ʼಶರಾವತಿ ಪಂಪ್ಡ್ ಸ್ಟೋರೇಜ್ʼ: ಪರಿಸರವಾದಿಗಳು ವಿರೋಧಿಸುತ್ತಿರುವುದೇಕೆ?

Date:

Advertisements

ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ರಾಜ್ಯ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಮುಂದಾಗಿದೆ. ಈ ಯೋಜನೆಯಿಂದ ರಾಜ್ಯ ಸರ್ಕಾರವು 2000 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಿದೆ.‌ ಇದಕ್ಕಾಗಿ ಈಗಾಗಲೇ ಟೆಂಡರ್ ಸಹ ಕರೆದು ಕೆಲಸ ನಿರ್ವಹಿಸಲು ಗುತ್ತಿಗೆ ನೀಡಿದೆ.‌ ಇದರ ಬೆನ್ನಲ್ಲೇ ಈ ಯೋಜನೆಗೆ ಸ್ಥಳೀಯ ಹಾಗೂ ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತವಾಗಿದೆ. ಅಸಲಿಗೆ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ‌ ಎಂದರೇನು? ಇದರದ ಉಪಯೋಗ, ಸಾಧಕ, ಭಾದಕಗಳೇನು? ಸ್ಥಳೀಯ ಹಾಗೂ ಪರಿಸರವಾದಿಗಳ ವಿರೋಧ ಏಕೆ? ಈ ಬಗ್ಗೆ ತಜ್ಞರು ಏನೆನ್ನುತ್ತಾರೆ? ಎನ್ನುವುದನ್ನು ಅವಲೋಕಿಸುವುದು ಮುಖ್ಯವಾಗುತ್ತದೆ.

ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ನಾಲ್ಕು ವಿದ್ಯುತ್​ಗಾರಗಳಿಂದ 1469.20 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರು ಗೇರುಸೊಪ್ಪ ಅಣೆಕಟ್ಟೆಗೆ ಹೋಗುತ್ತದೆ. ಅಲ್ಲಿಯೂ 240 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಿ, ಅಲ್ಲಿಂದ ಶರಾವತಿ ಮುಂದೆ ಸಾಗಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ.

ಈಗ ಯೋಜಿಸಿರುವ ಶರಾವತಿ ಪಂಪ್ಡ್​ ಸ್ಟೋರೇಜ್ ಯೋಜನೆಯಂತೆ, ಗೇರುಸೊಪ್ಪ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ಮತ್ತೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ವಿದ್ಯುತ್ ಬಳಸಿಕೊಂಡು ತಲಕಳಲೆ ಅಣೆಕಟ್ಟೆಗೆ ತರಲಾಗುತ್ತದೆ. ಹಾಗೇ ಎತ್ತಿ ತಂದ ನೀರಿನಿಂದ ಮತ್ತೆ 2000 ಮೆಗಾ ವ್ಯಾಟ್ ವಿದ್ಯುತ್ತನ್ನು ಉತ್ಪಾದಿಸುವುದು ಯೋಜನೆಯ ಉದ್ದೇಶವಾಗಿದೆ.

ಶರಾವತಿ ಪಂಪ್ಡ್‌ ಸ್ಟೋರೇಜ್‌ ಎನ್ನುವುದು ಸುಮಾರು 10500 ಕೋಟಿ ಯೋಜನಾ ವೆಚ್ಚದ ಬೃಹತ್‌ ಯೋಜನೆಯಾಗಿದೆ. ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಅರಣ್ಯ ಭೂಮಿಯನ್ನೊಳಗೊಂಡ ಸುಮಾರು 19.982 ಹೆಕ್ಟೇರ್ (ಭೂಮಿಯ ಒಳಗೆ), 34.173 ಹೆಕ್ಟೇರ್ (ಭೂಮಿಯ ಮೇಲ್ಮೈ) ಸೇರಿದಂತೆ ಒಟ್ಟು 54.155 ಹೆಕ್ಟೇರ್‌ ಅರಣ್ಯ ಭೂಪ್ರದೇಶವನ್ನೊಳಗೊಂಡಿದೆ. 0.1 ಹೆಕ್ಟೇರ್ (ಭೂಮಿಯ ಒಳಗೆ), 88.508 ಹೆಕ್ಟೇರ್ (ಭೂಮಿಯ ಹೊರಗೆ) ಸೇರಿದಂತೆ ಒಟ್ಟು 88.608 ಹೆಕ್ಟೇರ್ ಅರಣ್ಯೇತರ ಭೂಮಿ ಯೋಜನೆಗೆ ಬೇಕಾಗಿದೆ. ಅಲ್ಲಿಗೆ ಒಟ್ಟು 20082 ಹೆಕ್ಟೇರ್ (ಭೂಮಿಯ ಒಳಗೆ), 122.681 (ಭೂಮಿಯ ಹೊರಗೆ) ಭೂಪ್ರದೇಶ ಬೇಕಾಗಿದೆ.

