ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

Date:

Advertisements

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ ದಿನಗಳಲ್ಲಿ ಸಂಚಾರ ಸಮಸ್ಯೆಗಳ ಆಗರವಾಗಿದೆ. ಪ್ರತಿದಿನ ಸಾವಿರಾರು ಜನ ಸಂಚರಿಸಲು ಹಿಂಜರಿಯುಂವತಾಗಿದೆ. ವಾಹನ ಸವಾರರು ಹೊರಟು ನಿರ್ದಿಷ್ಟ ಗುರಿ ತಲುಪುವ ಹೊತ್ತಿಗೆ ಹೈರಾಣಾಗುತ್ತಿದ್ದಾರೆ. ಇದಕ್ಕೆ ಕಾರಣ? ಅಸಮಂಜಸ ಟ್ರ್ಯಾಫಿಕ್ ಸಿಗ್ನಲ್‌ಗಳು.

ಅಗತ್ಯವಿಲ್ಲದ ವೇಗ ತಡೆಗಳು, ತೆರೆದಿರುವ ಕೇಬಲ್‌ಗಳು, ಹಬ್ಬಗಳು, ಧಾರ್ಮಿಕ ವೇದಿಕೆಗಳು, ರಾಜಕೀಯ ನಾಯಕರ ಆಚರಣೆಗಳು, ಹುಟ್ಟುಹಬ್ಬ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಬೆಂಬಿಡದೆ ಅಂಟಿಸುವ ಪ್ರಚಾರ ಸಾಮಗ್ರಿಗಳು, ಅಕ್ರಮ ಕಟೌಟ್‌ಗಳು ಇವೆಲ್ಲವೂ ಸೇರಿ ನಗರ ಪರಿಸರ, ಸಂಚಾರ ಸುರಕ್ಷತೆ ಮತ್ತು ಸೌಂದರ್ಯವನ್ನು ಸಂಪೂರ್ಣ ಹದಗೆಡಿಸುತ್ತಿವೆ.

ಸ್ಮಾರ್ಟ್ ಸಿಟಿ ಅವಾಂತರಗಳು

Advertisements

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕೋಟಿ ಕೋಟಿ ರೂಪಾಯಿ ಬಿಡುಗಡೆಯಾಗಿದ್ದರೂ, ನೆಲದ ವಾಸ್ತವ ಚಿತ್ರವೇ ಬೇರೆ. ‘ಸ್ಮಾರ್ಟ್ ಟ್ರ್ಯಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್’, ‘ಸ್ಮಾರ್ಟ್ ರಸ್ತೆಗಳು’ ಎಂಬ ಹೆಸರುಗಳಿಗೆ ತಕ್ಕಂತೆ ಯಾವುದೇ ಸೌಲಭ್ಯವೂ ಜನಸಾಮಾನ್ಯರಿಗೆ ಸಿಗುತ್ತಿಲ್ಲವೆಂಬ ಆರೋಪ ವ್ಯಕ್ತವಾಗಿದೆ. ಬದಲಾಗಿ ಜನ ʼಸ್ಮಾರ್ಟ್ ಸಿಟಿʼ ಅವಾಂತರಗಳನ್ನು ಅನುಭವಿಸುತ್ತಿದ್ದಾರೆಂದು ವ್ಯಂಗ್ಯವಾಡುತ್ತಿದ್ದಾರೆ.

1002322194

ಈ ಕುರಿತು ಕೆಆರ್‌ಎಸ್ ಪಕ್ಷದ ಮುಖಂಡ ಮಂಜುನಾಥ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರ್ಯಾಫಿಕ್ ಸಿಗ್ನಲ್‌ಗಳು ನಿಯಮವಿಲ್ಲದೆ ಅಸಮಂಜಸವಾಗಿ ಕಾರ್ಯನಿರ್ವಹಿಸುತ್ತಿವೆ. ಸಿಗ್ನಲ್‌ಗಳಲ್ಲಿ ಸೆಕೆಂಡ್ಸ್‌ಗಳಿಲ್ಲದೆ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ಒಂದೇ ವೇಳೆ ಕೆಂಪು–ಹಸಿರು ಬೆಳಕು ಹೊತ್ತಿ ಚಾಲಕರಲ್ಲಿ ಗೊಂದಲ ಉಂಟಾಗುವುದು ಸಾಮಾನ್ಯ. ಕೆಲವೆಡೆ ಹಸಿರು ಬೆಳಕು ಕೇವಲ 10–15 ಸೆಕೆಂಡ್ ಮಾತ್ರ ಹೊತ್ತುತ್ತಿದ್ದು, ವಾಹನ ಸಾಲುಗಳನ್ನು ತಗ್ಗಿಸುವ ಬದಲು ಹೆಚ್ಚಿಸುತ್ತಿದೆ.

1002334930

Karnataka Traffic Control Act, 1960 ರ ಸೆಕ್ಷನ್ 6ರ ಪ್ರಕಾರ ಚಾಲಕರು ಸಿಗ್ನಲ್‌ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಆದರೆ ಸೆಕ್ಷನ್ 7ರ ಪ್ರಕಾರ ಆ ಸಿಗ್ನಲ್‌ಗಳ ಸಮರ್ಪಕ ಕಾರ್ಯಾಚರಣೆ ನಡೆಸುವುದು ಟ್ರ್ಯಾಫಿಕ್ ಅಧಿಕಾರಿಗಳ ಕರ್ತವ್ಯವಾಗಿದೆ.

