ಮೈಸೂರಿನಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, “ಕ್ಷುಲ್ಲಕ ರಾಜಕಾರಣದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿದೆ. ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು ಸಿಗಬೇಕು ಎಂಬುದು ಕೇಂದ್ರದ ಉದ್ದೇಶ. ಆದರೆ ರಾಜ್ಯ ಸರ್ಕಾರವೇ ಸ್ಪಂದಿಸುತ್ತಿಲ್ಲ” ಎಂದರು.
“ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲೂ ರೈಲ್ವೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಹಲವು ಬಾರಿ ಮನವಿ ಮಾಡಿದರೂ ಸಿದ್ದರಾಮಯ್ಯ ಸರ್ಕಾರದಿಂದ ಸ್ಪಂದನೆ ಇಲ್ಲವಾಗಿದೆ. ಇಚ್ಛಾಶಕ್ತಿ ಕೊರತೆ ಕಂಡುಬರುತ್ತಿದೆ. ಚಾಮರಾಜನಗರದಿಂದ ತಮಿಳುನಾಡಿನ ಮೆಟ್ಟುಪಾಳ್ಯಂವರೆಗೆ ರೈಲು ಮಾರ್ಗ ವಿಸ್ತರಿಸುವುದು, ಮೈಸೂರು-ಕುಶಾಲನಗರ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಅಗತ್ಯವಾದ ಭೂಮಿ ಕೊಡುತ್ತಿಲ್ಲ” ಎಂದು ಗಮನ ಸೆಳೆದರು.
“ನವದೆಹಲಿಗೆ ಬಂದಿದ್ದಾಗ ಮುಖ್ಯಮಂತ್ರಿಗೆ, ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಸ್ತುವಾರಿ ಕಾರ್ಯದರ್ಶಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ತಿಳಿಸಿದ್ದೆ. ಮನವಿಪತ್ರ ಸಲ್ಲಿಸುವಂತೆ ತಿಳಿಸಿದ್ದರೂ ಸಲ್ಲಿಸಿಲ್ಲ” ಎಂದರು.
“ರಾಜ್ಯ ಸರ್ಕಾರವು ಜನರ ದಿಕ್ಕು ತಪ್ಪಿಸುವ ಕೆಲಸಗಳನ್ನು ಮಾಡುವ ಬದಲಿಗೆ, ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಈ ವಿಷಯದಲ್ಲಿ ರಾಜ್ಯದೊಂದಿಗೆ ಚರ್ಚೆಗೆ ನಾನು ಸಿದ್ದವಿದ್ದೇನೆ. ಲೆವೆಲ್ ಕ್ರಾಸಿಂಗ್ ಇಲ್ಲದಂತೆ ಮಾಡುವುದಕ್ಕಾಗಿ ಮೇಲ್ವೇತುವೆ ಹಾಗೂ ಕೆಳಸೇತುವೆಗಳಿಗೆ ಶೇ 100ರಷ್ಟು ಹಣವನ್ನು ಕೇಂದ್ರದಿಂದಲೇ ಕೊಡುತ್ತಿದ್ದೇವೆ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿರುವುದನ್ನು ಮನಗಂಡು ಪ್ರಧಾನಿಯವರೇ ಕೊಡುತ್ತಿದ್ದಾರೆ” ಎಂದು ಹೇಳಿದರು.
“ಬೆಂಗಳೂರು ನಗರದ 100 ಕಿ.ಮೀ. ವ್ಯಾಪ್ತಿಯಲ್ಲಿ 175 ಲೆವೆಲ್ ಕ್ರಾಸಿಂಗ್‌ಗಳಿವೆ. ಇವುಗಳು ಇಲ್ಲದಂತೆ ಮೂರು ವರ್ಷಗಳಲ್ಲಿ ಮಾಡಲಾಗುವುದು. ಒಟ್ಟು ₹ 48ಸಾವಿರ ಮೊತ್ತದ ಹಳೆಯ ಯೋಜನೆಯನ್ನು ಕೈಗೆತ್ತಿಕೊಂಡು ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದೇವೆ” ಎಂದರು.
“ನರೇಂದ್ರಮೋದಿ ಪ್ರಧಾನಿಯಾಗಿ 12 ವರ್ಷ ತುಂಬುತ್ತಿರುವ ವೇಳೆಯಲ್ಲಿ ದೇಶದ ಜನರಿಗೆ ನೀಡಿರುವ ಜಿಎಸ್‌ಟಿ ಗಿಫ್ಟ್ ನೀಡಿದ್ದಾರೆ. ಜನರ ಅನುಕೂಲಕ್ಕಾಗಿ ಜಿಎಸ್‌ಟಿಗೆ ಗಣನೀಯವಾಗಿ ಸುಧಾರಣೆ ತರಲಾಗಿದೆ. ಇದು ಯಾವುದೇ ಚುನಾವಣೆಯನ್ನು ಮುಂದಿಟ್ಟುಕೊಂಡು ಮಾಡಿರುವ ಕ್ರಮ ಅಲ್ಲ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಜನರ ಅನುಕೂಲಕ್ಕಾಗಿ ಹೊಸ ನೀತಿ ಮಾಡಲಾಗುತ್ತಿದೆ” ಎಂದು ಹೇಳಿದರು.
ಚಾಮುಂಡಿ ಬೆಟ್ಟದ ಶಿಷ್ಟಾಚಾರ, ಸಂಪ್ರದಾಯ ಪಾಲಿಸಿ
“ನಂಬಿಕೆಗೆ, ಭಕ್ತಿಗೆ, ಇತಿಹಾಸಕ್ಕೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ. ದಸರಾ ಉದ್ಘಾಟಕರಿಗೆ ತಾಯಿ ಚಾಮುಂಡಿಯ ಇತಿಹಾಸ ಉತ್ಸವ, ಆರಾಧನೆ, ಸಂಪ್ರದಾಯವನ್ನು ಮೊದಲು ತಿಳಿಸಿ. ಸಂಪ್ರದಾಯ ಅರಿತು ಅವರು ತಮ್ಮ ಕಾರ್ಯ ಮಾಡಲಿ. ದಸರಾ ಉದ್ಘಾಟಕರು ಈ ಸ್ಥಾನಕ್ಕೆ ಅರ್ಹರೋ ಅಥವಾ ಇಲ್ಲವೋ ಎಂಬ ಚರ್ಚೆ ಮಾಡಲ್ಲ. ನಮ್ಮ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ಉದ್ಘಾಟಕರು ನಡೆದುಕೊಳ್ಳಲಿ” ಎಂದರು.
ತುಮಕೂರಿನಿಂದ ಸ್ಪರ್ಧಿಸೋದಿಲ್ಲ
“ತುಮಕೂರಿನಲ್ಲಿ ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ. ಹೀಗಾಗಿ ಅಲ್ಲಿ ಮುಂದೆ ಚುನಾವಣೆಗೆ ಸ್ಪರ್ಧಿಸೋದಿಲ್ಲ ಅಂತಾ ಹೇಳಿದ್ದೀನಿ. ಇನ್ನು ಮುಂದೆ ಬೇರೆ ಕಡೆಗೆ ಹೋಗೋಣ ಅಂತಾ. ಎಲ್ಲಿ ಅಂತಾ ನಿರ್ಧಾರ ಆಗಿಲ್ಲ. ದೇವರ ಆಶೀರ್ವಾದ, ದೇವರ ಇಚ್ಚೆ ಏನಿದೆಯೋ ಗೊತ್ತಿಲ್ಲ” ಎಂದು ಹೇಳಿದರು.