ಸಾಗರ ತಾಲೂಕಿನ ತಳಕಳಲೆ ಗ್ರಾಮದಿಂದ 3.63 ಹೆಕ್ಟೇರ್‌ ಭೂ ಪ್ರದೇಶ ಯೋಜನೆಗೆ ಒಳಗೊಳ್ಳಲಿದೆ. ಆ ಪೈಕಿ ಸರ್ಕಾರಿ ಶಾಲೆ-1, ಮನೆಗಳು-8, ದನದ ಕೊಟ್ಟಿಗೆ-7, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ- 0.404 ಹೆಕ್ಟೇರ್ ಭೂ ಭಾಗ- ಮನೆಗಳು-4, ಮಳಿಗೆ-3, ದೇವಾಲಯ ತಡೆಗೋಡೆ-2, ಬೆಗುಡಿಗ್ರಾಮ- 20.497 ಹೆಕ್ಟೇರ್ – ಸರ್ಕಾರಿ ಅಂಗನವಾಡಿ-1, ಮನೆಗಳು-6, ದನದ ಕೊಟ್ಟಿಗೆ-4, ಬಾವಿ-1, ದೇವಾಲಯ-1 ಸೇರಿದಂತೆ ಒಟ್ಟು ಎರಡು ಜಿಲ್ಲೆಗಳಿಂದ 24.31 ಹೆಕ್ಟೇರ್ ಭೂ ಭಾಗ ಯೋಜನೆಯ ಭಾಗವಾಗಲಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ವಿಭಾಗದ 745 ಮರಗಳು, ಶಿವಮೊಗ್ಗ ವನ್ಯಜೀವಿ ವಲಯದ 1518 ಮರಗಳು, ಉತ್ತರ ಕನ್ನಡದ ಹೊನ್ನಾವರ ವಿಭಾಗದ 13756 ಮರಗಳು ಕಟಾವಾಗಲಿವೆ.

1002355087

ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸಲು ಡಿಸೆಂಬರ್ 2023ರಲ್ಲಿ ನೀಡಲಾದ ಹೊಸ TOR ಪ್ರಕಾರ EIA ಅಧ್ಯಯನಗಳು ಪೂರ್ಣಗೊಂಡಿದೆ. ಇದರ ವರದಿ ಅಂತಿಮಗೊಳಿಸಲಾಗಿದೆ. ಪರಿಸರ ಅನುಮತಿಯನ್ನು (EC) MoEF & CC ಯಿಂದಪಡೆಯ ಬೇಕಾಗಿರುವುದು ಬಾಕಿ ಇದೆ. 2025ರ ಜೂನ್‌ 26ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಸ್ಥಾಯಿ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ತಾತ್ಕಾಲಿಕ ಅನುಮತಿ ನೀಡಲಾಗಿದೆ. ಯೋಜನೆಯನ್ನು ಶರಾವತಿ ಕಣಿವೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು, ಯೋಜನೆಯ ಕೆಳಮಟ್ಟದಲ್ಲಿ ಗೇರುಸೊಪ್ಪ ಹಾಗೂ ಮೇಲ್ಪಟ್ಟದಲ್ಲಿ ತಳಕಳಲೆ ಜಲಾಶಯಗಳು ಅಸ್ತಿತ್ವದಲ್ಲಿ ಇವೆ. ಎರಡೂ ಜಲಾಶಯವನ್ನು ಏಳು ಕಿಲೋಮೀಟರ್ ಸುರಂಗ ಮಾರ್ಗದ ಮೂಲಕ ಜೋಡಿಸಿ ನೀರು ಹರಿಬಿಟ್ಟು ವಿದ್ಯುತ್ ಉತ್ಪಾದನೆಗೆ ಕಾರ್ಯನಿರ್ವಹಿಸಲಾಗುವುದು ಎಂದು ಯೋಜನೆಯ ರೂಪುರೇಷೆಗಳು ತಿಳಿಸುತ್ತಿವೆ.

