ಹಸಿರ ಸೊಬಗಿನಿಂದ ಸಿಂಗರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿರುವ ಕುಪ್ಪೆಪದವು ಗ್ರಾಮ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಅದೇ ಗ್ರಾಮಕ್ಕೆ ಇತ್ತೀಚೆಗೆ ಇನ್ನೊಂದು ಗೌರವದ ಗರಿ ಸೇರಿದೆ. ಇಲ್ಲಿಯ ʼಬದ್ರಿಯಾ ಮಸೀದಿʼಯು ನವೀಕರಿಸಿದ ಧಾರ್ಮಿಕ ಕಟ್ಟಡ ಮಾತ್ರವಲ್ಲದೆ, ನಿಜವಾದ ಮಾನವೀಯತೆಯ ಪ್ರತಿಬಿಂಬ, ಸಹಬಾಳ್ವೆಯ ಸಾಂಕೇತಿಕ ರೂಪ ಎಂಬುದನ್ನು ಸಾಬೀತುಪಡಿಸಿದೆ. ಧರ್ಮಗಳನ್ನು ಬದಿಗೊತ್ತಿ ಸೋದರತೆ ಮುಖ್ಯ ಎಂದು ಸಾರಿದೆ.
72 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಈ ಮಸೀದಿ ಈಗ ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲ್ಪಟ್ಟಿದೆ. ತನ್ನದೇ ಆದ ವಿಶಿಷ್ಠ ಶೈಲಿ, ವೈಭವತೆ ಮತ್ತು ಕಲಾತ್ಮಕತೆ ಮೂಲಕ ಜನರ ಮನಗೆದ್ದಿದೆ. ಆದರೆ ಈ ಮಸೀದಿಯ ಬಾಗಿಲುಗಳು ಕೇವಲ ನಮಾಜಿಗೆ ಮಾತ್ರವಲ್ಲದೆ ಸಹನೆ, ಸ್ನೇಹ ಮತ್ತು ಸಹಕಾರದ ಮನೋಭಾವ, ಧಾರ್ಮಿಕ ಸಹೋದರತ್ವಕ್ಕೂ ತೆರೆದು ನಿಂತಿದೆ.

ಇಂದು, ಧರ್ಮದ ಹೆಸರಿನಲ್ಲಿ ವಿಭಜನೆಯಿಂದ ದೇಶದ ಅನೇಕ ಭಾಗಗಳು ನರಳುತ್ತಿರುವಾಗ, ಕುಪ್ಪೆಪದವು ಗ್ರಾಮದ ಈ ಮಸೀದಿ, ಆ ಭಿನ್ನತೆಗೆ ಪ್ರತ್ಯುತ್ತರವಾಗಿ ನಿಲ್ಲುತ್ತದೆ. ಈ ನವೀಕರಣದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಔದಾರ್ಯ ಹಾಗೂ ಸಹಕಾರದ ಸಾಥ್ ಹೆಚ್ಚು ಗಮನ ಸೆಳೆಯುತ್ತದೆ. ಮಸೀದಿಗೆ ಅಗತ್ಯವಿದ್ದ ಮರವನ್ನು ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಉಚಿತವಾಗಿ ಒದಗಿಸಿದರೋದು ಇದಕ್ಕೆ ಸಾಕ್ಷಿ.
ಈ ಚಿಕ್ಕ ಕೊಡುಗೆ ನಿಜಕ್ಕೂ ದೊಡ್ಡ ಮನಸ್ಸಿನ ಪ್ರತೀಕ. ಧರ್ಮ, ಜಾತಿ, ಭಾಷೆ ಎಂಬ ಎಲ್ಲ ಗಡಿಗಳನ್ನೂ ಮೀರಿದ ಈ ಸಂಬಂಧ, ಗ್ರಾಮದಲ್ಲಿ ಬಿತ್ತಿರುವ ಸಣ್ಣ ಸಹಕಾರದ ಬೀಜವೊಂದು ಇಂದು ಸೌಹಾರ್ದತೆ ಎಂಬ ವೃಕ್ಷವನ್ನು ಸಮರ್ಥವಾಗಿ ಬೆಳಸಿದೆ. ಇಂತಹ ಸಂಬಂಧಗಳು ಸಮಾಜದ ಮೂಲ ಆಧಾರವಾಗಬೇಕು.
