ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಎನ್ನುವ ಪದವನ್ನು ಕಿತ್ತು ಹಾಕಬೇಕು ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆ ಬೆನ್ನಲ್ಲೇ ಕೇಂದ್ರ ಕೃಷಿ ಸಚಿವರು ಇದಕ್ಕೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ.
ವಾರಾಣಸಿಯಲ್ಲಿ ಮಾತನಾಡಿದ ಅವರು, “ಭಾರತದಲ್ಲಿ ಸಮಾಜವಾದ ಅಗತ್ಯವಿಲ್ಲ, ಜಾತ್ಯತೀತತೆ ಭಾರತದ ಸಂಸ್ಕೃತಿಯ ಭಾಗವಲ್ಲ” ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವ ಘಟನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಧರ್ಮನಿರಪೇಕ್ಷತೆ ನಮ್ಮ ದೇಶದ ಸಂಸ್ಕೃತಿಯ ಭಾಗವೂ ಅಲ್ಲ, ಹೀಗಾಗಿ ಭಾರತದಲ್ಲಿ ಸಮಾಜವಾದ ಅಗತ್ಯವಿಲ್ಲ. ಇದರ ಬಗ್ಗೆ ಚರ್ಚೆ ನಡೆಯಬೇಕು” ಎಂದಿದ್ದಾರೆ.
“ಅಧಿಕಾರವನ್ನು ಉಳಿಸಿಕೊಳ್ಳಲು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದರು. ಆಂತರಿಕ ಅಥವಾ ಬಾಹ್ಯ ಭದ್ರತೆಗೆ ಯಾವುದೇ ಬೆದರಿಕೆ ಇರಲಿಲ್ಲ. ಪ್ರಧಾನ ಮಂತ್ರಿ ಕುರ್ಚಿಗೆ ಮಾತ್ರ ಬೆದರಿಕೆ ಇತ್ತು. ಹೀಗಾಗಿ ಸಚಿವ ಸಂಪುಟ ಸಭೆಯನ್ನೂ ನಡೆಸದೇ 1975ರ ಜೂನ್ 25 ರಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು” ಎಂದು ಚೌಹಾಣ್ ವಾಗ್ದಾಳಿ ನಡೆಸಿದರು.
ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವ ಜಿತೇಂದ್ರ ಸಿಂಗ್ ಕೂಡ ಶುಕ್ರವಾರ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಸಮಾಜವಾದ ಹಾಗೂ ಜಾತ್ಯತೀತ ಪದಗಳು ಡಾ. ಭೀಮರಾವ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಭಾಗವಾಗಿರಲಿಲ್ಲ. ಸರಿಯಾಗಿ ಆಲೋಚನೆ ಮಾಡುವ ನಾಗರಿಕರಿಗೆ ಇದು ಅರ್ಥವಾಗುತ್ತದೆ” ಎಂದು ಹೇಳಿದ್ದರು.