ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗಾಗಿ ‘ಅಕ್ಕ ಪಡೆ’ಯನ್ನು ಶೀಘ್ರದಲ್ಲಿಯೇ ರಚನೆ ಮಾಡಲಾಗುತ್ತದೆ. ಈ ಪಡೆಯು ವ್ಯವಸ್ಥಿತವಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ನೆರವಾಗಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಕಣಜಾರಿನಲ್ಲಿ ಗ್ರಾಮ ಪಂಚಾಯತಿಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. “ಪ್ರತಿ ತಾಲೂಕಿಗೆ ಒಂದರಂತೆ ಅಕ್ಕ ಪಡೆ ರಚನೆ ಮಾಡಲಾಗುತ್ತದೆ. ಈ ಪಡೆಗಳಲ್ಲಿ ಮಹಿಳಾ ಪೊಲೀಸರು, ಎನ್‌ಸಿಸಿ ತರಬೇತಿ ಪಡೆದವರು ಇರುತ್ತಾರೆ. ಅವರಿಗೆ ತರಬೇತಿ ಮತ್ತು ಶಸ್ತ್ರ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ಬಸ್ ನಿಲ್ದಾಣಗಳು ಮತ್ತು ಜಾತ್ರೆ ನಡೆಯುವ ಸ್ಥಳಗಳಲ್ಲಿ ಪಡೆಗಳು ಸಕ್ರಿಯವಾಗಿರುತ್ತವೆ. ಮಾತ್ರವಲ್ಲದೆ, ಪ್ರತಿ ಮನೆಗಳಲ್ಲಿ ಆಗುವ ದೌರ್ಜನ್ಯ ಮತ್ತು ಅನ್ಯಾಯಗಳಿಗೂ ಈ ಪಡೆಗಳು ಸ್ಪಂದಿಸಲಿವೆ” ಎಂದು ಅವರು ತಿಳಿಸಿದ್ದಾರೆ.