ಕರಾವಳಿಯಲ್ಲಿ ಮೇ ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈಗ ಕೃಷಿಕರ ಕಣ್ಮುಂದೆ ಕತ್ತಲೆ ಆವರಿಸಿದಂತಾಗಿದೆ. ವಿಶೇಷವಾಗಿ ಕೊಕೊ ಮತ್ತು ಅಡಕೆ ಬೆಳೆಗಾರರಿಗೆ ಈ ಬಾರಿಯ ಬೆಳೆ ಹಾಗೂ ಬೆಲೆ ಎರಡರಲ್ಲಿಯೂ ನಷ್ಟ ಸಂಭವಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮದ ಪ್ರತಿಯೊಂದು ತೋಟದಲ್ಲೂ ನಿರಾಶದಾಯಕ ವಾತಾವರಣ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಅಡಿಕೆ ಮತ್ತು ಕೊಕೊ ಬೆಳೆಯು ಪ್ರಮುಖ ಉಪಬಳಕೆಯಾಗಿದೆ. ಅಡಕೆ ತೋಟಗಳ ನಡುವೆ ಬೆಳೆಯಲು ಅನುವಾಗಿರುವ ಈ ಕೊಕೊ ಇದೀಗ ಮಳೆಗೆ ತೀವ್ರವಾಗಿ ಬಲಿಯಾಗಿರುವುದರಿಂದ ಕೃಷಿಕರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಕೊಕೊ ಇಳುವರಿ ಬರುತ್ತದೆ. ಆದರೆ ಅದೇ ವೇಳೆಯಿಂದಲೇ ಹೆಚ್ಚು ಮಳೆಯಾಗುತ್ತಿರುವ ಕಾರಣ ಶೇ.50ರಷ್ಟೂ ಇಳುವರಿ ಕಾಣಲು ಸಾಧ್ಯವಾಗಿಲ್ಲ. ಇಳುವರಿಗಿಂತ ಮೊದಲೇ ಕೊಕೊ ಕಾಯಿ ಕಪ್ಪಾಗಿ ಗಿಡದಲ್ಲೇ ಕೊಳೆತು ಹೋಗುತ್ತಿದೆ. ಹಲವಾರು ಕಡೆಗಳಲ್ಲಿ ಬೋರ್ಡೊ ದ್ರಾವಣ, ಕೀಟನಾಶಕ ಸಿಂಪಡನೆ ಮಾಡಿದರೂ ಯಾವುದೇ ಫಲವಿಲ್ಲ.

ವರ್ಷಕ್ಕೆ 8-9 ತಿಂಗಳು ಕೊಕೊ ಇಳುವರಿ ದೊರೆಯುವ ಸ್ಥಿತಿಯಲ್ಲಿದ್ದರೂ, ಈ ಬಾರಿಯ ವಿಪರೀತ ಮಳೆಯಿಂದಾಗಿ ಬೆಳೆಹಾನಿಯಾಗಿದ್ದು, ಎರಡು ತಿಂಗಳು ಸಿಕ್ಕರೆ ಮಿಗಿಲು ಎಂಬಂತಾಗಿದೆ. ಇತ್ತ ತೋಟದಲ್ಲಿ ಅಳಿಲು, ಮಂಗಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳ ಕಾಟ ಹೆಚ್ಚಾಗಿದ್ದು, ಕೃಷಿಕರು ಹೈರಾಣಾಗುತ್ತಿದ್ದಾರೆ. ತೋಟಗಾರಿಕೆ ಮಾಡುವ ಹವ್ಯಾಸ ಬಿಟ್ಟು ಬೇರೆ ಮಾರ್ಗಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ.