ವೇಗ ತಡೆಗಳ ಅವ್ಯವಸ್ಥೆ: ಶಾಲೆ, ಆಸ್ಪತ್ರೆ, ಅಪಘಾತ ಪ್ರದೇಶಗಳಲ್ಲಿ ವೈಜ್ಞಾನಿಕವಾದ ವೇಗ ತಡೆ ಇಲ್ಲದಿರುವಾಗ, ಅಗತ್ಯವಿಲ್ಲದ ಖಾಲಿ ಪ್ರದೇಶಗಳಲ್ಲಿ ಅಸಮಂಜಸ ವೇಗ ತಡೆಗಳನ್ನು ಹಾಕಲಾಗಿದೆ.

IRC Guidelines on Road Humps 2000ರ ಪ್ರಕಾರ ವೇಗ ತಡೆಗಳನ್ನು ಕೇವಲ ಅಪಘಾತ ವಲಯ ಸ್ಥಳಗಳಲ್ಲಿ ಮಾನದಂಡದ ಪ್ರಕಾರ ಮಾತ್ರ ಹಾಕಬೇಕಾಗಿದೆ. ಅನೀರೀಕ್ಷಿತವಾಗಿ ಬರುವ ವೇಗ ತಡೆಗಳಿಂದ ರಾತ್ರಿ ವೇಳೆ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿದೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

1002327647

ಪಾದಚಾರಿಗಳಿಗೆ ಪಾದಚಾರಿ ಮಾರ್ಗವಿಲ್ಲ

ಜನಸಂದಣಿ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಕ್ರಮ ಪಾರ್ಕಿಂಗ್ ಹಾಗೂ ಪಾದಚಾರಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅನೇಕ ಕಡೆ ಫುಟ್‌ಪಾತ್‌, ಸ್ಲ್ಯಾಬ್‌ಗಳು ಕಾಣೆಯಾಗಿದ್ದು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ರಸ್ತೆಯ ಮಧ್ಯೆ ನಡೆದು ಹೋಗುವಾಗ ಅಪಾಯಕ್ಕೆ ಒಳಗಾಗುತ್ತಿದ್ದಾರೆ.

1002328856

ಇನ್ನು ಈ ಸಂಬಂಧ ತಿಲಕ್ ನಗರ ನಿವಾಸಿ ರಾಜೇಂದ್ರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತಿಲಕ್ ನಗರದಲ್ಲಿ ಅನಗತ್ಯವಾಗಿ 6 ರಿಂದ 7 ಖಾಸಗಿ ಆಸ್ಪತ್ರೆಗಳಾಗಿವೆ. ಪಾರ್ಕಿಂಗ್ ವ್ಯವಸ್ಥೆ ಅವ್ಯವಸ್ಥೆಯಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಕೂಡ ಸಮಸ್ಯೆ ಬಗೆಹರಿಯುತ್ತಿಲ್ಲ. ಜತೆಗೆ ಈಗ ನಮ್ಮ ಮನೆ ಮುಂದೆಯೇ ಮತ್ತೊಂದು ಆಸ್ಪತ್ರೆ ಆರಂಭವಾಗಿದೆ. ಈಗ ಇದ್ದಕಿದ್ದಂಗೆ ಆಸ್ಪತ್ರೆ ಹೆಸರಲ್ಲಿ ʼಆಟೋ ನಿಲ್ದಾಣʼ ಅಂತ ಬೋರ್ಡ್ ಹಾಕಿ ಆಯುಧ ಪೂಜೆಯನ್ನೂ ಮಾಡಲಾಗಿದೆ. ಆಟೋಗಳಿಗೆ ಇದು ಮೊದಲೇ ಕಿರಿದಾದ ರಸ್ತೆಯಾಗಿದೆ. ಆಸ್ಪತ್ರೆಗೆ ಬಂದವರು ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲ್ಲಿಸುತ್ತಾರೆ. ಇದರಿಂದ ನಮ್ಮ ವಾಹನವನ್ನು ಮನೆಯಿಂದ ಹೊರಗೆ ತೆಗೆಯುವುದಿರಲಿ ನಾವೇ ಆಚೆ ಬರುವುದು ಕಷ್ಟವಾಗುತ್ತಿದೆ. ನಗರದಲ್ಲಿ ಟ್ರ್ಯಾಫಿಕ್ ಸಮಸ್ಯೆಯಂತೂ ಹೇಳುವುದೇ ಬೇಡ. ಅಷ್ಟು ಹದಗೆಟ್ಟು ಹೋಗಿದೆ. ನಗರದಲ್ಲಿ ಎಲ್ಲಿ ನೋಡಿದರೂ ಟ್ರ್ಯಾಫಿಕ್ ಜಾಮ್, ಪೊಲೀಸ್ ಹಾಗೂ ಸರ್ಕಾರ ದುಬಾರಿ ದಂಡ ವಸೂಲಿ ಮಾಡುತ್ತಿದೆ. ಅದಕ್ಕೆ ತಕ್ಕಂತೆ ವ್ಯವಸ್ಥೆ ಒದಗಿಸುತ್ತಿಲ್ಲ” ಎಂದು ಕಿಡಿಕಾರಿದರು.

