ಲೇಖಕ ಎಸ್. ಎಲ್. ಭೈರಪ್ಪ ಅವರು ತಮ್ಮ ಅಂತ್ಯಸಂಸ್ಕರಕ್ಕೆ ಸಂಬಂಧಿಸಿದಂತೆ ಬರೆಸಿರುವ ಉಯಿಲು ವಿವಾದಕ್ಕೆ ಕಾರಣವಾಗಿದೆ. ಅವರು ಬರೆಸಿರುವ ಉಯಲಿನ ಪ್ರಕಾರ ತಮ್ಮ ಇಬ್ಬರು ಗಂಡು ಮಕ್ಕಳಾದ ಉದಯ ಶಂಕರ್ ಮತ್ತು ರವಿಶಂಕರ್ ಅವರು ತಮ್ಮ ಅಂತ್ಯಸಂಸ್ಕಾರವನ್ನು ನಡೆಸಬಾರದು ಎಂದು ಸ್ಪಷ್ಟವಾಗಿ ನಿರ್ದೇಶಿಸಿದ್ದಾರೆ. ಬದಲಿಗೆ, ತಮ್ಮ ಮಗಳಂತೆ ಕಾಳಜಿ ವಹಿಸುತ್ತಿರುವ ಉದಯೋನ್ಮುಖ ಲೇಖಕಿ ಸಹನ ವಿಜಯಕುಮಾರ್ ಅವರಿಗೆ ಈ ಜವಾಬ್ದಾರಿಯನ್ನು ವಹಿಸಿದ್ದಾರೆ. ಈ ತಿದ್ದುಪಡಿ ಪತ್ರವನ್ನು ಸೆಪ್ಟೆಂಬರ್ 25, 2025 ರಂದು ಬರೆಸಲಾಗಿದೆ ಎಂದು ತಿಳಿದುಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಭೈರಪ್ಪ ಅವರ ಅಭಿಮಾನಿಯೊಬ್ಬರಾದ ಫಣೀಶ್ ಎಂಬುವರು ಕಲಾಮಂದಿರದ ಆವರಣದಲ್ಲಿ ಉಯಿಲಿನ ವಿವರಗಳನ್ನು ಪ್ರದರ್ಶಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ಬಳಿಕ ಪೊಲೀಸರು ಫಣೀಶ್ ಅವರನ್ನು ವಶಕ್ಕೆ ಪಡೆದು ಕರೆದೊಯ್ದರು. ಇದೇ ಸಂದರ್ಭದಲ್ಲಿ, ಭೈರಪ್ಪ ಅವರ ಮಗ ಉದಯ ಶಂಕರ್ ಅವರು ಮೈಸೂರಿನ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಜಿ & ಡಬ್ಲ್ಯೂ.ಸಿ.ನಂ.15/2025 ಎಂಬ ಪ್ರಕರಣ ದಾಖಲಿಸಿದ್ದು, ಭೈರಪ್ಪ ಅವರ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿ ಕುಂಠಿತವಾಗುತ್ತಿರುವುದರಿಂದ ತಮ್ಮನ್ನು ಪೋಷಕರನ್ನಾಗಿ ನೇಮಿಸಬೇಕೆಂದು ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭೈರಪ್ಪ ಅವರು ಸ್ವ-ಇಚ್ಛೆಯಿಂದ ಪ್ರತಿವಾದಿಯಾಗಿ ಹಾಜರಾಗಿ, ತಮ್ಮ ಉಯಿಲಿನ ತಿದ್ದುಪಡಿಯನ್ನು ಮಾಡಿದ್ದಾರೆ.
