ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕ್ಷೀಣಿಸಿದ್ದ ಮಳೆ, ಮತ್ತೆ ಚುರುಕುಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ವರದಿ ತಿಳಿಸಿದೆ.
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಜುಲೈ 18 ಮತ್ತು 19ರಂದು ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಈಗಾಗಲೇ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಅಂಕೋಲಾ ಪಟ್ಟಣವೊಂದರಲ್ಲೇ ಬರೋಬ್ಬರಿ 275 ಮಿ.ಮೀ.ನಷ್ಟು ದಾಖಲೆಯ ಮಳೆ ಸುರಿದಿದೆ. ಅಂತೆಯೇ, ಕಾರವಾರ ತಾಲೂಕಿನ ಕದ್ರಾ ಮತ್ತು ಕುಮಟಾ ತಾಲೂಕಿನ ಹನೇಹಳ್ಳಿಯಲ್ಲಿ 231 ಮಿ.ಮೀ. ಮಳೆ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ ಮತ್ತು ಹೊನ್ನಾವರ ತಾಲೂಕುಗಳ ವಿವಿಧ ಗ್ರಾಮೀಣ ಭಾಗಗಳಲ್ಲೂ ಬಿರುಗಾಳಿ ಸಹಿತ ಜಿಟಿಜಿಟಿ ಮಳೆ ಮುಂದುವರಿದಿದೆ.
ಉಡುಪಿಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ 183 ಮಿ.ಮೀ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನೀರಮಾರ್ಗದಲ್ಲಿ 178.5 ಮಿ.ಮೀ ಮಳೆಯಾಗಿದೆ. ಭಟ್ಕಳದ ಶಿರಾಲಿ ಮತ್ತು ದಕ್ಷಿಣ ಕನ್ನಡದ ಮುಲ್ಕಿ ಸಮೀಪದ ಕಿಲಪಾಡಿಯಲ್ಲಿ ತಲಾ 172.5 ಮಿ.ಮೀ ಮಳೆಯಾಗಿದೆ. ಕುಂದಾಪುರ ತಾಲೂಕಿನ ಹಳ್ಳಿಹೊಳೆಯಲ್ಲೂ 147 ಮಿ.ಮೀ ನಷ್ಟು ಉತ್ತಮ ಮಳೆಯಾಗಿದೆ.
ಮಲೆನಾಡು ಭಾಗದಲ್ಲೂ ಮಳೆ ಆರ್ಭಟ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಮತ್ತು ಆಗುಂಬೆಯಲ್ಲಿ ಕ್ರಮವಾಗಿ 105 ಮಿ.ಮೀ ಮತ್ತು 104.2 ಮಿ.ಮೀ ನಷ್ಟು ಮಳೆ ಸುರಿದಿದೆ. ತುಂಗಾ ಮತ್ತು ಭದ್ರಾ ನದಿಗಳ ಜಲಾನಯನ ಪ್ರದೇಶಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ನದಿಗಳ ನೀರಿನ ಮಟ್ಟದಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ಮುಂಬರುವ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಇರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.