1002327517
oplus_0

“ಅಳಿದುಹೋದ ಝೀಬ್ರಾ ಕ್ರಾಸಿಂಗ್‌ಗಳು Motor Vehicles Act 1988ರ ಪ್ರಕಾರ Section 138 ಉಲ್ಲಂಘನೆಯಾಗಿದೆ. ನಗರದ ಮುಖ್ಯ ಸರ್ಕಾರಿ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣದ ಅಶೋಕ ವೃತ್ತದಲ್ಲಿ ಝೀಬ್ರಾ ಕ್ರಾಸಿಂಗ್‌ ಅಳಿಸಿಹೋಗಿದ್ದು, ಮತ್ತೆ ಹಾಕಿಲ್ಲ. ಇದರಿಂದ ವಾಹನ ಸವಾರರಿಗೆ ಸಿಗ್ನಲ್‌ನಲ್ಲಿರುವ ಅತ್ಯಾಧುನಿಕ ಕ್ಯಾಮೆರಾದಿಂದ ವಾಹನ ಸವಾರರಿಗೆ ನಿತ್ಯವೂ ದಂಡ ಬೀಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟೌಟ್‌ಗಳ ನಗರವಾಗಿ ಬದಲಾಗುತ್ತಿರುವ ಶಿವಮೊಗ್ಗ

ರಾಜಕೀಯ ಹಾಗೂ ಧಾರ್ಮಿಕ ಕಟೌಟ್‌ಗಳು ಎಲ್ಲೆಡೆ ಅಂಟಿಕೊಂಡಿವೆ. ಚಾಲಕರ ದೃಷ್ಟಿ ಅಡ್ಡಿಯಾಗುವ ಮಟ್ಟಿಗೆ ಅಳವಡಿಸಿರುವ ಬ್ಯಾನರ್‌ಗಳು ಸಂಚಾರ ನಿಯಮಗಳನ್ನೇ ಹಾಳುಮಾಡುತ್ತಿವೆ.

ಸುಪ್ರೀಂ ಕೋರ್ಟ್ 2018ರ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಟೌಟ್‌, ಬ್ಯಾನರ್ ಮತ್ತು ಹೋರ್ಡಿಂಗ್‌ಗಳನ್ನು ಸುರಕ್ಷತೆ ಮತ್ತು ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಅಳವಡಿಸಬಾರದು. ಆದರೆ ಆದೇಶವನ್ನು ಉಲ್ಲಂಘಿಸಿ ನಗರದಲ್ಲಿ ಅನಿಯಂತ್ರಿತ ಬ್ಯಾನರ್‌ಗಳು ಮುಂದುವರೆದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ತೆರೆದಿರುವ ಕೇಬಲ್‌ಗಳು ನಿರ್ಲಕ್ಷ್ಯದ ಉದಾಹರಣೆಯಾಗಿದ್ದು, ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಮುಗಿದ ಕೂಡಲೇ ಮುಚ್ಚದೆ ಹಾಗೇ ಬಿಟ್ಟಿರುವುದು ಅಪಾಯಕಾರಿಯಾಗಿದೆ. Indian Electricity Rules 1956(Rule 77 & 79) ಪ್ರಕಾರ ತೆರೆದ ಕೇಬಲ್‌ಗಳು ನೇರ ಉಲ್ಲಂಘನೆ. ಮಳೆ ನೀರಿನೊಂದಿಗೆ ಬೆರೆತು ವಿದ್ಯುತ್ ಅಪಘಾತಗಳ ಭೀತಿ ಹೆಚ್ಚುತ್ತಿದೆ.

ನಾಗರಿಕರ ಧ್ವನಿ

“ಹಸಿರು ಸಿಗ್ನಲ್ ದೀಪ ತೋರಿಸುವ ಸಮಯದಲ್ಲಿ ಎರಡು ವಾಹನಗಳು ಕೂಡ ದಾಟಲಾರವು. ಇಷ್ಟು ಅಸಮಂಜಸ ಇನ್ನೇನಿರಬಹುದು?”

ನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿ ಮೂರು ಕಡೆ ಟ್ರ್ಯಾಫಿಕ್ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವುದರಿಂದ ನಿತ್ಯವೂ ಟ್ರ್ಯಾಫಿಕ್‌ ಜಾಮ್ ಉಂಟಾಗುತ್ತದೆ. ಜತೆಗೆ ಅಪಘಾತಗಳೂ ಸಂಭವಿಸುತ್ತಿವೆ.

