ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸಂಭವಿಸಿದ್ದು, 2.3 ತೀವ್ರತೆಯ ಭೂಕಂಪವಾಗಿರುವುದು ಕೆಎಸ್‌ಎನ್‌ಡಿಎಂಸಿ ನೆಟ್‌ವರ್ಕ್ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ತಾಲೂಕಿನ ಚಿಂಚನಸೂರ ಗ್ರಾಮದಲ್ಲಿ ಬೆಳಿಗ್ಗೆ 8:17ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 2.3 ತ್ರೀವತೆ ಖಚಿತವಾಗಿರುವುದು ದಾಖಲಾಗಿದೆ. ಜವಳಗಾ ಗ್ರಾಮದ ಆಗ್ನೇಯ ದಿಕ್ಕಿಗೆ 0.5 ಕಿಲೊಮೀಟರ್ ದೂರದಲ್ಲಿ ಭೂಮಿಯ 7 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರವಾಗಿತ್ತು. ಗ್ರಾಮದಿಂದ 2.4 ಕಿಮೀ ದೂರದ ಸಿರಾಚಂದ ಗ್ರಾಮ ಪಂಚಾಯಿತಿ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿರುವುದು ತಿಳಿದುಬಂದಿದೆ.
“ಭೂಕಂಪನ ತೀವ್ರತೆ ನಕ್ಷೆಯ ಪ್ರಕಾರ, ಭೂಕಂಪನ ಕೇಂದ್ರದಿಂದ ಕಂಡುಬಂದ ತೀವ್ರತೆ ಕಡಿಮೆಯಾಗಿದ್ದು, ಭೂಕಂಪನವು ಕೇಂದ್ರಬಿಂದುವಿನಿಂದ 20-25 ಕಿಮೀ ದೂರದವರೆಗೆ ಅನುಭವಕ್ಕೆ ಬರಬಹುದು. ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಏಕೆಂದರೆ ತೀವ್ರತೆ ಕಡಿಮೆಯಾಗಿದೆ. ಆದರೂ ಸ್ಥಳೀಯ ಕಂಪನಗಳು ಅನುಭವಕ್ಕೆ ಬರಬಹುದು. ಭೂಕಂಪನ ಕೇಂದ್ರಬಿಂದುವು ಭೂಕಂಪನ ವಲಯದಲ್ಲಿ ಬರುತ್ತದೆ ಮತ್ತು ಟೆಕ್ಟೋನಿಕ್ ನಕ್ಷೆಯ ಪ್ರಕಾರ ಈ ಪ್ರದೇಶವು ರಚನಾತ್ಮಕ ಸ್ಥಗಿತಗಳಿಂದ ಮುಕ್ತವಾಗಿದೆ. ಪ್ರಮಾಣ ಮತ್ತು ತೀವ್ರತೆ ಕಡಿಮೆ ಇರುವುದರಿಂದ ಸಮುದಾಯವು ಭಯಪಡಬೇಕಾಗಿಲ್ಲ” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ನಿರ್ವಹಣಾ ಕೇಂದ್ರ ತಿಳಿಸಿದೆ.

ಚಿಂಚಸೂರ ಗ್ರಾಮದ ನಿವಾಸಿ ಅರುಣಕುಮಾರ ಈದಿನ.ಕಾಮ್‌ನೊಂದಿಗೆ ಮಾತನಾಡಿ, “ಒಂದುವಾರದ ಹಿಂದೆ ಅಂದರೆ ಸೆಪ್ಟೆಂಬರ್ 6ರ ಬೆಳಿಗ್ಗೆ 5:08ರ ಸುಮಾರಿನಲ್ಲಿ ಭೂಮಿ ಅಲುಗಾಡಿ ಮನೆಯಲ್ಲಿರುವ ಪಾತ್ರೆಗಳು ಬಿದಿದ್ದವು. ಅಲ್ಲದೆ ಗಡಗಡ ಎಂಬ ಶಬ್ದ ಕೇಳಿಬಂದಿರುವುದೂ ಕೂಡ ಸ್ಥಳೀಯರ ಅನುಭವಕ್ಕೆ ಬಂದಿದೆ. ಅದೇ ರೀತಿ ಗುರುವಾರ ಬೆಳಿಗ್ಗೆ 8:17ರ ಸುಮಾರಿನಲ್ಲಿ ಭೂಮಿ ಅಲುಗಾಡಿದ ಅನುಭವವಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಕಿ ಶುಲ್ಕದ ಬದಲಿಗೆ ತಾಳಿ, ಓಲೆ ಬಿಚ್ಚಿಸಿಕೊಂಡು ಟಿಸಿ ನೀಡಿದ್ದ ಕಾಲೇಜು ಆಡಳಿತ ಮಂಡಳಿ; ತಾಯಿಯ ಬಳಿ ಕ್ಷಮೆಯಾಚನೆ
ಆಳಂದ ತಹಶೀಲ್ದಾರ್ ಅಣ್ಣರಾವ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆಳಂದ ಕಮಲಪುರ್ ಘಡಿಭಾಗದಲ್ಲಿ 2.3 ತೀವ್ರತೆ ಭೂಕಂಪನ ಸಂಭವಿಸಿದೆ. ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪರಿಶೀಲಿಸಿದ್ದಾರೆ” ಎಂದು ತಿಳಿಸಿದರು.
ಚಿಂಚನಸೂರ ಗ್ರಾಮಾಭಿವೃದ್ಧಿ ಅಧಿಕಾರಿ ಐಮದ್ ಪಾಶಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಾವಿ ನಿರ್ಮಾಣ ಮಾಡಲು ಸಿಡಿಮದ್ದು ಸಿಡಿಸಿದ ಹಾಗೆ ಶಬ್ದ ಕೇಳಿಬಂದಿದೆ. ಅದರಿಂದ ಭೂಕಂಪದ ಶಬ್ದವೆಂದು ಗ್ರಾಮಸ್ಥರ ಅನುಭವಕ್ಕೆ ಬಂದಿರುವುದಾಗಿ ತಿಳಿಸಿದರು. ಅದನ್ನು ಪರೀಕ್ಷೆ ಮಾಡಲು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ತಹಶಿಲ್ದಾರ್ ಎಲ್ಲರೂ ಬಂದಿದ್ದಾರೆ. ಪೊಲೀಸರು ಈಗಾಲೂ ಕೂಡ ಗ್ರಾಮ ಪಂಚಾಯಿತಿಯಲ್ಲಿ ಇದ್ದಾರೆ” ಎಂದು ತಿಳಿಸಿದರು.