ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 421 ಶಿಶುಗಳು ಸಾವನ್ನಪ್ಪಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಮೈಸೂರು ನಗರ ಹಾಗೂ ಜಿಲ್ಲೆಯ ಜೊತೆಗೆ ನೆರೆಯ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದಲೂ ಹೆರಿಗೆಗಾಗಿ ಈ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಆಗಮಿಸುತ್ತಿರುವ ಹಿನ್ನೆಲೆ, ಆಸ್ಪತ್ರೆಯ ಮೇಲೆ ಅತಿಯಾದ ಒತ್ತಡ ಉಂಟಾಗಿದೆ.
ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಹೆರಿಗೆ ತಜ್ಞರು ಮತ್ತು ಶಿಶು ವೈದ್ಯರ ಅಭಾವದಿಂದ ಗರ್ಭಿಣಿಯರು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದೇ ಆಸ್ಪತ್ರೆಯಲ್ಲಿಯೂ ಅಗತ್ಯ ಸಂಖ್ಯೆಯ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಕೊರತೆ, ಹಾಸಿಗೆಗಳ ಅಭಾವ ಹಾಗೂ ವಿಶೇಷ ನವಜಾತ ಆರೈಕೆ ಘಟಕಗಳ ಕೊರತೆ ಇದೆ ಎಂಬುದು ವರದಿಗಳಿಂದ ಬಹಿರಂಗವಾಗಿದೆ ಎಂದು ಎಐಎಂಎಸ್ಎಸ್ ಸಂಘಟನೆ ಆರೋಪಿಸಿದೆ.
2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 311 ಶಿಶುಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದ್ದು, ಅದರಲ್ಲಿ ಶೇ.55 ರಷ್ಟು ಸಾವುಗಳನ್ನು ಸೂಕ್ತ ಸೌಲಭ್ಯಗಳಿದ್ದರೆ ತಪ್ಪಿಸಬಹುದಾಗಿತ್ತು ಎಂಬ ಅಂಶ ಮತ್ತಷ್ಟು ಆತಂಕ ಹುಟ್ಟಿಸಿದೆ. ಇದು ಸರ್ಕಾರಿ ಆಸ್ಪತ್ರೆಗಳ ದಯನೀಯ ಸ್ಥಿತಿಯನ್ನು ತೆರೆದಿಡುತ್ತದೆ.

ಇದರ ನಡುವೆಯೇ, ಕಡಿಮೆ ದಾಖಲಾತಿ ಇರುವ ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರು ಮತ್ತು ಹೆರಿಗೆ ತಜ್ಞರನ್ನು ವರ್ಗಾವಣೆ ಮಾಡುವ ಯೋಚನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವುದು ಖಂಡನೀಯ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಮೈಸೂರು ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಸುದ್ದಿ ಓದಿದ್ದೀರಾ?ಗುಂಡ್ಲುಪೇಟೆ | 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಈ ಹಿನ್ನೆಲೆಯಲ್ಲಿ ಎಐಎಂಎಸ್ಎಸ್ ಕಾರ್ಯಕರ್ತರು ಆಸ್ಪತ್ರೆ ಆವರಣದಲ್ಲಿ ರೋಗಿಗಳು ಮತ್ತು ಬಾಣಂತಿಯರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳ ಕುರಿತು ಚರ್ಚಿಸಿದರು. ಆಸ್ಪತ್ರೆಯ ಸ್ವಚ್ಛತೆ ಕೊರತೆ, ವೈದ್ಯಕೀಯ ಸಿಬ್ಬಂದಿ ಅಭಾವ ಹಾಗೂ ಶಿಶು-ಬಾಣಂತಿಯ ಆರೈಕೆಗೆ ಬೇಕಾದ ಮೂಲಸೌಕರ್ಯಗಳ ಕೊರತೆಯಿಂದ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ಅವರು ಆಲಿಸಿದರು.
ಈ ಸುದ್ದಿ ಓದಿದ್ದೀರಾ?ನಮ್ಮದು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಸರ್ಕಾರ; ಇದಕ್ಕೆ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿ: ಸಿಎಂ ಸಿದ್ದರಾಮಯ್ಯ
ಸಮಸ್ಯೆಗಳ ತಕ್ಷಣದ ಪರಿಹಾರಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಎಐಎಂಎಸ್ಎಸ್ ಜಿಲ್ಲಾ ಅಧ್ಯಕ್ಷೆ ನಳಿನಾ, ಉಪಾಧ್ಯಕ್ಷೆ ಸೀಮಾ ಜಿ.ಎಸ್., ಆಸಿಯಾ ಬೇಗಂ, ಪುಷ್ಪಾ ಹಾಗೂ ಸಿಂಧು ಇದ್ದರು.
ಎಐಎಂಎಸ್ಎಸ್ ಆಗ್ರಹಗಳು:
- ಚೆಲುವಾಂಬ ಆಸ್ಪತ್ರೆಯಲ್ಲಿ ಅಗತ್ಯ ಸಂಖ್ಯೆಯ ವೈದ್ಯರು, ಸಿಬ್ಬಂದಿ ನೇಮಕ ಮಾಡಿ ಮೂಲಭೂತ ಸೌಕರ್ಯಗಳನ್ನು ತಕ್ಷಣ ಒದಗಿಸಬೇಕು.
- ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ತಜ್ಞರು ಹಾಗೂ ಶಿಶು ವೈದ್ಯರನ್ನು ಕಡ್ಡಾಯವಾಗಿ ನೇಮಿಸಬೇಕು.
- ನೆರೆಯ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ವೃದ್ಧಿಸಿ, ಒಂದೇ ಆಸ್ಪತ್ರೆಯ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು.
- ಶಿಶು ಸಾವುಗಳ ಕುರಿತು ತಕ್ಷಣ ವಿಶ್ಲೇಷಣಾತ್ಮಕ ವರದಿ ಸಿದ್ಧಪಡಿಸಬೇಕು.
- ಸಾವಿನ ಕಾರಣಗಳನ್ನು ಪರಿಶೀಲಿಸಿ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು.
- ವೈದ್ಯರು ಮತ್ತು ಸಿಬ್ಬಂದಿಯ ವರ್ಗಾವಣೆ ನೀತಿಯನ್ನು ಕೈಬಿಟ್ಟು, ಎಲ್ಲ ಆಸ್ಪತ್ರೆಗಳಲ್ಲಿ ಸಮರ್ಪಕ ಮಾನವ ಸಂಪನ್ಮೂಲ ಒದಗಿಸಬೇಕು.
ಆರೋಗ್ಯ ಸೇವೆ ಪ್ರತಿಯೊಬ್ಬ ನಾಗರಿಕರ ಮೂಲಭೂತ ಹಕ್ಕು ಎಂಬುದನ್ನು ಅರಿತು, ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಐಎಂಎಸ್ಎಸ್ ಮೈಸೂರು ಜಿಲ್ಲಾ ಸಮಿತಿ ಒತ್ತಾಯಿಸಿದೆ.