“ಶಾಲೆಯ ಹತ್ತಿರ ವೇಗ ತಡೆ ಇಲ್ಲ. ಆದರೆ ಬೇಡದ ಕಡೆ ಹಂಪ್‌ ಅಳವಡಿಸಿದ್ದಾರೆ. ಮಳೆಗಾಲದಲ್ಲಿ ಮಕ್ಕಳು ಮನೆಗೆ ತಡವಾಗಿ ಬಂದರೆ, ಭಯ ಭೀತರಾಗುತ್ತೇವೆ. ನಮ್ಮ ಮಕ್ಕಳ ಸುರಕ್ಷತೆಗೆ ಯಾರು ಹೊಣೆ?” ಎಂದು ಪೋಷಕರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

“ಕಟೌಟ್‌ಗಳು, ಹೋರ್ಡಿಂಗ್‌ಗಳು, ಜಾಹೀರಾತುಗಳು ಇವೆಲ್ಲಕ್ಕಿಂತ ನಮ್ಮ ಜೀವದ ಬೆಲೆ ಕಡಿಮೆಯೇ?” ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

1002328865

ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ನಗರದಲ್ಲಿ ಪೊಲೀಸ್ ಚೌಕಿ ಸರ್ಕಲ್‌ನಲ್ಲಿ 5 ರಿಂದ 6 ರಸ್ತೆ ಸಂಪರ್ಕಗಳಿವೆ. ಇಲ್ಲಿ ಯಾವ ಸಿಗ್ನಲ್ ಎಲ್ಲಿ ಬೀಳುತ್ತೆ ಎಂಬುದು ಸರಿಯಾಗಿ ತಿಳಿಯದೆ ಅಪಘಾತಕ್ಕೆ ಕಾರಣವಾಗುತ್ತಿದೆ. ಅಲ್ಲದೆ ನಗರದ ಸರ್ವಜ್ಞ ವೃತ್ತ ಅಂದರೆ ಕೆಇಬಿ ಆಫೀಸ್ ಮತ್ತು ರೈಲ್ವೆ ನಿಲ್ದಾಣದ ರಸ್ತೆಗೆ ಸಿಗುವ ಸರ್ಕಲ್ ಬಳಿ ರಸ್ತೆಗಳು ಗುಂಡಿಮಯವಾಗಿವೆ. ಅಮೀರ್‌ ಅಹಮದ್‌ ವೃತ್ತ ನಗರದ ಹೃದಯಭಾಗವಾಗಿರುವುದರಿಂದ ಎಲ್ಲ ವಾಹನಗಳೂ ಇಲ್ಲೇ ಹಾದು ಹೋಗುತ್ತವೆ. ಆದರೆ ಈ ವೃತ್ತದಲ್ಲಿ ಸಿಗ್ನಲ್‌ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚು ಸಮಯ ವಾಹನ ದಟ್ಟಣೆ ಉಂಟಾಗುತ್ತದೆ. ಜತೆಗೆ ನ್ಯೂ ಮಂಡ್ಲಿ ಬೈಪಾಸ್ ಸರ್ಕಲ್‌ನಲ್ಲಿ ಅಷ್ಟೊಂದು ಪ್ರಮಾಣದ ಗುಂಡಿಗಳಿದ್ದರೆ ವಾಹನ ಸವಾರರು ಹೇಗೆ ವಾಹನ ಚಾಲನೆ ಮಾಡಲು ಸಾಧ್ಯ? ನಿತ್ಯವೂ ಜೀವ ಕೈಯಲ್ಲೇ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಇದಷ್ಟೇ ಅಲ್ಲದೆ ನಗರದಲ್ಲಿ ಇಷ್ಟೆಲ್ಲ ಅವೈಜ್ಞಾನಿಕ ಸಂಚಾರ ವ್ಯವಸ್ಥೆ ಇದ್ದರೂ ಕೂಡ ಟ್ರ್ಯಾಫಿಕ್ ಪೊಲೀಸರು ವಸೂಲಿ ಮಾಡಿ ಸರ್ಕಾರದ ಬೊಕ್ಕಸ ತುಂಬುವುದರಲ್ಲಿ ಬ್ಯುಸಿಯಾಗಿದ್ದಾರೆ” ಎಂದು ಆರೋಪಿಸಿದರು.

1002328884

“ಕೆಲವು ದಿನಗಳ ಹಿಂದೆ 50% ರಿಯಾಯಿತಿ ದರದಲ್ಲಿ ವಾಹನಗಳ ದಂಡ ವಸೂಲಿ ಮಾಡಲಾಯಿತು. ಇದೆಲ್ಲ ಸರ್ಕಾರಕ್ಕೆ ಅಭಿವೃದ್ಧಿ ಮಾಡಲು ಹಣವಿಲ್ಲ. ಜತೆಗೆ ಗ್ಯಾರಂಟಿ ಯೋಜನೆಗಳಿಗೂ ಹಣವಿಲ್ಲ. ಹಾಗಾಗಿ ಈ ರೀತಿ ಹಣ ಮಾಡಲು ಮಾಡಿಕೊಂಡಿರುವ ವಿಧಾನ” ಎಂದು ವ್ಯಂಗ್ಯವಾಡಿದರು.

