ಶಾಲೆಗಾಗಿ ಕೊಠಡಿ, ಮಕ್ಕಳಿಗಾಗಿ ಆಟೋ ರಿಕ್ಷಾ; ಹಳ್ಳಿಯ ಹಳೆ ವಿದ್ಯಾರ್ಥಿಯಿಂದ ಸರ್ಕಾರಿ ಶಾಲೆಗೆ ಹೊಸ ಜೀವ

Date:

Advertisements

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚಿಕ್ಕಚಂಗಾವಿ ಗ್ರಾಮದ ಸುಮಾರು ಅರವತ್ತು ವರ್ಷಗಳ ಇತಿಹಾಸವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೀಗ ಹೊಸ ರೂಪ ಪಡೆದುಕೊಂಡಿದೆ. ಸುತ್ತಮುತ್ತಲಿನ ಏಳು ಗ್ರಾಮಗಳ ಮಕ್ಕಳ ಶಿಕ್ಷಣಾಭಿವೃದ್ಧಿಗೆ ಆಸರೆಯಾಗಿರುವ ಈ ಶಾಲೆಗೆ, ಹಳೆ ವಿದ್ಯಾರ್ಥಿ ಹಾಗೂ ಸ್ಥಳೀಯ ಪ್ರಗತಿಪರ ರೈತ ಸಿ ಕೆ ಪ್ರಕಾಶ್, ತಮ್ಮ ವೈಯಕ್ತಿಕ ವೆಚ್ಚದಲ್ಲಿ ಕಟ್ಟಡದಲ್ಲಿ ನೂತನ ಕೊಠಡಿ ನಿರ್ಮಿಸಿ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಶಾಲೆಯ ಅಭಿವೃದ್ದಿಯ ಈ ಮಹತ್ವದ ಪ್ರಯತ್ನದಲ್ಲಿ ಹಳೆ ಗೆಳೆಯರು ಹಾಗೂ ಗ್ರಾಮಸ್ಥರು ಸಕ್ರಿಯವಾಗಿ ಕೈಜೋಡಿಸಿದ್ದಾರೆ.

ಚಿಕ್ಕಚಂಗಾವಿ ಸುತ್ತಲಿನ ಬ್ಯಾಟಪ್ಪನಪಾಳ್ಯ, ಬುಕ್ಕಸಾಗರ, ಅಗ್ರಹಾರ ಸೇರಿದಂತೆ ಅನೇಕ ಗ್ರಾಮಗಳ ಮಕ್ಕಳು ಶಿಕ್ಷಣಕ್ಕಾಗಿ ಅವಲಂಬಿಸಿರುವುದು ಚಿಕ್ಕಚಂಗಾವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನೇ. ಇದನ್ನು ಮನಗಂಡ ರೈತ ಪ್ರಕಾಶ್ ಸರ್ಕಾರಿ ಅನುದಾನಕ್ಕಾಗಿ ಕಾಯದೆ ತಾವೇ ವೈಯಕ್ತಿಕ ಆಸಕ್ತಿ ವಹಿಸಿ ಕಳೆದ ವರ್ಷ 15 ಲಕ್ಷ ವೆಚ್ಚದ ಸುಸಜ್ಜಿತವಾದ ದೊಡ್ಡ ಕೊಠಡಿಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಈಗಾಗಲೇ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕಿದ ಈ ಶಾಲೆಯನ್ನು ಉಳಿಸಿ ಬೆಳೆಸುವ ಆಲೋಚನೆಯಲ್ಲಿ ಗ್ರಾಮಸ್ಥರನ್ನೂ ಸೇರಿಸಿಕೊಂಡು ಕೊಠಡಿ ನಿರ್ಮಿಸಿದ್ದಾರೆ.

WhatsApp Image 2025 09 30 at 4.13.51 PM

1ರಿಂದ 5ನೇ ತರಗತಿಯವರೆಗೆ ಈ ಶಾಲೆಯಲ್ಲಿ ಒಟ್ಟು 16 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆ ಮಕ್ಕಳಿಗೆ ಪ್ರಕಾಶ್ ಕಂಪ್ಯೂಟರ್ ಕೂಡ ಕೊಡಿಸಿದ್ದಾರೆ. ಕಂಪ್ಯೂಟರ್ ಮೂಲಕವೂ ಇಲ್ಲಿ ಬೋಧಿಸಲಾಗುತ್ತಿದೆ. ಇಲ್ಲಿಯ ಶಿಕ್ಷರು ಅಷ್ಟೇ ಆಸಕ್ತಿ ಮತ್ತು ಶ್ರದ್ಧೆಯಿಂದ ಮಕ್ಕಳಿಗೆ ಕಲಿಸುತ್ತಿದ್ದಾರೆ.