ಇತಿಹಾಸ: ಕೊಕೊ ಬೆಳೆಯು ಕರಾವಳಿಗೆ ಬಂದದ್ದಕ್ಕೇ ಸುಮಾರು 50 ವರ್ಷಗಳ ಇತಿಹಾಸವಿದೆ. ದಕ್ಷಿಣ ಅಮೆರಿಕದಿಂದ ಭಾರತಕ್ಕೆ ಪರಿಚಯವಾದ ಬೆಳೆಗಳಲ್ಲಿ ಕೊಕೊ ಕೂಡ ಒಂದು.

ಅಂದು ಕೊಕೊ ಬೆಲೆಯಲ್ಲಿ ಪ್ರಾರಂಭಿಕ ದರ ಕೆಜಿಗೆ ₹10, ₹15ರ ಒಳಗಿದ್ದರೂ, ಪ್ರೋತ್ಸಾಹಿತ ಕೃಷಿಕರು ಧೈರ್ಯದಿಂದ ಈ ಬೆಳೆಯನ್ನು ಸ್ವೀಕರಿಸಿದರು. ನಂತರ ವೆನಿಲ್ಲಾ, ಲವಂಗ, ಜಾಯಿಕಾಯಿ ಮುಂತಾದ ಬಹುಬೆಲೆಯ ಬೆಳೆಗಳು ಬಂದರೂ, ಕೊಕೊ ಮತ್ತು ರಬ್ಬರ್ ಬೆಳೆಗಳಷ್ಟು ಶಾಶ್ವತವಾದ ಲಾಭದಾಯಕತೆ ತೋರಲಿಲ್ಲ.
ಪುತ್ತೂರು ತಾಲೂಕಿನ ಕೃಷಿಕ ಹರೀಶ್ ಈ ದಿನ.ಕಾಮ್ ಜತಗೆ ಮಾತನಾಡಿ, “ಈ ವರ್ಷ ಕೊಕೊ ಬೆಳೆ ಕೈಗೆ ಸಿಗದ ರೀತಿಯಾಗಿದೆ. ಹಸಿರು ಕಾಯಿಗಳು ಆಗಸ್ಟ್ ವೇಳೆಗೆ ಸಂಪೂರ್ಣ ಹಣ್ಣಾಗಿ ಬದಲಾಗಿರಬೇಕಿತ್ತು. ಆದರೆ ಈ ಬಾರಿ ಮಿತಿಮೀರಿ ಮಳೆ ಬಿದ್ದಿದೆ. ಕಾಯಿಗಳು ಚಿಕ್ಕದಾಗಿ ಇರುವ ಸಂದರ್ಭದಲ್ಲಿ ಗಿಡದಲ್ಲೇ ಕಪ್ಪಾಗುತ್ತ, ಕೊಳೆತು ಬೀಳುತ್ತಿವೆಯೋ ಹೊರತು ಇಳುವರಿ ಇಲ್ಲ. ಹಸಿ ಕೊಕೊಬೀಜ ಮಾರಾಟವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ನಾನು ಗೊಬ್ಬರ, ಔಷಧಿ ಮತ್ತು ಕಾರ್ಮಿಕರಿಗೆ ಸಂಬಳ ಕೊಡುವುದಕ್ಕಾಗಿ ಬ್ಯಾಂಕಿನಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೆ. ಈ ವರ್ಷದ ವಾತಾವರಣ ನೋಡಿ ಈ ಬೆಳೆಯನ್ನು ತೆಗೆದು ಬೇರೆ ಬೆಳೆಯನ್ನು ಬೆಳೆಯಬೇಕೆಂದು ಮನಸ್ಸಾಗಿದೆ” ಎಂದು ಅವಲತ್ತುಕೊಂಡರು.