ಇನ್ನೂ ವಿಚಿತ್ರವೆಂದರೆ ನಗರದ ಗೋಪಿ ಸರ್ಕಲ್‌ನಲ್ಲಿರುವ ಸಿಗ್ನಲ್ ಭಾನುವಾರ ಮಾತ್ರ ಆನ್ ಆಗತ್ತದೆ. ಬೇರೆ ದಿನ ಇರುವುದಿಲ್ಲ. ಜತೆಗೆ ಇಲ್ಲಿ ಸಿಗ್ನಲ್ ಅಳವಡಿಸಿರುವುದರಿಂದಲೇ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಈ ರೀತಿ ನಗರದಲ್ಲಿ ಹಲವು ಭಾಗದಲ್ಲಿ ಈ ಸಮಸ್ಯೆಯಾಗಿದೆ. ನಗರದ ಟ್ರ್ಯಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ಇಚ್ಛಾಶಕ್ತಿ ಅಧಿಕಾರಿಗಳಲ್ಲಿ ಕಾಣಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

1002322472

ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, “ಸಾಗರ ರಸ್ತೆಯಲ್ಲಿ ನಿತ್ಯವೂ ಅಪಘಾತಗಳಾಗುತ್ತಲೇ ಇವೆ. ಇಲ್ಲಿಗೆ ಹಂಪ್‌ಗಳ ಅವಶ್ಯಕತೆಯಿದೆ. ವೇಗ ನಿಯಂತ್ರಣ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕಿದೆ. ನಗರದ ಸರ್ಕಾರಿ ಮೆಗ್ಗಾನ್ ಬೋಧನಾ ಸಂಸ್ಥೆ ಹಾಗೂ ಆಸ್ಪತ್ರೆಯಿದೆ. ಇಲ್ಲಿಗೆ ನಿತ್ಯವೂ ನಗರದವರಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ರೋಗಿಗಳು ಬರುತ್ತಾರೆ. ಇಲ್ಲಿಯ ರಸ್ತೆಯಲ್ಲಿ ರಸ್ತೆ ದಾಟುವುದೇ ಒಂದು ಸಾಹಸವಾಗಿದೆ. ಸಂಜೆ ವೇಳೆಯಲ್ಲಿ ಸರಿಯಾದ ಬೀದಿದೀಪಗಳಿಲ್ಲ. ನಿತ್ಯ ಏನಿಲ್ಲವೆಂದರೂ 3 ರಿಂದ 4 ಅಪಘಾತಗಳಾಗುವುದು ಸಹಜವಾಗಿದೆ. ಇಲ್ಲಿರುವ ಅಶೋಕ ಸರ್ಕಲ್‌ನಲ್ಲಿ ಎಲ್ಲೂ ಝೀಬ್ರಾ ಕ್ರಾಸಿಂಗ್‌ಗಳಿಲ್ಲ. ಇನ್ನು ಹೊಳೆಹೊನ್ನೂರು-ಚಿತ್ರದುರ್ಗ ಸಂಪರ್ಕಿಸುವ ಫ್ಲೈಓವರ್ ಕೆಳಗೆ ಕಡ್ಡಾಯವಾಗಿ ಸಿಗ್ನಲ್ ಅವಶ್ಯಕತೆವಿದೆ. ಯಾಕೆಂದರೆ ಇಲ್ಲಿಂದ ನಗರಕ್ಕೆ ಹಾಗೂ ಭದ್ರಾವತಿ-ಬೆಂಗಳೂರು-ಮೈಸೂರು-ಚಿಕ್ಕಮಗಳೂರು ಹೀಗೆ ಬೇರೆ ಬೇರೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ” ಎಂದರು.

“ಕೆಲವು ದಿನಗಳ ಹಿಂದೆ ವಾಹನ ಸವಾರರಿಂದ ವಸೂಲಿಯಾದ 50% ರಿಯಾಯಿತಿ ದರದ ದಂಡವು ನಗರದ ಪಶ್ಚಿಮ ಸಂಚಾರಿ ಠಾಣೆಯಲ್ಲಿ ಹೆಚ್ಚಾಗಿ ವಸೂಲಿಯಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇದನ್ನು ಅತ್ಯುತ್ತಮ ಕೆಲಸವೆಂದುಕೊಳ್ಳುವುದು ಬೇಡ. ಅವೈಜ್ಞಾನಿಕ ಟ್ರ್ಯಾಫಿಕ್ ವ್ಯವಸ್ಥೆಯಿಂದ ಈ ರೀತಿ ಆಟೋ, ಕಾರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ದಂಡ ಬಿದ್ದಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿ ವಾಹನ ಸವಾರರಿಗೆ ಹೊರೆಯಾಗದಂತೆ ವ್ಯವಸ್ಥೆ ಮಾಡಬೇಕು” ಎಂದರು.