ತಿದ್ದುಪಡಿ ಪತ್ರದಲ್ಲಿ, ಹಿಂದಿನ ಉಯಿಲಿನ ತಿದ್ದುಪಡಿಯ (ದಿನಾಂಕ 30-01-2025) ಪುಟ ಸಂಖ್ಯೆ 3, ಪ್ಯಾರಾ 2(i) ಯಲ್ಲಿ ಉದಯ ಶಂಕರ್ ಅವರಿಗೆ ನೀಡಲಾಗಿದ್ದ ರೂ. 50 ಲಕ್ಷಗಳ ಕೊಡುಗೆಯನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ, ಆ ಕೊಡುಗೆಯನ್ನು ನಗದೀಕರಿಸುವ ಅಧಿಕಾರವೂ ರದ್ದಾಗಿದೆ. ಭೈರಪ್ಪ ಅವರ ಪಾರ್ಥೀವ ಶರೀರಕ್ಕೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಅಂತ್ಯಸಂಸ್ಕಾರ ನಡೆಯಬೇಕು ಎಂದು ನಿರ್ದೇಶಿಸಲಾಗಿದೆ. ಈ ಕಾರ್ಯವನ್ನು ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ವಿಧಿವತ್ತಾಗಿ ನಿರ್ವಹಿಸಬೇಕು. ಈ ಜವಾಬ್ದಾರಿಯನ್ನು ಬೆಂಗಳೂರಿನ ಕೆಂಗೇರಿ ಹೋಬಳಿಯ ದುರ್ಗಾನಗರ ಲೇಔಟ್‌ನ ನಿವಾಸಿ ಸಹನ ವಿಜಯಕುಮಾರ್ (ವಯಸ್ಸು ಸುಮಾರು 46 ವರ್ಷ) ನಿರ್ವಹಿಸಬೇಕು.
ಅವರು ಹಲವು ವರ್ಷಗಳಿಂದ ಭೈರಪ್ಪ ಅವರ ಯೋಗಕ್ಷೇಮವನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದು, ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರು. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಯಾವುದೇ ಧಾರ್ಮಿಕ ನಿಷೇಧವಿಲ್ಲ ಎಂಬುದು ಭೈರಪ್ಪ ಅವರಿಗೆ ಮನವರಿಕೆಯಾಗಿದೆ. ಆದರೆ, ತಮ್ಮ ಇಬ್ಬರು ಗಂಡು ಮಕ್ಕಳಾದ ರವಿಶಂಕರ್ ಮತ್ತು ಉದಯ ಶಂಕರ್ ಅವರು ಈ ಕ್ರಿಯೆಯಲ್ಲಿ ತೊಡಗಬಾರದು ಎಂದು ಒತ್ತಿಹೇಳಿದ್ದಾರೆ.
ಈ ತಿದ್ದುಪಡಿ ಪತ್ರವನ್ನು ಬರೆಯುವ ಸಮಯದಲ್ಲಿ ಭೈರಪ್ಪ ಅವರ ಪಂಚೇಂದ್ರಿಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅವರ ಯೋಚನಾ ಮತ್ತು ಬುದ್ಧಿಶಕ್ತಿಯು ಸಂಪೂರ್ಣ ಹತೋಟಿಯಲ್ಲಿದ್ದು, ಯಾವುದೇ ಒತ್ತಡಕ್ಕೆ ಒಳಗಾಗದೆ ಸ್ವ-ಇಚ್ಛೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಉಯಿಲಿನ ಎಲ್ಲ ಅಂಶಗಳು, ದಿನಾಂಕ 15-03-2022 ರ ಮೂಲ ಉಯಿಲು ಮತ್ತು 30-01-2025 ರ ತಿದ್ದುಪಡಿ ಸೇರಿದಂತೆ, ಅವರ ಕಾಲಾನಂತರವೇ ಜಾರಿಗೆ ಬರಬೇಕು. ತಮ್ಮ ಜೀವಿತ ಕಾಲದಲ್ಲಿ ಈ ಉಯಿಲನ್ನು ಪುನಃ ತಿದ್ದುಪಡಿ ಮಾಡುವ ಅಥವಾ ರದ್ದುಪಡಿಸುವ ಹಕ್ಕನ್ನು ಭೈರಪ್ಪ ಅವರು ಉಳಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಭೈರಪ್ಪ ಸ್ಮಾರಕ
ಎಸ್ ಎಲ್ ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವೀಂದ್ರ ಕಲಾಮಂದಿರದಲ್ಲಿಂದು ಎಸ್.ಎಲ್. ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಭೈರಪ್ಪ ಅವರು ಬಹುಕಾಲ ಮೈಸೂರಿನಲ್ಲೇ ಕಾಲ ಕಳೆದದ್ದರಿಂದ ಅಲ್ಲೇ ಸ್ಮಾರಕ ನಿರ್ಮಿಸುತ್ತೇವೆ ಎಂದು ತಿಳಿಸಿದ್ದಾರೆ.