ಈ ದಿನ.ಕಾಮ್ ಜತೆಗೆ ಬಂಟ್ವಾಳ ತಾಲೂಕಿನ ಕೃಷಿಕ ಜಯರಾಮ ಮಾತನಾಡಿ,”ಅಡಕೆ ಬೆಲೆಯಲ್ಲಿ ಇತ್ತೀಚೆಗಿನ ಕುಸಿತದ ಹಿನ್ನೆಲೆಯಲ್ಲಿ ಕೊಕೊ ನಮ್ಮ ಬದುಕಿನ ಚಕ್ರ ತಿರುಗಿಸುತ್ತಿತ್ತು. ತಿಂಗಳಿಗೆ 5 ರಿಂದ 6 ಸಾವಿರ ರೂಪಾಯಿ ಆದಾಯ ತಂದುಕೊಡುತ್ತಿದ್ದ ಅದೇ ಕೊಕೊ ಈ ಬಾರಿ ನಸುಕಾಗಿಯೇ ಕಪ್ಪು ಹಣ್ಣಾಗಿ ಬಿದ್ದಿದೆ. ಕೋಪರ್, ಬೋರ್ಡೊ ಸೇರಿದಂತೆ ಹಲವು ಔಷಧಿಗಳನ್ನು ಸಿಂಪಡಣೆ ಮಾಡಿದ್ದೇವೆ. ಆದರೆ ಮಳೆಯ ಮುಂದೆ ಔಷಧಿಯ ಏನೂ ಕೆಲಸ ಮಾಡಿಲ್ಲ, ಬೆಳೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ” ಎಂದು ನೋವಿನ ಮಾತುಗಳನ್ನಾಡಿದರು.

“ಅಡಕೆ ಮರದ ಬೇರು ಈಗ ನೀರಿನಲ್ಲಿ ನೆನೆದು ಕೊಳೆಯುತ್ತಿದೆ. ಇರುವ 2 ಎಕರೆಯಲ್ಲಿ ಕಳೆದ ತಿಂಗಳು 10 ರಿಂದ 20 ಗಿಡಗಳು ಬಿದ್ದಿವೆ. ಇನ್ನು ಎಷ್ಟು ಬೀಳುತ್ತವೋ ಗೊತ್ತಿಲ್ಲ. ತೋಟವನ್ನು ನೋಡುವುದೇ ಬೇಡ ಎನಿಸುವಷ್ಟು ಜಿಗುಪ್ಸೆಯಾಗಿದೆ. ಈ ಕೊಕೊ ಹಣ್ಣುಗಳು ಉದುರಿದಂತೆ ತಮ್ಮ ಬದುಕೂ ಕೂಡ ಬರಡಾದಂತಾಗುತ್ತಿದೆ” ಎಂದು ಹೇಳಿದರು.
ಈ ದಿನ.ಕಾಮ್ ಜತೆಗೆ ಬೆಳ್ತಂಗಡಿ ತಾಲೂಕಿನ ಕೃಷಿಕರಾದ ನಂದಿನಿ ಅಮ್ಮ ಮಾತನಾಡಿ, “ಮನೆಯ ಪಕ್ಕದ ತೋಟವನ್ನೇ ನನ್ನ ಜೀವನವೆಂದುಕೊಂಡಿದ್ದೆ. ಕೊಕೊ ಹಣ್ಣು ಬರುತ್ತಿದ್ದಾಗ ನಾನು ಮಕ್ಕಳ ಜತೆ ಖುಷಿ ಪಡುತ್ತಿದೆ. ಈ ಬಾರಿ ಹಣ್ಣು ಬೆಳೆಯದೇ, ಕಪ್ಪಾಗಿ ಬಿದ್ದು ಹೋಗುತ್ತಿರುವುದು ತೀವ್ರ ನೋವುಂಟು ಮಾಡಿದೆ. ಬೆಳೆದ ಹಣ್ಣು ಕೈಗೆ ಸಿಗೋದಿಲ್ಲ. ಆದರೆ ತೋಟದಲ್ಲಿ ಖರ್ಚು ಮಾತ್ರ ಹೆಚ್ಚಾಗಿದೆ. ಗಂಡನಿಲ್ಲದ ಜೀವನದಲ್ಲಿ ತೋಟವನ್ನು ನಂಬಿಕೊಂಡು ಮಕ್ಕಳ ವಿದ್ಯಾಭ್ಯಾಸದ ಖರ್ಚು ಮಾಡಿಕೊಳ್ಳುತ್ತಿದೆ. ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಎಲ್ಲದಕ್ಕೂ ಕಷ್ಟ ಆಗಿದೆ” ಎಂದು ಹೇಳಿದರು.