“ತಿಲಕ್ ನಗರದ ಆರ್‌ಎಂಆರ್ ರಸ್ತೆ, ಪಾರ್ಕ್ Extension ರಸ್ತೆಗಳು ಸಂಪೂರ್ಣ ಆಸ್ಪತ್ರೆಗಳ ಸಮುಚ್ಚಯವಾಗಿ ಹೋಗಿದೆ. ಇಲ್ಲಿ ಸರ್ಜಿ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ನಂಜಪ್ಪ ಆಸ್ಪತ್ರೆ, ಸರ್ಜಿ ಹೊಸ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆಗಳು ತಲೆ ಎತ್ತಿವೆ. ಇಷ್ಟೆಲ್ಲ ಆಸ್ಪತ್ರೆಗಳು ಆರಂಭವಾಗಿರುವುದರಿಂದ ಜನಸಾಮಾನ್ಯರು ಹಾಗೂ ನಗರದ ವಾಹನ ಸವಾರರು ಇಲ್ಲಿ ಓಡಾಡುವುದೇ ಒಂದು ಸವಾಲಾಗಿದೆ. ಇವೆಲ್ಲ ಸಂಪೂರ್ಣ ಪಾರ್ಕಿಂಗ್ ರಸ್ತೆಗಳಾಗಿ ಮಾರ್ಪಟ್ಟಿವೆ. ಇದನ್ನು ಕೂಡಲೇ ಬಗೆಹರಿಸಬೇಕು. ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಚಾರುಲತಾ ಅವರು ಆಸ್ಪತ್ರೆ ಮಾಲೀಕರಿಗೆ ಸಿಂಹಸ್ವಪ್ನವಾಗಿದ್ದರು. ಯಾಕೆಂದರೆ ಮಾಲೀಕರು ತಮ್ಮ ಆಸ್ಪತ್ರೆ ಕಟ್ಟಡದಲ್ಲಿಯೇ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಕಟ್ಟುನಿಟ್ಟಾಗಿ ನಿರ್ದೇಶಿಸಿದ್ದರು. ಅವರ ವರ್ಗಾವಣೆ ನಂತರ ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಈಗಲೂ ಮಹಾನಗರ ಪಾಲಿಕೆ ಹಾಗೂ ಟ್ರ್ಯಾಫಿಕ್ ಪೊಲೀಸ್ ಜತೆಗೂಡಿ ನಗರದಲ್ಲಾಗಿರುವ ಅವ್ಯವಸ್ಥೆ ಸರಿಪಡಿಸಬೇಕು” ಎಂದು ಅಗ್ರಹಿಸಿದರು.

1002327474

ಈ ಸಂಬಂಧ ಸರ್ಕಲ್ ಇನ್‌ಸ್ಪೆಕ್ಟರ್‌ ದೇವರಾಜ್ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ನಾನು ಮೈಸೂರು ದಸರಾ ಕರ್ತವ್ಯದಲ್ಲಿ ಇದ್ದೇನೆ. ಶಿವಮೊಗ್ಗಕ್ಕೆ ಅಕ್ಟೋಬರ್ 6ರಂದು ಬರುತ್ತೇನೆ. ನಂತರ ಮಾಹಿತಿ ತಿಳಿಸುತ್ತೇನೆ” ಎಂದು ಪ್ರತಿಕ್ರಿಯಿಸಿದರು.

1002328772

ಕೆಲವು ತಿಂಗಳಗಳ ಹಿಂದೆ ಕರ್ತವ್ಯಕ್ಕೆ ಶಿವಮೊಗ್ಗ ನಗರಕ್ಕೆ ಉಡುಪಿಯಿಂದ ವರ್ಗಾವಣೆಯಾಗಿ ಬಂದ ದೇವರಾಜ್ ಅವರು ನಗರದ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಉಂಟಾಗುತ್ತಿದ್ದ ಸಮಸ್ಯೆ ಬಗೆಹರಿಸಿಕೊಟ್ಟಿದ್ದಾರೆ. ಹಾಗೆಯೇ ಆಟೋ ಚಾಲಕರಿಗೆ ಖಡಕ್ ವಾರ್ನಿಂಗ್ ನೀಡುವ ಮೂಲಕ ನಗರದಲ್ಲಿ ಒಂದು ಹಂತಕ್ಕೆ ಭರವಸೆ ಮೂಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶೀಘ್ರದಲ್ಲಿಯೇ ಆಟೋ ಪ್ರಿಪೇಯ್ಡ್ ಕೂಡ ಮಾಡುವ ನಿರೀಕ್ಷೆಯಿದೆ.

ಈ ದಿನ.ಕಾಮ್‌ ಶಿವಮೊಗ್ಗ ಜಿಲ್ಲಾ ವರದಿಗಾರರು, ನಗರದಲ್ಲಿ ವೇಗ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ದೇವರಾಜ್ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ನಗರದ ಶುಭಮಂಗಳ ಛತ್ರದ ರಸ್ತೆಯಲ್ಲಿ ಹಂಪ್ಸ್‌ ಅಳವಡಿಕೆ ಮಾಡಿ, ನಂತರ ಮಾಹಿತಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಸಾಮಾನ್ಯರ ಅನುಕೂಲಕರ ವ್ಯವಸ್ಥೆ ಮಾಡಲು ಪ್ರಯತ್ನಿಸುವ ವಿಶ್ವಾಸ ಮೂಡಿಸಿದ್ದಾರೆ.

