ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗಳಿಗಾಗಿ ಅವಶ್ಯವಿರುವ ಜಮೀನಿಗೆ ಪರಿಹಾರ ನೀಡಲು ಮತ್ತು ಭೂಸ್ವಾಧೀನ ಸಂಬಂಧ ಅಂತಿಮ ನಿರ್ಣಯ ಕೈಗೊಳ್ಳಲು ಸೆ.16ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ಜಮೀನು ಕಳೆದುಕೊಳ್ಳುವ ರೈತರಿಗೆ ನ್ಯಾಯಯುತವಾದ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದ್ದು, ಸಂತ್ರಸ್ತರಿಗೆ ಸೂಕ್ತ ಪುನರ್ವಸತಿಯನ್ನು ಸಹ ಕಲ್ಪಿಸಲಾಗುವುದು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು.
ಗುರುವಾರ ಸಿಎಂ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ಬಗ್ಗೆ ಚರ್ಚಿಸಲು ವಿಶೇಷ ಸಚಿವ ಸಂಪುಟ ಸಭೆ ಕರೆಯುವ ಬಗ್ಗೆ ಸಿಎಂ ತೀರ್ಮಾನಿಸಿದ್ದಾರೆ ಎಂದು ಹೆಚ್.ಕೆ. ಪಾಟೀಲ್ ಮಾಧ್ಯಮದವರಿಗೆ ಸಭೆ ಬಳಿಕ ವಿವರಿಸಿದರು.
“ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳುವ ಕುರಿತಂತೆ ಒಪ್ಪಂದದ ಐತೀರ್ಪು ರಚಿಸಲು, ಏಕರೂಪದ ದರ ನಿಗದಿಪಡಿಸಲು ಹಾಗೂ ಇನ್ನಿತರ ಆಡಳಿತಾತ್ಮಕ ವಿಷಯಗಳಿಗೆ ಅನುಮೋದನೆ ನೀಡುವ ಕುರಿತು ವಿಸ್ತೃತವಾದ ಹಾಗೂ ಸಕಾರಾತ್ಮಕ ಚರ್ಚೆ ನಡೆದಿದೆ” ಎಂದರು.
“ಕೃಷ್ಣಾ ಮೇಲ್ದಂಡೆ ಯೋಜನೆ 3 ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರ ಬದ್ಧತೆ ತೋರಿದೆ. ಅದನ್ನು ಪೂರ್ಣಗೊಳಿಸುವ ಸಂಬಂಧ ಸಿಎಂ ತಮ್ಮ ಸ್ಪಷ್ಟ ನಿಲುವು ತಿಳಿಸಿದ್ದಾರೆ. ಆ ಭಾಗದ ಮುಖಂಡರು, ರೈತರನ್ನು ಕರೆದು ಸಿಎಂ ಹಲವು ಬಾರಿ ಸಭೆ ಮಾಡಿದ್ದಾರೆ. ಬಹಳಷ್ಟು ಪ್ರಮಾಣದ ಕೇಸ್ ಕೋರ್ಟ್ನಲ್ಲಿದೆ. ಈ ಯೋಜನೆಗೆ ಮುಳುಗಡೆಯಾಗುವ ಭೂಮಿ 75,000 ಎಕರೆ. ಈ ಯೋಜನೆಯನ್ನು ಪೂರ್ಣ ಮಾಡಲು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಭೂಮಿ ಸ್ವಾಧೀನ ಪಡಿಸಲು ಅನೇಕ ಪ್ರಕ್ರಿಯೆಗಳಿವೆ” ಎಂದು ಹೇಳಿದರು.
“ತಾಂತ್ರಿಕ ಹಾಗೂ ಕಾನೂನಾತ್ಮಕ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆ ಸಚಿವ ಸಂಪುಟ ಹಲವು ಅಂಶಗಳ ಬಗ್ಗೆ ಚರ್ಚೆ ಮಾಡಿದೆ. ರೈತ ಮುಖಂಡರ ಅಭಿಪ್ರಾಯಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ಚರ್ಚೆ ಅಪೂರ್ಣವಾಗಿದೆ. ಸೆ.16ರಂದು ಈ ವಿಚಾರವಾಗಿ ಸಚಿವ ಸಂಪುಟದ ವಿಶೇಷ ಸಭೆಯನ್ನು ಕರೆದು, ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ” ಎಂದರು.
ಏನಿದು ಯೋಜನೆ
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರಲ್ಲಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟವನ್ನು 519 ಮೀಟರ್ನಿಂದ 524 ಮೀಟರ್ಗೆ ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100 ಟಿಎಂಸಿ ನೀರಿನ ಪ್ರಮಾಣ ಸಂಗ್ರಹ ಅಂದಾಜಿಸಲಾಗಿದೆ.
ಯೋಜನೆ ಅನುಷ್ಠಾನಕ್ಕೆ ಒಟ್ಟು 1,33,867 ಎಕರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಇದರಲ್ಲಿ 75,563 ಎಕರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಸೇರಿದೆ. ಇದುವರೆಗೆ 29,566 ಎಕರೆಗೆ ಭೂಸ್ವಾಧೀನ ಐತೀರ್ಪು ಹೊರಡಿಸಲಾಗಿದೆ. 59,354 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ.
ಮುಳುಗಡೆ ಹೊಂದಲಿರುವ ಜಮೀನನ್ನು 2ಹಂತದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸುವ ಬದಲು ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ 51,148 ಕೋಟಿ ಯೋಜನಾ ಮೊತ್ತ ಅಂದಾಜಿಸಲಾಗಿತ್ತು. ಈಗ ಪರಿಷ್ಕೃತ 87,818 ಕೋಟಿ ಅಂದಾಜಿಸಲಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ 17,627 ಕೋಟಿ ಆರಂಭದಲ್ಲಿ ಅಂದಾಜಿಸಲಾಗಿತ್ತು. ಪ್ರಸ್ತುತ ಪರಿಷ್ಕೃತ ಮೊತ್ತ 40,557.09 ಕೋಟಿ ರೂಪಾಯಿ ಅಂದಾಜಿಸಲಾಗಿದೆ.