ಮೈಸೂರಿನ ಹೊರ ವರ್ತುಲ ರಸ್ತೆಯಲ್ಲಿರುವ ಮೈಕಾ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿಗಳಿಗಾಗಿ ಅಯೋಜಿಸಿದ್ದ ವ್ಯಸನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಬಸವಮಾರ್ಗ ಫೌಂಡೇಷನ್ ನ ಎಸ್ ಬಸವರಾಜು ಮಾತನಾಡಿ ವ್ಯಸನ, ವ್ಯಸನಿಯನ್ನು ಸಾಮಾಜಿಕವಾಗಿ ಹಾಗೂ ಕೌಟುಂಬಿಕವಾಗಿ ದೂರ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾದಕ ವ್ಯಸನದಿಂದಾಗುವ ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೂ, ಹೆಚ್ಚಿನ ಜನರು ವ್ಯಸನಿಗಳಾ ಗುತ್ತಿದ್ದಾರೆ. ಕ್ಷಣಿಕ ಸುಖಕ್ಕಾಗಿ ಪ್ರಾಣವನ್ನೇ ಬಲಿ ಕೊಡುತ್ತಿದ್ದಾರೆ. ತಾತ್ಕಾಲಿಕ ಉನ್ಮಾದ ನಮ್ಮ ಜೀವನವನ್ನು ಸಂಕಟಕ್ಕೆ ತಳ್ಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಕ ವಸ್ತುಗಳು ಮನುಷ್ಯನ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುತ್ತವೆ. ವ್ಯಸನಿಯನ್ನಾಗಿ ಪರಿವರ್ತಿಸಿ ಕಾನೂನುಬಾಹಿರ ಮಾರ್ಗವನ್ನು ಹಿಡಿಯುವಂತೆ ಮಾಡುತ್ತದೆ. ಇದರಿಂದಾಗಿ, ವ್ಯಕ್ತಿ ಸಮಾಜದಲ್ಲಿ ಅಗೌರವಕ್ಕೆ ಪಾತ್ರನಾಗುತ್ತಾನೆ. ಕೌಟುಂಬಿಕ ಕಲಹ ಹಾಗೂ ತನ್ನ ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಮೂಲಕ ತನ್ನ ಬದುಕನ್ನ ಅಂತಿಮಗೊಳಿಸಿಕೊಳ್ಳುತ್ತಾನೆ ಎಂದರು.
ಜೀವನದಲ್ಲಿ ಉತ್ತಮ ಆಲೋಚನೆಗಳಿಗೆ ತೆರೆದುಕೊಳ್ಳಬೇಕು. ಒಳ್ಳೆಯ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ತನ್ನ ಗುರಿಯತ್ತ ಸಾಗಲು ಪರಿಶ್ರಮಪಡಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ನಮ್ಮ ಎಲ್ಲ ಶಕ್ತಿಯನ್ನು ಉತ್ತಮ ಕೆಲಸಗಳಿಗೆ ವಿನಿಯೋಗಿಸಿದಾಗ ಸಮಾಜದಲ್ಲಿ ಯಶಸ್ಸನ್ನು ಹೊಂದಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮಂಡ್ಯ | ‘ಸ್ವರಾಜ್ ಉತ್ಸವ’ : ವಿಷಯಾಧಾರಿತ ಸಂವಾದ, ಚರ್ಚೆ, ಪ್ರದರ್ಶನ
ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಸವಮಾರ್ಗ ಫೌಂಡೇಶನ್ ವತಿಯಿಂದ ಸ್ಥಳದಲ್ಲೆ ವಿದ್ಯಾರ್ಥಿಗಳಿಗೆ ವ್ಯಸನ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಉತ್ಸುಕವಾಗಿ ಪಾಲ್ಗೊಂಡ ವಿದ್ಯಾರ್ಥಿಗಳು ಅರ್ಧಗಂಟೆ ಅವಧಿಯಲ್ಲಿ ಪ್ರಬಂಧ ಬರೆದರು. ಅತ್ಯುತ್ತಮವಾಗಿ ಬರೆದ ಪ್ರಬಂಧಗಳಿಗೆ ನಗದು ಬಹುಮಾನ ಘೋಷಣೆ ಮಾಡಲಾಯಿತು.
ವಿಶೇಷ ವಿಡಿಯೋ ವೀಕ್ಷಿಸಿ : https://www.youtube.com/watch?v=A4kqUxXWMIw
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶೋಭಿತಾ, ಎಸ್. ದಿಯಾ ಸೇರಿದಂತೆ ಇನ್ನಿತರರು ಇದ್ದರು.