ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿದೆ. ಜಾಗತಿಕ ಕಂಪನಿಗಳು ಹೂಡಿಕೆಗೆ ಬೆಂಗಳೂರನ್ನೇ ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳುತ್ತಿವೆ. ಆದರೆ, ನಗರದ ಬೆಳವಣಿಗೆಯ ಜೊತೆಯಲ್ಲೇ ವಾಹನ ದಟ್ಟಣೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಪರಿಣಾಮವಾಗಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ತರಬಹುದಾದ ಸುಧಾರಣೆಗಳು ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಮೂಲಭೂತ ಕಾರಣಗಳನ್ನು ಗುರುತಿಸಿ, ಕಾಲಕಾಲಕ್ಕೆ ತಕ್ಕಂತೆ ಸುಧಾರಣಾ ಕ್ರಮಗಳನ್ನು ಉನ್ನತೀಕರಿಸುವುದು ಅತ್ಯಗತ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಇತರ ಪ್ರಮುಖ ನಗರಗಳಲ್ಲಿರುವ ಯಶಸ್ವಿ ಟ್ರಾಫಿಕ್ ನಿರ್ವಹಣಾ ಮಾದರಿಗಳನ್ನು ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಇತರ ದೇಶಗಳು ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಚಾರ ನಿರ್ವಹಣಾ ಪದ್ಧತಿಗಳನ್ನು ಅಧ್ಯಯನ ಮಾಡಿ, ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ:
* ಅರ್ಬನ್ ಮೊಬಿಲಿಟಿ ಮಿಷನ್ ಜಾರಿ: ನಗರದ ಸಂಚಾರ ದಟ್ಟಣೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಅರ್ಬನ್ ಮೊಬಿಲಿಟಿ ಮಿಷನ್’ ಕಾರ್ಯಕ್ರಮವನ್ನು ಶೀಘ್ರವಾಗಿ ಮತ್ತು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
* ಆರ್ಥಿಕ ವಲಯಗಳ ಮೇಲೆ ವಿಶೇಷ ನಿಗಾ: ಹೆಚ್ಚಿನ ಆರ್ಥಿಕ ಚಟುವಟಿಕೆಗಳು ನಡೆಯುವ ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆಯಾಗುವ ಐಟಿ ಕಾರಿಡಾರ್ಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಅಂತಹ ವಲಯಗಳನ್ನು ಗುರುತಿಸಿ, ಅಲ್ಲಿನ ಸಂಚಾರ ಸುಧಾರಣೆಗೆ ವಿಶೇಷ ಆದ್ಯತೆ ನೀಡಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
* ಅಡಚಣೆಗಳ ನಿವಾರಣೆಗೆ ಸಮನ್ವಯ: ರಸ್ತೆಗಳ ಮಧ್ಯದಲ್ಲಿರುವ ವಿದ್ಯುತ್ ಕಂಬಗಳು ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಇನ್ನಿತರ ಭೌತಿಕ ಅಡಚಣೆಗಳನ್ನು ತಕ್ಷಣವೇ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸೂಚನೆ ನೀಡಿದ್ದಾರೆ.
* ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆ: ಟ್ರಾಫಿಕ್ ಸಮಸ್ಯೆಯನ್ನು ಕೇವಲ ಪೊಲೀಸ್ ಇಲಾಖೆಯಿಂದಲೇ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ, ಸಾರಿಗೆ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಟ್ರಾಫಿಕ್ ನಿರ್ವಹಣೆಗೆ ಪೂರಕವಾಗಿರುವ ಎಲ್ಲ ಇಲಾಖೆಗಳೊಂದಿಗೆ ಪರಸ್ಪರ ಸಹಕಾರ ಮತ್ತು ಸಮನ್ವಯತೆಯೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.