ಈ ಯೋಜನೆ ಪಶ್ಚಿಮ ಘಟ್ಟ ವಲಯದಲ್ಲಿ ಬರುತ್ತದೆ. ಹೆಚ್ಚುವರಿಯಾಗಿ ಅರಣ್ಯ ಭೂಮಿಯನ್ನು ಪಡೆಯಲಾಗುತ್ತದೆ. ಪರಿಸರ ಸೂಕ್ಷ್ಮವಲಯವಾಗಿರುವ ಈ ಪ್ರದೇಶ ಅತ್ಯಂತ ಹಳೆಯದಾದ ಮತ್ತು ಇತರೆ ಭಾಗದಲ್ಲಿ ಸಿಗದಂತಹ ಪ್ರಭೇದದ ಸಸ್ಯಗಳು ಇಲ್ಲಿವೆ. ಇದಲ್ಲದೇ ಇದು ಅವನತಿಯಲ್ಲಿ ಇರುವ ಸಿಂಗಳೀಕಗಳ ಆವಾಸ ಸ್ಥಾನ ಕೂಡ. ಇನ್ನು ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯದಿಂದ ಭೂಕುಸಿತ ದುರಂತಗಳು ನಡೆದಿದೆ. ಇದಲ್ಲದೇ ಅಭಿವೃದ್ಧಿ ಕಾರ್ಯದಿಂದ ನದಿಯ ದಿಕ್ಕು ಸಹ ಬದಲಾಗಿದೆ. ಹಲವು ಜೀವ ವೈವಿಧ್ಯ ಹೊಂದಿರುವ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಮುಂದಾದರೆ, ಜೀವ ಸಂಕುಲಕ್ಕೆ ಆಪತ್ತು ಎದುರಾಗಲಿದೆ ಎನ್ನುವುದು ಪರಿಸರವಾದಿಗಳ ಆತಂಕ.

ಈಗಾಗಲೇ ಶರಾವತಿ ಜಲವಿದ್ಯುತ್ ಯೋಜನೆಯಿಂದ ಸಾವಿರಾರು ಜನ ತಮ್ಮ ನೆಲ ಕಳೆದುಕೊಂಡು ಸೂಕ್ತ ಪರಿಹಾರ, ಉದ್ಯೋಗದ ಭರವಸೆಯೂ ಸಮರ್ಪಕವಾಗಿ ಈಡೇರಿಲ್ಲ. ಇನ್ನೂ ಸುರಂಗ ಮಾರ್ಗ ಮಾಡುವುದರಿಂದ ಭೂಕುಸಿತದ ಆತಂಕವಿದ್ದು ಪರಿಸರಕ್ಕೆ ದೊಡ್ಡ ಹಾನಿಯಾಗುವ ಸಾಧ್ಯತೆಗಳು ಇವೆ. ಹೀಗೆ ಹತ್ತು ಹಲವು ಕಾರಣಗಳಿಂದ ಈ ಯೋಜನೆಗೆ ಪರಿಸರವಾದಿಗಳು ಹಾಗೂ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯ ಮೊದಲ ಹಂತದ ಹಣ ಸಹ ಬಿಡುಗಡೆಯಾಗಿದ್ದು, ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಸಂಪೂರ್ಣವಾಗಿ ಅನುಷ್ಠಾನಗೊಳ್ಳುವ ಸಾಧ್ಯತೆಗಳಿವೆ.

