14 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರು ತನಿಖೆ ಕೋರಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಪ್ರಕರಣವನ್ನು ರಾಜ್ಯ ಸರ್ಕಾರ ಮರು ತನಿಖೆ ನಡೆಸುವುದು ಸೂಕ್ತ ಎಂದು ಹೇಳಿದೆ.
ಸಿಬಿಐ ತನಿಖೆಯನ್ನು ಅತ್ಯಂತ ಕಳಪೆ ಎಂದು ಟೀಕಿಸಿರುವ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ್ ಅವರಿದ್ದ ಪೀಠ, “ವಾಸ್ತವವಾಗಿ, ಸಿಬಿಐನ ತನಿಖಾಧಿಕಾರಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹಿಂದೆ ಸಿಐಡಿ ಸಂಗ್ರಹಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿ ತಮ್ಮ ವರದಿಯನ್ನು ನೀಡಿದ್ದಾರೆ. ಯಾವುದೇ ಸ್ವತಂತ್ರ ತನಿಖೆ ನಡೆಸಿಲ್ಲ” ಎಂದು ಪ್ರಕರಣದ ವಿವರಗಳನ್ನು ಪರಿಶೀಲಿಸಿದ ನಂತರ ಪೀಠ ಗಮನಿಸಿತು ಎಂದು ಹೇಳಿದ್ದಾರೆ.
ಅಪರಾಧ ಸ್ಥಳಕ್ಕೆ ಭೇಟಿ ನೀಡದಿರುವ ಬಗ್ಗೆ ಮತ್ತು ಬಲಿಪಶುವಿನ ತಾಯಿಯ ಹೇಳಿಕೆಯನ್ನು ದಾಖಲಿಸಲು ಸಿಬಿಐ ವಿಫಲವಾದ ಬಗ್ಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅರ್ಜಿದಾರರ ಪರವಾಗಿ ಹಾಜರಾದ ನಿಯೋರ್ ವಕೀಲರಾದ ಶೋಭಾ ಗುಪ್ತಾ, ಆನಂದ್ ಸಂಜಯ್ ಎಂ ನುಲಿ ಮತ್ತು ಶೇಖರ್ ಜಿ ದೇವಾಸಾ, “ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಎಸ್‌ಐಟಿಯಿಂದ ಹೊಸ ತನಿಖೆ ನಡೆಸಬೇಕು” ಎಂದು ಬಲವಾಗಿ ಒತ್ತಾಯಿಸಿದರು. ಅವರು ಗಂಭೀರ ಲೋಪಗಳನ್ನು ಎತ್ತಿ ತೋರಿಸಿದರು.
2012ರಲ್ಲಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಅಂದಿನಿಂದಲೂ, ಪ್ರಕರಣವನ್ನು ಸಮರ್ಪಕ ತನಿಖೆ ನಡೆದಿಲ್ಲ. ಘಟನೆ ನಡೆದು 14 ವರ್ಷ ಕಳೆದರೂ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಆದ್ದರಿಂದ, ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮೂಲಕ ಅಥವಾ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕೋರಿ ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಅರ್ಜಿ ಸಲ್ಲಿಸಿದ್ದರು.