1002328773

ಟ್ರ್ಯಾಫಿಕ್‌ ಸಮಸ್ಯೆ ಮತ್ತು ಪಾರ್ಕಿಂಗ್‌ ಅವ್ಯವಸ್ಥೆ ಕುರಿತು ಈ ದಿನ.ಕಾಮ್ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಅವರನ್ನು ಸಂಪರ್ಕಿದೆಯಾದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, “ನಗರದ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಎಲ್ಲವೂ ಸರಿ ಇದೆ” ಎಂದು ಸಮರ್ಥಿಸಿಕೊಂಡರು.

1002328759

ನಗರದ ಅಶೋಕ ಸರ್ಕಲ್‌ನಲ್ಲಿ ಎರಡೆರಡು ಸಿಗ್ನಲ್‌ಗಳಿದ್ದು, ಅವೈಜ್ಞಾನಿಕವಾಗಿವೆ. ಖಾಸಗಿ ಬಸ್ ನಿಲ್ದಾಣದೊಳಗೆ ಖಾಸಗಿ ಬಸ್ ಹೊರತುಪಡಿಸಿ ಬೇರೆ ವಾಹನಗಳಿಗೆ ಪ್ರವೇಶವಿಲ್ಲ ದಂಡ ವಿಧಿಸಲಾಗುವುದು ಎಂಬ ಪೋಸ್ಟರ್ ಇದ್ದರೂ ಎಲ್ಲ ವಾಹನಗಳು ಬಸ್ ನಿಲ್ದಾಣಕ್ಕೆ ಸಂಚಾರ ಮಾಡುತ್ತಿವೆ. ಆಟೋ ಮೀಟರ್ ಕಡ್ಡಾಯ ಎನ್ನುತ್ತಾರೆ. ಆದರೆ ಅದರ ಪಾಲನೆಯಾಗುತ್ತಿಲ್ಲ. ಈ ಕುರಿತ ಪ್ರಶ್ನೆಗೆ, ʼನಿಲ್ದಾಣದೊಳಗೆ ಒಂದು ಕಾಂಪ್ಲೆಕ್ಸ್ ಕೆಲಸವಾಗುತ್ತಿದೆ. ಕೆಸದ ಬಳಿಕ ಅಲ್ಲಿರುವ ರಸ್ತೆ ಬದಿಯ ಹೂವು ಹಣ್ಣು ಇತರೆ ವ್ಯಪಾರಿಗಳನ್ನು ತೆರುವುಗೊಳಿಸುವ ಮೂಲಕ ಸುಗಮ ಸಂಚಾರ ಹಾಗೂ ಇನ್ನಿತರೆ ವಿಷಯಕ್ಕೆ ಕ್ರಮ ಜರುಗಿಸುವ ಮೂಲಕ ಸರಿಪಡಿಸುತ್ತೇವೆ. ಕಾಂಪ್ಲೆಕ್ಸ್ ಒಳಗೆ ಹೂವು, ಹಣ್ಣಿನ ವ್ಯಾಪಾರಿಗಳಿಗೆ ಅಂಗಡಿಗಳು ನಿರ್ಮಾಣವಾಗುತ್ತಿವೆ. ಇದಾದ ಬಳಿಕ ಸಮಸ್ಯೆ ಬಗೆಹರಿಸಲಾಗುವುದು” ಎಂಬ ಭರವಸೆ ನೀಡಿದ್ದಾರೆ.

ಗೋಪಿ ಸರ್ಕಲ್‌ನಿಂದ ಜೈಲ್ ಸರ್ಕಲ್‌ಗೆ ಹೋಗುವ ದುರ್ಗಿಗುಡಿ ರಸ್ತೆಯು ಏಕ ಮುಖ ಸಂಚಾರ ವ್ಯವಸ್ಥೆಯಾಗಿದೆಯಾದರೂ ಇಲ್ಲಿ ಎರಡೂ ಕಡೆ ವಾಹನ ಸಂಚಾರವಾಗುತ್ತಿದೆ. ಈ ಸಮಸ್ಯೆಗೆ ಏನು ಪರಿಹಾರವೆಂದು ಕೇಳಿದಕ್ಕೆ, “ವಾಹನ ಸವಾರರೇ ಅರ್ಥ ಮಾಡಿಕೊಳ್ಳಬೇಕು. ನಾವು ಹಲವಾರು ಬಾರಿ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ. ಎಲ್ಲವನ್ನೂ ನಾವೇ ಮಾಡಲು ಆಗುವುದಿಲ್ಲ. ಸಾರ್ವಜನಿಕರು, ಜನಸಾಮಾನ್ಯರೂ ಕೂಡ ನಮಗೆ ಸಹಕಾರ ನೀಡಬೇಕು” ಎಂದು ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

1002328919

ಇನ್ನು ನಗರದಲ್ಲಿ ಆಟೋ ಚಾಲಕರು ಮೀಟರ್ ಕಡ್ಡಾಯವೆಂದರೂ ನಿಯಮ ಪಾಲನೆ ಮಾಡುತ್ತಿಲ್ಲ. ನಗರದೊಳಗೆ 10 ಕಿಮೀ ಮಾತ್ರ ಸಂಚಾರ ಮಾಡಬೇಕೆಂಬ ಮಾಹಿತಿಯಿದ್ದರೂ ನಗರದ ವಿಮಾನ ನಿಲ್ದಾಣದಕ್ಕೆ ಸರಿ ಸುಮಾರು 14ಕ್ಕೂ ಹೆಚ್ಚು ಕಿಮೀ ದೂರಕ್ಕೆ ಬಾಡಿಗೆ ಹೊಡೆಯುತ್ತಾರೆ. ಆಟೋಗಳಿಗೆ ಮೀಟರ್ ಕೂಡ ಹಾಕದೆ ಮನ ಬಂದಷ್ಟು ಹಣ ಕೇಳುವುದರೊಂದಿಗೆ ಆಟೋ ಓಡಿಸುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿವೆ.