ಹೊನ್ನಾವರ ತಾಲೂಕಿನ ಸೂರ್ಯನ ಬೆಳಕನ್ನೇ ಕಾಣದ ನೆರಳನ್ನೇ ಹೀರಿ ಬದುಕುವ ಕತ್ತಲೆ ಕಾನು ಎಂದೇ ಕರೆಯಲ್ಪಡುವ ಕಾಡು ಈ ಯೋಜನೆಯಿಂದ ಅಪಾಯಕ್ಕೆ ಸಿಲುಕಲಿದೆ. ಮನುಷ್ಯನ ಉಗಮಕ್ಕೂ ಮೊದಲೇ ಇಲ್ಲಿ ಸಸ್ಯಗಳು ಬೆಳೆದುನಿಂತಿದ್ದವು ಎನ್ನಲಾಗುತ್ತದೆ. ಮನುಷ್ಯ ಕಾಲೇ ಇಡದ ಜಾಗಗಳು ಸಹ ಇಲ್ಲಿವೆ. ಇಂತಹ ಸ್ಥಳಗಳು ನಾಶವಾದರೆ ಮತ್ತೆ ಸೃಷ್ಟಿಯಾಗುವುದಿಲ್ಲ. ಇನ್ನು ಸಿಂಹದ ಬಾಲದ ಅಪರೂಪದ ಸಿಂಗಳೀಕಗಳು ಇಲ್ಲಿದ್ದು, ಅವುಗಳ ಆವಾಸ ಸ್ಥಾನ ನಾಶದಿಂದ ಅವನತಿಯಾಗುವ ಭೀತಿ ಇದೆ.

ಇದನ್ನೂ ಓದಿ: ಶಿವಮೊಗ್ಗ | ಶ್ರೀ ಮೈಲಾರೇಶ್ವರ ದಸರಾ ಹಾಗೂ ರಾಜಬೀದಿ ಉತ್ಸವ

ಈ ಯೋಜನೆಯ ಪರ ವಿರೋಧದ ಬಗ್ಗೆ ಸಲ್ಲಿಸಲು ಅಹವಾಲು ಸಭೆಯಲ್ಲಿ ಸಲ್ಲಿಕೆಯಾದ ಉತ್ತರ ಕನ್ನಡ ಜಿಲ್ಲೆಯ 6000 ಹಾಗೂ ಶಿವಮೊಗ್ಗ ಜಿಲ್ಲೆಯ 4000 ಅರ್ಜಿಗಳಲ್ಲಿ ಯಾವ ಅರ್ಜಿಯೂ ಯೋಜನೆಯ ಪರವಾಗಿಲ್ಲ. ಹೀಗಿದ್ದರೂ ಜನರ ವಿರೋಧದ ನಡುವೆ ಈ ಯೋಜನೆಯ ಅಗತ್ಯವೇನು ಎಂಬುದು ಸದ್ಯದ ಪ್ರಶ್ನೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಪರಿಸರವಾದಿಗಳು ಹಾಗೂ ಸ್ಥಳೀಯರು ಆಂತಕಕ್ಕೆ ಒಳಗಾಗುವುದು ಬೇಡ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾಗರ ತಾಲೂಕಿನ ತಳಕಳಲೆ ಡ್ಯಾಂ ಹಾಗೂ ಉತ್ತರ ಕನ್ನಡದ ಗೇರುಸೊಪ್ಪ ಜಲಾಶಯಗಳನ್ನು ಬಳಸಿ‌ಕೊಳ್ಳಲಾಗುತ್ತಿದೆ. ಇದರಿಂದ ಹೊಸ ಅಣೆಕಟ್ಟು ನಿರ್ಮಾಣ ಮಾಡುತ್ತಿಲ್ಲ. ಇದರಿಂದ ಯಾವುದೇ ಪ್ರದೇಶ ಮುಳುಗಡೆ ಆಗುವುದಿಲ್ಲ ಎಂದು ಕೆಪಿಸಿಎಲ್​ ಸ್ಪಷ್ಟೀಕರಣ ನೀಡಿದೆ. ಆದರೂ ಸ್ಥಳೀಯರ ಹಾಗೂ ಪರಿಸರವಾದಿಗಳ ಆತಂಕ ತಗ್ಗಿಲ್ಲ. ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗುವುದೋ; ಅಥವಾ ಪರಿಸರವಾದಿಗಳ, ಸ್ಥಳೀಯ ಸಾಮಾನ್ಯ ಜನರ ವಿರೋಧಕ್ಕೆ ಮಣಿದು ಯೋಜನೆಯನ್ನು ಕೈಬಿಡುವುದೋ ಅಥವಾ ಪರ್ಯಾಯ ಯೋಜನೆಯನ್ನೇನಾದರೂ ತರಲಿದೆಯೇ ಎಂದು ಕಾದುನೋಡಬೇಕಿದೆ.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ರೋಗಿಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್‌ ಆಗ್ರಹ

ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸದೇ, ಔಷಧಿಗಳನ್ನು...

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

Download Eedina App Android / iOS

X