ಇದನ್ನೂ ಓದಿ: ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು: ಭಾಗ1
ಕಲೆಯೊಂದಿಗೆ ಧರ್ಮಗಳ ಸಂಗಮ
ಇದೀಗ ಮಸೀದಿಯ ಪ್ರವೇಶದ್ವಾರ ಮತ್ತು ಒಳಭಾಗ ದೃಷ್ಟಿಗೆ ಬಿದ್ದರೆ, ಕಣ್ಣಿಗೆ ಅಚ್ಚುಮೆಚ್ಚಾಗುವ ಕಲಾತ್ಮಕ ಕೆತ್ತನೆಗಳು ಗಮನ ಸೆಳೆಯುತ್ತವೆ. ಈ ಕೆತ್ತನೆಗಳನ್ನು ಹಿಂದೂ ಧರ್ಮದ ವಾಸ್ತುಶಿಲ್ಪಿ ರಾಜಸಾಗರ್ ಮತ್ತು ಅವರ ಸಹಾಯಕ ರವಿ ಕೈಯಾರೆ ನಿರ್ಮಿಸಿದ್ದಾರೆ. ಸಾಗುವಾನಿ ಮರದ ಮೇಲೆ ಭಾರತೀಯ ಮತ್ತು ಇಸ್ಲಾಮಿಕ್ ಶೈಲಿಯ ಸಂಯೋಜನೆಯೊಂದಿಗೆ ನಿರ್ಮಿಸಿದ ಈ ಕಲಾಕೃತಿಗಳು, ಧರ್ಮಗಳ ಸೌಂದರ್ಯವನ್ನು ಕಲೆಯ ಮೂಲಕ ಸಂಘಟಿಸುತ್ತವೆ.
ಇದು ಧರ್ಮಗಳ ನಡುವಿನ ‘ಸಂಘರ್ಷ’ವನ್ನು ಕಲೆಯ ಮೂಲಕ ಕಿತ್ತೊಗೆಯುತ್ತದೆ. ಇಂತಹ ಶಿಲ್ಪಕಲೆಗಳು ಮಾನವೀಯ ಮೌಲ್ಯಗಳುಳ್ಳ ಮನುಷ್ಯರಲ್ಲಿ ಶ್ರದ್ಧೆ, ಶ್ರಮ, ಭಕ್ತಿಯ ಹಂದರವನ್ನು ಎತ್ತಿಹಿಡಿಯುತ್ತವೆ.

ವಿದ್ಯೆ, ಶ್ರಮ ಮತ್ತು ಸ್ನೇಹದ ಬಲ
ಈ ಮಹತ್ತರ ಯೋಜನೆಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ ಪ್ರಣೀತ್ ರೈ ಹಿಂದೂ ಧರ್ಮದವರು. ಮಸೀದಿಯ ಅಧ್ಯಕ್ಷ ಶರೀಫ್ ಅವರ ಕುಟುಂಬದ ಸ್ನೇಹದ ಸಂಬಂಧದಿಂದ ಈ ಯೋಜನೆಗೆ ಭಾಗಿಯಾಗಿದ್ದರು. ಆದರೆ ಪ್ರಣೀತ್ ರೈ ಈ ಕೆಲಸವನ್ನು ಕೇವಲ ಸ್ನೇಹಕ್ಕಾಗಿ ಮಾಡಿದರಲ್ಲ, ಅವರು ತಮ್ಮ ಕರ್ತವ್ಯವನ್ನೂ ಅತ್ಯುತ್ತಮವಾಗಿ ನಿರ್ವಹಿಸಿದರು.
“ಈ ಮಸೀದಿ ನಮ್ಮದೇ ಎಂಬ ಭಾವನೆ ನಮಗಿತ್ತು. ಸ್ನೇಹ, ಭರವಸೆ, ಮತ್ತು ಬಾಂಧವ್ಯವು ನನ್ನನ್ನು ಇಲ್ಲಿಗೆ ಸೆಳೆದವು. ಇದೊಂದು ಜವಾಬ್ದಾರಿಯ ಕೆಲಸವಾಗಿತ್ತು. ನಾವು ಸಂತೋಷದಿಂದ ಮಾಡಿದೆವು” ಎಂಬ ಅವರ ಮಾತುಗಳು, ವೃತ್ತಿಪರತೆಯ ಹಿಂದಿರುವ ಮಾನವೀಯತೆ ತೋರಿಸುತ್ತವೆ.
ಮಸೀದಿಯ ಹೊರಗೆ ಕೋಮುವಾದ ಪ್ರತಿರೋಧೀ ಸಂದೇಶ:
ಇಂದು ಸಮಾಜದಲ್ಲಿ ಕೋಮುದ್ವೇಷ, ಧರ್ಮಾಧಾರಿತ ರಾಜಕೀಯ ಮತ್ತು ಸಮಾಜದಲ್ಲಿ ಅರಾಜಕತೆ, ಒಡೆದು ಆಳುವ ನೀತಿಗಳು ತಾಂಡವವಾಡುತ್ತಿರುವ ಸಮಯದಲ್ಲಿ, ಈ ಮಸೀದಿ ತನ್ನ ಶಾಂತಿಯ ಪಾಠವನ್ನು ಬಹಿರಂಗವಾಗಿ ಸಾರುತ್ತಿದೆ. ಇದರ ಇತಿಹಾಸ, ಪುನರ್‌ನಿರ್ಮಾಣ ಪ್ರಕ್ರಿಯೆ, ಅದರ ಒಳನೋಟ ಎಲ್ಲವೂ ಒಟ್ಟಾಗಿ ಒಂದು ಮಹತ್ವದ ಸಂದೇಶವನ್ನು ನೀಡುತ್ತವೆ.