Advertisements

ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳಿಗೂ ಶಿಕ್ಷಣದ ಹಕ್ಕು ಸಿಗಬೇಕೆಂಬ ಉದ್ದೇಶದಿಂದ ಪ್ರಕಾಶ್ ಕಳೆದ ಆರು ವರ್ಷಗಳಿಂದ ತಮ್ಮ ವೈಯಕ್ತಿಕ ಖರ್ಚಿನಿಂದ ಆಟೋ ರಿಕ್ಷಾದ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ದೂರದ ಹಳ್ಳಿಗಳಿಂದ ನಡೆದು ಬರಬೇಕಾಗಿದ್ದ ಮಕ್ಕಳು ಈಗ ಸುರಕ್ಷಿತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸುತ್ತಿದ್ದಾರೆ. ಈ ಕ್ರಮದಿಂದ ಶಾಲೆಯ ಹಾಜರಾತಿ ಪ್ರಮಾಣವೂ ಹೆಚ್ಚಾಗುತ್ತಿದೆ ಮತ್ತು ಅನೇಕ ಮಕ್ಕಳು ಶಿಕ್ಷಣದಿಂದ ದೂರವಾಗದೆ ಮುಂದುವರೆಯಲು ಸಾಧ್ಯವಾಗಿದೆ. ಪ್ರಕಾಶ್ ಅವರ ಈ ನಿಸ್ವಾರ್ಥ ಸೇವಾ ಮನೋಭಾವಕ್ಕೆ ಗ್ರಾಮಸ್ಥರು, ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

“ನಮ್ಮ ಪೂರ್ವಜರು ಸರ್ಕಾರಿ ಶಾಲೆ ಮಂಜೂರಾತಿಯಾದ ಸಮಯದಲ್ಲಿ ತಕ್ಷಣವೇ ಭೂ ದಾನ ನೀಡಿ ಶಾಲೆಯನ್ನು ಊರಿಮ ಸಮೀಪದಲ್ಲೇ ನಿರ್ಮಿಸಲು ಅನುವು ಮಾಡಿದ್ದರು. ವರ್ಷಗಳು ಕಳೆದಂತೆ ಖಾಸಗಿ ಶಾಲೆಗಳ ಅಬ್ಬರಕ್ಕೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದವು. ಈಗಾಗಲೇ ಎರಡು ಶಾಲೆಗಳು ಈ ಭಾಗದಲ್ಲಿ ಮುಚ್ಚಿದ್ದವು. ಉಳಿದ ಚಿಕ್ಕಚಂಗಾವಿ ಶಾಲೆಯೂ ಅದೇ ಪರಿಸ್ಥಿತಿಗೆ ತಲುಪುವ ಮುನ್ನ ನಮ್ಮ ಹಿರಿಯರ ಕನಸಿನ ಶಾಲೆಯನ್ನು ಉಳಿಸಲು ಅವಶ್ಯವಿದ್ದ ಕೊಠಡಿಯನ್ನು ಖುದ್ದು ನಾನೇ ಹಣ ವ್ಯಯ ಮಾಡಿ ಮುಂದೆ ನಿಂತು ಸುಸಜ್ಜಿತವಾಗಿ ನಿರ್ಮಿಸಿ ಇಲಾಖೆಗೆ ನೀಡಿದ್ದೇನೆ. ಇದರಿಂದ ಇಲ್ಲಿ ಸುತ್ತಲಿನ ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯಲು ಅನುಕೂಲವಾದರೆ ಅಷ್ಟೇ ಸಾಕು” ಎನ್ನುತ್ತಾರೆ ರೈತ ಪ್ರಕಾಶ್.

WhatsApp Image 2025 09 30 at 4.15.18 PM

“ಪ್ರಗತಿಪರ ರೈತ ಪ್ರಕಾಶ್ ಅವರು ಶಾಲೆಗೆ ಹೊಸ ಕೊಠಡಿ ಕಟ್ಟಿಕೊಡುವುದರ ಜೊತೆಗೆ ಕಂಪ್ಯೂಟರ್ ವ್ಯವಸ್ಥೆಯನ್ನೂ ಮಾಡಿಕೊಟ್ಟಿರುವುದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಹುಮಟ್ಟಿಗೆ ಸಹಾಯಕವಾಗಿದೆ” ಎಂದು ಶಾಲೆಯ ಮುಖ್ಯ ಶಿಕ್ಷಕಿ ನಳಿನಾ ತಿಳಿಸಿದ್ದಾರೆ. ಅವರ ಮಾತಿನಲ್ಲಿ, ಹೊಸ ಕಟ್ಟಡ ಹಾಗೂ ತಂತ್ರಜ್ಞಾನ ಸೌಲಭ್ಯಗಳಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿದ್ದು, ನವೀನ ಪಾಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಶಿಕ್ಷಕರಿಗೂ ಅನುಕೂಲವಾಗಿದೆ.