“ಈ ವರ್ಷ ತೋಟಕ್ಕೆ ಹೋಗಬೇಕು ಎಂದರೇ ಕಣ್ಣೀರು ತರಿಸುತ್ತದೆ. ನಾವು ಎಷ್ಟು ಶ್ರಮ ಹಾಕಿದರೂ, ಎಲ್ಲವೂ ನೀರಿನಲ್ಲಿ ಕರಗಿ ಹೋಗಿದೆ ಅನ್ನಿಸುತ್ತದೆ. ಈ ಬಾರಿಯ ಮಳೆ ನಮ್ಮ ಮನಸ್ಸನ್ನು ಮುರಿದಿದೆ. ಮತ್ತೆ ಎದ್ದು ನಿಲ್ಲೋ ಶಕ್ತಿ ಇಲ್ಲ ಅನ್ನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
ಪ್ರಕೃತಿ ಮತ್ತು ಬದುಕಿನ ನಡುವೆ ನಿಲ್ಲಬೇಕಾದ ರೈತರು
ಇದು ಕೇವಲ ಬೆಳೆ ನಾಶವಾದ ವಿಷಯವಲ್ಲ. ಇದು ಸಾವಿರಾರು ಕುಟುಂಬಗಳ ಕನಸು, ಶ್ರಮ ಮತ್ತು ಭರವಸೆಯ ಮಣ್ಣಿನೊಳಗೆ ಕರಗಿದ ಕಥೆ. ಕೊಕೊ ಮತ್ತು ಅಡಕೆ ಎರಡೂ ಬೆಳೆಗಳು ಈ ಭಾಗದಲ್ಲಿ ಜೀವನ ಸಾಗಿಸಲು ಸಹಾಯ ಮಾಡಿದ್ದವು. ಆದರೆ ಈ ವರ್ಷ ಪ್ರಕೃತಿ ತನ್ನ ಶಕ್ತಿಯನ್ನು ಎಳೆದು, ರೈತರ ಶ್ರಮದ ಮೇಲೆ ಬಲವಾದ ಪ್ರಹಾರ ಮಾಡಿದೆ.
ರೈತರು ಈಗ ತಾವು ಬೆಳೆದ ಗಿಡಗಳನ್ನು ನೋಡುವುದಕ್ಕೂ ಹೆದರುತ್ತಿದ್ದಾರೆ. ಮುಂದಿನ ಹಂಗಾಮಿಗೆ ತಾವು ಉಳಿದಿರುತ್ತೇವೆಯೋ ಎಂಬ ಆತಂಕದಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕ ಜೀವನದಲ್ಲಿ ಈ ವರ್ಷದಲ್ಲಿ ಮಹತ್ವದ ಬದಲಾವಣೆ ಬರುತ್ತದೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಹೆಚ್ಚಾಗಿ ಸುರಿದ ಮಳೆಯಿಂದ ಅಡಕೆ ಮತ್ತು ಕೊಕೊ ಬೆಳೆದ ಕೃಷಿಕರ ಜೀವನದಲ್ಲಿ ಆತಂಕ ನಿರ್ಮಾಣವಾಗಿದೆ. ಮುಂದಿನ ವರ್ಷಗಳಲ್ಲಿ ಪ್ರಕೃತಿ ಇದೇ ರೀತಿಯಲ್ಲಿ ಮುನಿಸಿಕೊಂಡರೆ ರೈತರು ಕೃಷಿಯನ್ನು ಬಿಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.