ಮಸೀದಿಯ ಅಧ್ಯಕ್ಷ ಮುಹಮ್ಮದ್ ಶರೀಫ್ ಈದಿನದೊಂದಿಗೆ ಮಾತನಾಡಿ, “ನಾವು ಆರಂಭದಲ್ಲಿ ಸರಳ ನವೀಕರಣ ಯೋಚಿಸಿದ್ದೆವು. ಆದರೆ ಊರಿನ ಒಗ್ಗಟ್ಟಿನಿಂದಾಗಿ ಅದು ಭವ್ಯ ರೂಪ ಪಡೆದುಕೊಂಡಿತು. ಈ ಮಾತುಗಳು ಸಹಕಾರದ ಶಕ್ತಿ ಮತ್ತು ಸಹಜ ಮನಸ್ಸಿನ ಪರಿಪಕ್ವತೆಯನ್ನು ಪ್ರತಿಬಿಂಬಿಸುತ್ತವೆ” ಎಂದರು.
ಈ ಮಸೀದಿ ಕೇವಲ ಭಕ್ತರಿಗಷ್ಟೇ ಅಲ್ಲ, ಇಡೀ ಸಮುದಾಯಕ್ಕೆ ಮಾರ್ಗದರ್ಶಕವಾಗಿದೆ. ಇದು ಮುಂಬರುವ ತಲೆಮಾರಿಗೆ ಒಂದು ಪಾಠ. ಧರ್ಮಗಳು ವಿಭಜನೆಯ ಸಾಧನಗಳಲ್ಲ, ಅವು ಮನಸ್ಸನ್ನು ಶುದ್ಧಗೊಳಿಸುವ ಮಾರ್ಗಗಳು ಎನ್ನುವುದು ಈ ಮಸೀದಿ ಸಮಾಜಕ್ಕೆ ಸಾರಿರುವ ಸ್ಪಷ್ಟ ಸಂದೇಶ.
ಮಸೀದಿ ಕಟ್ಟಡ ಶಿಲ್ಪವಲ್ಲದೆ, ಇತರ ಧರ್ಮೀಯರು ಕೈಜೋಡಿಸಿ ಮನುಷ್ಯತ್ವವನ್ನು ಕಟ್ಟಿದ ಈ ಕಾರ್ಯ, ಹೊಸ ಪೀಳಿಗೆಗೆ ಬುದ್ಧಿವಂತಿಕೆಯನ್ನು ಕಲಿಸಲು ಸಹಾಯಕವಾಗಿದೆ. ಇಂಥ ಉದಾಹರಣೆಗಳು ಶಾಲೆಗಳಲ್ಲಿ, ಸಮಾಜದಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆಗೆ ಬರಬೇಕಾಗಿದೆ.

ಕುಪ್ಪೆಪದವಿನಿಂದ ದೇಶಕ್ಕೆ ಪಾಠ
ಕೋಮುವಾದ, ವಿಭಜನೆಯ ರಾಜಕಾರಣದ ನಡುವೆಯೂ, ಕುಪ್ಪೆಪದವು ಗ್ರಾಮದ ಬದ್ರಿಯಾ ಮಸೀದಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತಿರುವಂತಿದೆ. ಮುನುಷ್ಯರಲ್ಲಿ ಪ್ರೀತಿ ಮತ್ತು ನಂಬಿಕೆ ಇದ್ದರೆ ಯಾವುದನ್ನೂ ಸಾಧ್ಯವನ್ನಾಗಿ ಮಾಡಬಹುದು. ಈ ನವೀಕರಣವೆಂಬುದು ಕೇವಲ ಕಟ್ಟಡದ ಹೊಸ ರೂಪವಲ್ಲ, ಅದು ಒಂದು ಜನಾಂಗದ ಮನಸ್ಸಿನ ಸುಧಾರಣಾ ಪ್ರಕ್ರಿಯೆ. ಧರ್ಮದ ಹೆಸರಿನಲ್ಲಿ ಭಿನ್ನತೆ ಹುಟ್ಟಿಸುವವರ ಎದುರಿನಲ್ಲಿ ಈ ಮಸೀದಿ ನಿಂತು ಹೇಳುತ್ತದೆ “ನಾನು ನಮಾಜ್‌ಗೆ ಮಾತ್ರವಲ್ಲ, ನಂಬಿಕೆ, ಪ್ರೀತಿ, ಸಹೋದರತೆಗಳಿಗೆ” ಎಂದು!