“ಈ ಶಾಲೆಯ ಎಲ್ಲ ವಿದ್ಯಾರ್ಥಿಗಳು ಹಳ್ಳಿಗಳಿಂದಲೇ ಬರುತ್ತಿರುವುದರಿಂದ ನಾವು ಕನ್ನಡ ಮಾಧ್ಯಮದಲ್ಲೇ ಉತ್ತಮ ಮಟ್ಟದ ಇಂಗ್ಲಿಷ್ ಶಿಕ್ಷಣ ನೀಡುತ್ತಿದ್ದೇವೆ. ಮಕ್ಕಳು ಅದನ್ನು ಆಸಕ್ತಿಯಿಂದ ಕಲಿಯುತ್ತಿದ್ದು, ಅವರ ಭಾಷಾ ಕೌಶಲ್ಯದಲ್ಲಿ ಸ್ಪಷ್ಟ ಪ್ರಗತಿ ಕಂಡುಬರುತ್ತಿದೆ” ಎಂದು ಶಾಲೆಯ ಶಿಕ್ಷಕಿ ಪವಿತ್ರಾ ಹೇಳಿದರು.

ಇದನ್ನೂ ಓದಿ: ತುಮಕೂರು | ಔಟರ್ ರಿಂಗ್ ರೋಡ್ ವಿರೋಧಿಸಿ ಅ. 4 ರಿಂದ ಜಾಗೃತಿ ಜಾಥಾ

ಒಟ್ಟಾರೆ ಶಿಕ್ಷಣವು ಬದುಕು ಬದಲಿಸಬಲ್ಲ ಅತ್ಯಂತ ಶಕ್ತಿಯುತ ಅಸ್ತ್ರ. ಈ ಅವಕಾಶದಿಂದ ಯಾರೂ ವಂಚಿತರಾಗಬಾರದು ಎಂಬ ನಂಬಿಕೆಯೊಂದಿಗೆ ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಕೈಜೋಡಿಸಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗುತ್ತಿರುವುದು ಸಮಾಜದ ಜವಾಬ್ದಾರಿಯುತ ನಿಲುವನ್ನು ತೋರಿಸುತ್ತದೆ. ಹಳ್ಳಿಗಳಲ್ಲಿಯೇ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಭರವಸೆಗೆ ಇಂತಹ ಮಾದರಿಗಳೇ ಸಾಕ್ಷಿಯಾಗುತ್ತಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವ ಈ ಕಾಲದ ಅವಶ್ಯಕತೆಯಾಗಿದ್ದು, ಈ ದಿಕ್ಕಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಭವಿಷ್ಯದ ಶಿಕ್ಷಣ ಕ್ರಾಂತಿಗೆ ಮಾರ್ಗದರ್ಶಿಯಾಗಲಿವೆ.

WhatsApp Image 2024 08 09 at 10.52.48 1578a566
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ಸಮೀಕ್ಷೆಗೆ ವಿರೋಧ: OBCಗಳನ್ನು ವಂಚಿಸುವ ತಂತ್ರ

"ಭಾರತದ ತುಂಬೆಲ್ಲ ಬಲಿ ಕಥೆಗಳೇ ತುಂಬಿವೆ. ಅದಕ್ಕೆ ಇಲ್ಲಿ ಸೊಳ್ಳೆಯಷ್ಟು ಇರುವವರು...

ಶಿವಮೊಗ್ಗ | ಕಾರಿನಿಂದ ಹೊರಗೆಳೆದು ವೈದ್ಯನಿಗೆ ಥಳಿಸಿದ ಜನ

ಶಿವಮೊಗ್ಗ, ನೆನ್ನೆ ದಿವಸ ಡಿಕ್ಕಿ ಹೊಡೆದು ಬೈಕ್‌ನ್ನು ಎಳೆದೊಯ್ದ ಕಾರು ತಡೆದು,...

ಶಿವಮೊಗ್ಗ | ರೈಲು ಹತ್ತುವ ಭರದಲ್ಲಿ ಬ್ಯಾಗ್‌ ಬಿಟ್ಟು ಹೋದ ಪ್ರಯಾಣಿಕ ; ಬ್ಯಾಗ್‌ ಒಪ್ಪಿಸಿದ ಸಿಬ್ಬಂದಿಗಳು

ಶಿವಮೊಗ್ಗ, ರೈಲು ಹತ್ತುವ ಭರದಲ್ಲಿ ಪ್ರಯಾಣಿಕರೊಬ್ಬರು ಶಿವಮೊಗ್ಗ ನಿಲ್ದಾಣದ ಪ್ಲಾಟ್‌ಫಾರಂನಲ್ಲೇ ಮರೆತು...

ಬೀದರ್‌ ಜಿಲ್ಲೆಯಲ್ಲಿ ಪ್ರವಾಹ : ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ

ಬೀದರ ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿ ಹಾಗೂ ಮಾಂಜ್ರಾ ನದಿ ಮತ್ತು ಕಾರಂಜಾ...

Download Eedina App Android / iOS

X