ಕುರುಬ ಸಮುದಾಯಕ್ಕೆ ಈವರೆಗೂ ಯಾವುದೇ ಕೊಡುಗೆ ನೀಡದ ಸಿದ್ದರಾಮಯ್ಯ ಈಗ ಎಸ್ಟಿ ಸಮುದಾಯಕ್ಕೆ ಸೇರಿಸುವುದಾಗಿ ಹೇಳುತ್ತಿದ್ದಾರೆ. ಇದು ಕೇವಲ ನಾಟಕ, ಸಿಎಂ ಸ್ಥಾನಕ್ಕೆ ಸಂಕಷ್ಟ ಬಂದಿದೆ. ಈಗ ಕುರುಬರು ನೆನಪಾಗಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಟೀಕಿಸಿದರು.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಬಂದಾಗಲೆಲ್ಲಾ ಕುರುಬರ ನೆನಪಾಗುತ್ತದೆ. ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಎಂದೋ ಈ ಕೆಲಸ ಮಾಡಬಹುದಿತ್ತು. ಆದರೆ ಅದನ್ನು ಮಾಡಿಲ್ಲ” ಎಂದು ಹರಿಹಾಯ್ದರು.
“ಕುರುಬ ಸಮುದಾಯದ ನಾಯಕರನ್ನು ವ್ಯವಸ್ಥಿತವಾಗಿ ತುಳಿದಿದ್ದಾರೆ. ನನ್ನನ್ನು ಸಹ ಸಿದ್ದರಾಮಯ್ಯ ತುಳಿದಿದ್ದಾರೆ. ಕುರುಬ ನಾಯಕರು ಬೆಳೆಯಲು ಅವರು ಬಿಟ್ಟಿಲ್ಲ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳುವ ಸಿದ್ದರಾಮಯ್ಯ ಸಮುದಾಯದ ಪರವಾಗಿ ಏನು ಹೋರಾಟ ಮಾಡಿದ್ದಾರೆ? ಬರೀ ಬೊಗಳೆ ಬಿಟ್ಟುಕೊಂಡು ಓಡಾಡ್ತಿದ್ದಾರೆ. ಇದೇ ಅವರ ಸಾಧನೆ” ಎಂದು ವಾಗ್ದಾಳಿ ನಡೆಸಿದರು.
“ಕುರುಬ ಸಮುದಾಯವನ್ನು ಎಸ್ಟಿ ಟ್ಯಾಗ್ ಮಾಡಬೇಕು ಎಂದು ಸಿದ್ದರಾಮಯ್ಯ ಎಂದೂ ಸಚಿವ ಸಂಪುಟದಿಂದ ಪಾಸ್ ಮಾಡಿಲ್ಲ. ಯಾವತ್ತಿಗೂ ವಿರೋಧಿಸಿದವರು. ಆದರೆ ಬಿಜೆಪಿಯವರು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ನಾವೆಲ್ಲ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದ್ದೆವು. ಕುಲಶಾಸ್ತ್ರೀಯ ಅಧ್ಯಯನವನ್ನು ಮಾಡಲಾಗಿತ್ತು. ನಂತರ ಬಂದ ಸಿದ್ದರಾಮಯ್ಯ ಸರ್ಕಾರ ಅದನ್ನು ಸುಮ್ಮನೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರು. ಕಾನೂನು ಪ್ರಕಾರ ಅದು ಆಗಲಿಲ್ಲ” ಎಂದರು.
“ಕುರುಬ ಸಮುದಾಯದ ನಾಯಕತ್ವವವನ್ನು ತುಳಿದರು. ಪರಿಶಿಷ್ಠ ಪಂಗಡಕ್ಕೆ ಸೇರಬೇಕೆಂದು ಹೋರಾಟ ಮಾಡಿಕೊಂಡು ಬಂದೆವು. ಆದರೆ ಯಾವತ್ತಾರೂ ಸಿದ್ದರಾಮಯ್ಯ ಸಹಾಯ ಮಾಡಿದ್ದಾರಾ? ನಾಲ್ಕು ಜನರನ್ನು ಎಂಎಲ್ ಸಿ ಮಾಡಿದ್ದೀರಲ್ಲ ಅದರಲ್ಲಿ ಯಾರಾದರೂ ಹಿಂದುಳಿದ ವರ್ಗದವರು ಇದ್ದಾರಾ? ಎಚ್ ಎಂ ರೇವಣ್ಣ ಅವರನ್ನು ಮಾಡಬಹುದಿತ್ತಲ್ವಾ” ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಜಾತಿ ಗಣತಿಗೆ ಆದೇಶಿಸಿರುವ ಬಗ್ಗೆ ಮಾತನಾಡಿ, “ಕಾಂತರಾಜು ಆಯೋಗ ನೀಡಿರುವ ಜಾತಿಗಣತಿ ವರದಿ ನೀಟಾಗಿದೆ. ಆದರೆ, ಅದನ್ನು ಜಾರಿಗೊಳಿಸಲು ಧೈರ್ಯವನ್ನೇ ತೋರಲಿಲ್ಲ. ಕಾಂತರಾಜು ಆಯೋಗ ನೀಡಿದ ಜಾತಿ ಗಣತಿ ವರದಿಯನ್ನು 10 ವರ್ಷ ಕಾಲ ತಲೆಕೆಳಗೆ ಇಟ್ಟುಕೊಂಡು ಮಲಗಿದ್ದರು. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ವಿರೋಧಿ ಎಂಬುದಕ್ಕೆ ಇದು ಸಾಕ್ಷಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.