ನಗರದಲ್ಲಿ ಆಟೋ ಚಾಲಕರು ಮಿನಿಮಮ್ ಚಾರ್ಜ್‌ ಹಣವನ್ನು ಇದ್ದಕಿದ್ದಂತೆ 60 ರೂಪಾಯಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದ್ದು, ನಗರದಲ್ಲಿ ದುಪ್ಪಟ್ಟು ಹಣ ಬಾಡಿಗೆ ಕೇಳುವಂತಹ ಸಮಸ್ಯೆಗಳೆಲ್ಲ ಕೇಳಿಬರುತ್ತಿವೆ.

1002328920

ಸರ್ಕಿಟ್ ಹೌಸ್ ಸಿಗ್ನಲ್ ಬಳಿ ನೊ ಪಾರ್ಕಿಂಗ್ ಬೋರ್ಡ್

ಪರಿಹಾರಕ್ಕಾಗಿ ಆಗ್ರಹ

ನಾಗರಿಕರು ತಕ್ಷಣವೇ ಸ್ಮಾರ್ಟ್ ಟ್ರಾಫಿಕ್ ವ್ಯವಸ್ಥೆ, ಪಾದಚಾರಿ ಮಾರ್ಗಗಳ ಶುದ್ಧೀಕರಣ, ಅಕ್ರಮ ಹೋರ್ಡಿಂಗ್ ತೆರವು, ಇವರುಗಳ ವಿರುದ್ಧ ಬಿಗಿಯಾದ ಕಾನೂನು ಕ್ರಮ, ರಸ್ತೆ ಗುರುತುಗಳ ನವೀಕರಣ, ಟ್ರ್ಯಾಫಿಕ್ ನಿಯಂತ್ರಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

Motor Vehicles Act, 1988(Seection 201, 202) ಪ್ರಕಾರ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ನಿರ್ಲಕ್ಷ್ಯ ಕ್ರಮಗಳಿಗೆ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಬೇಕು.

ಅಂತಿಮವಾಗಿ ಶಿವಮೊಗ್ಗದ ಸಂಚಾರ ನಿರ್ವಹಣೆಯಲ್ಲಿ ಕಾಣುತ್ತಿರುವ ವೈಫಲ್ಯಗಳು ನಾಗರಿಕರ ದೈನಂದಿನ ಬದುಕನ್ನೇ ಅಸ್ತವ್ಯಸ್ತಗೊಳಿಸುತ್ತಿವೆ.

ʼಸ್ಮಾರ್ಟ್ ಸಿಟಿʼ ಎಂಬ ಹೆಸರು ಕೇವಲ ಕಾಗದದಲ್ಲೇ ಉಳಿದು, ನೆಲದಲ್ಲಿ ʼಸ್ಮಾರ್ಟು ಸಿಟಿ ಅವಾಂತರಗಳುʼ ಜನರ ಬದುಕನ್ನು ಹಾಳು ಮಾಡುತ್ತಿವೆ. ನಾಗರಿಕರು ಸುಗಮ, ಸುರಕ್ಷಿತ ಸಂಚಾರಕ್ಕೆ ಹಕ್ಕುದಾರರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ರಾಜಕೀಯ ಪಕ್ಷಗಳ ಹಾಗೂ ಧಾರ್ಮಿಕ ಆಚರಣೆಗಳ ಅಕ್ರಮ ಹೋರ್ಡಿಂಗ್‌ಗಳಿಗೆ ಮೌನಸಮ್ಮತಿ ಮತ್ತು ನಿಯಮ ಪಾಲನೆಯ ಕೊರತೆಗಳು ನಗರವನ್ನು ಅರಾಜಕ ಸಂಚಾರದ ಕೇಂದ್ರವನ್ನಾಗಿ ಮಾಡಿವೆ.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ನಾಳೆ ‘ಮಾದಕ ಮುಕ್ತ ಸಮಾಜ ಮತ್ತು ಡಿಜಿಟಲ್ ಸ್ವಾತಂತ್ರ್ಯ’ ಕುರಿತು ಜಿಲ್ಲಾ ಮಟ್ಟದ ಯುವ ಸಮಾವೇಶ

"ಮಾದಕ ವಸ್ತುಗಳ ಸೇವನೆ ಹಾಗೂ ಡಿಜಿಟಲ್ ವ್ಯಸನದಿಂದ ಯುವಕರು ತಮ್ಮ ಜೀವನವನ್ನು...

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X