೆಗಣಿಸಬೇಕು ಎಂಬ ಸಂದೇಶವನ್ನು ಈ ಸಭೆಯಲ್ಲಿ ನೀಡಲಾಗಿದೆ.
ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 60ಕ್ಕೂ ಹೆಚ್ಚು ಪ್ರಮುಖ ಮುಖಂಡರು ಭಾಗವಹಿಸಿದ್ದರು. ದಲಿತ ಎಡ ಮತ್ತು ಬಲ ಸಮುದಾಯಗಳ ಪ್ರತಿನಿಧಿಗಳಷ್ಟೇ ಅಲ್ಲದೆ, ಭೋವಿ, ಲಂಬಾಣಿ, ಕೊರಚ, ಕೊರಮ ಹಾಗೂ ಹಿಂದುಳಿದ ವರ್ಗಗಳ ವಿವಿಧ ಪಂಗಡಗಳ ನಾಯಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.




