ರಾಜ್ಯದಲ್ಲಿ ಮುಂದುವರಿದಿರುವ ಬರದಂತಹ ಪರಿಸ್ಥಿತಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಸದ್ಯಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು ಹಾಗೂ ನೀರಾವರಿ ಉದ್ದೇಶಕ್ಕೆ ನೀರು ಬಿಡುಗಡೆ ಮಾಡದಿರಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣಾ ಜಲಾನಯನ ಪ್ರದೇಶದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ನೀರಾವರಿ ನಿಗಮಗಳು, ವಿದ್ಯುತ್ ಪ್ರಸರಣ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿಡಿಯೋ ಸಂವಾದದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿನ ನೀರಿನ ಲಭ್ಯತೆ, 2027ರ ಜೂನ್ವರೆಗೆ ಕುಡಿಯುವ ನೀರಿನ ಅವಶ್ಯಕತೆ, ಕಾಲುವೆಗಳಿಗೆ ನೀರು ಹರಿಸುವಿಕೆ ಹಾಗೂ ನೀರಾವರಿ ನೀರು ಬಿಡುಗಡೆ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಈ ವೇಳೆ ಮೊದಲ ಆದ್ಯತೆ ಕುಡಿಯುವ ನೀರಿಗೆ ನೀಡಬೇಕು. ನಂತರ ರಾಯಚೂರು, ಕೂಡಗಿ ಹಾಗೂ ಯರಮರಸ್ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯವಿರುವ ನೀರು ಮತ್ತು ಕುಡಿಯುವ ನೀರು ಪೂರೈಕೆಯಾಗುವ ಕೆರೆಗಳ ಭರ್ತಿಗೆ ಆದ್ಯತೆ ನೀಡಬೇಕು ಎಂದು ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚಿಸಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸಮರ್ಪಕ ಮಳೆಯಾಗಿ ಜಲಾಶಯಗಳ ನೀರಿನ ಮಟ್ಟ ಸುಧಾರಿಸಿದ ಬಳಿಕ ಮಾತ್ರ ಒಂದು ಬೆಳೆಗಾಗಿ ನೀರಾವರಿ ನೀರು ಬಿಡುಗಡೆ ಮಾಡುವ ಕುರಿತು ಮರುಪರಿಶೀಲನೆ ನಡೆಸಲಾಗುವುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಕುಡಿಯುವ ನೀರಿನ ಅಗತ್ಯದ ಕುರಿತು ಸಂಬಂಧಿತ ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿದ ಬಳಿಕ, ಅವರ ಅನುಮತಿ ಪಡೆದ ನಂತರವೇ ಸಂಬಂಧಿತ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸ್ಪಷ್ಟ ನಿರ್ದೇಶನ ನೀಡಿದರು.





